ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ

Update: 2017-05-25 09:37 GMT

ಹೊಸದಿಲ್ಲಿ, ಮೇ 25: ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಹೊಸ ಅರ್ಜಿದಾರರನ್ನು ಆಹ್ವಾನಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಬಿಸಿಸಿಐ ಗುರುವಾರ ಘೋಷಿಸಿದೆ. ಹಾಲಿ ಕೋಚ್ ಆಗಿರುವ ಅನಿಲ್ ಕುಂಬ್ಳೆಗೆ ನೇರ ಪ್ರವೇಶ ನೀಡಲಾಗಿದೆ.

 ಮುಖ್ಯ ಕೋಚ್ ಆಗಿ ಕುಂಬ್ಳೆ ಅವರ ಅಧಿಕಾರದ ಅವಧಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಕೊನೆಗೊಳ್ಳಲಿದೆ. 2013ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ್ದ ಭಾರತ ಈಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಚಾಂಪಿಯನ್ಸ್ ಟ್ರೋಫಿ ಜೂ.1 ರಿಂದ 18ರ ತನಕ ನಡೆಯಲಿದೆ.

  ಭಾರತದ ಪುರುಷರ ತಂಡದ ಮುಖ್ಯ ಕೋಚ್ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2017ರ ಮೇ 31ರೊಳಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು. ಕೋಚ್ ಆಯ್ಕೆಯು ಪಾರದರ್ಶಕವಾಗಿರಲಿದೆ. ಆಡಳಿತಾಧಿಕಾರಿಗಳ ಸಮಿತಿಯು ಕ್ರಿಕೆಟ್ ಸಲಹಾ ಸಮಿತಿಯೊಂದಿಗೆ ಇಡೀ ಪ್ರಕ್ರಿಯೆಯನ್ನು ನೋಡಿಕೊಳ್ಳಲಿದೆ. ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅಭ್ಯರ್ಥಿಯ ಸಂದರ್ಶನ ನಡೆಸಲಿದೆ. ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆೆ ಎಂದು ಬಿಸಿಸಿಐ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಭಾರತದ ಮಾಜಿ ನಾಯಕ ಹಾಗೂ ದೇಶದ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಕುಂಬ್ಳೆ 2016ರ ಜೂ.23 ರಂದು ಒಂದು ವರ್ಷದ ಅವಧಿಗೆ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು. ಕಳೆದ ವರ್ಷದ ಜುಲೈನಲ್ಲಿ ಭಾರತ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲು ವೆಸ್ಟ್‌ಇಂಡೀಸ್‌ಗೆ ತೆರಳಿದ್ದ ಸಂದರ್ಭದಲ್ಲಿ ಕುಂಬ್ಳೆ ಕೋಚ್ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದರು.

ಕುಂಬ್ಳೆ ಕೋಚ್ ಆದ ಬಳಿಕ ಭಾರತ ತಂಡ ವೆಸ್ಟ್‌ಇಂಡೀಸ್, ನ್ಯೂಝಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿ ಜಯಿಸಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಂ.1 ತಂಡವಾಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತ್ತು. ಕುಂಬ್ಳೆ ಕೋಚಿಂಗ್‌ನಲ್ಲಿ ಭಾರತ ತಂಡ ನ್ಯೂಝಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News