ದಲಿತರ ಮನೆಯಲ್ಲಿ ಊಟದಬದಲು ನೆಂಟಸ್ತಿಕೆ ಬೆಳಸಲಿ: ಚಿಮೂ

Update: 2017-05-25 14:41 GMT

ಬೆಂಗಳೂರು, ಮೇ 25: ಮೇಲ್ವರ್ಗದವರು ದಲಿತರ ಮನೆಯಲ್ಲಿ ಊಟ ತಿನ್ನುವುದಕ್ಕಿಂತ ಮುಖ್ಯವಾಗಿ ಅವರ ಮನೆಯಿಂದ ಹೆಣ್ಣನ್ನು ತಂದು ನೆಂಟಸ್ತಿಕೆ ಬೆಳೆಸಿದರೆ ಮಾತ್ರ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಬಹುದು ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ತಿಳಿಸಿದ್ದಾರೆ.

ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃಪತುಂಗ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಜಾತಿ ಪದ್ಧತಿ ಇನ್ನೂ ಜೀವಂತವಾಗಿರುವುದು ವಿಷಾದನೀಯವಾಗಿದೆ. ಕೇವಲ ದಲಿತರ ಮನೆಗೆ ಹೋಗುವುದು ಹಾಗೂ ಅಲ್ಲಿ ಊಟ ಮಾಡುವುದರಿಂದ ಜಾತಿ ಅನಿಷ್ಟ ತೊಲಗುವುದಿಲ್ಲ. ಮೇಲ್ವರ್ಗ ಹಾಗೂ ದಲಿತರು ತಮ್ಮ ಗಂಡು-ಹೆಣ್ಣುಗಳನ್ನು ಕೊಟ್ಟು-ತಂದು ಮಾಡುವುದರಿಂದ ಜಾತಿಯನ್ನು ಹೋಗಲಾಡಿಸಬಹುದು ಎಂದು ಅವರು ಹೇಳಿದರು.

 ಕ್ರಿ.ಶ.6, 7ನೆ ಶತಮಾನದಲ್ಲಿ ಕನ್ನಡದ ಜಗತ್ತು ಮಹಾರಾಷ್ಟ್ರದ ನಾಸಿಕ್‌ವರೆಗೂ ವಿಸ್ತರಿಸಿತ್ತು. ಹಾಗೆ ನೋಡಿದರೆ ಕರ್ನಾಟಕದ ರಾಜಧಾನಿ ಬೆಳಗಾವಿ ಆಗಬೇಕಾಗಿತ್ತು. ಆದರೆ, ಹಲವು ಕಾರಣಗಳಿಂದಾಗಿ ಕನ್ನಡ ಭೂ ಪ್ರದೇಶವನ್ನು ಕಳೆದುಕೊಳ್ಳುತ್ತಾ ಬಂದು, ಈಗ ಬೆಳಗಾವಿ ನಮ್ಮ ಕೈತಪ್ಪುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇತಿಹಾಸವನ್ನು ಅರಿಯದವರು ಭವಿಷ್ಯವನ್ನು ರೂಪಿಸಲಾರರು. ಹೀಗಾಗಿ ಕನ್ನಡ ಇತಿಹಾಸವನ್ನು ತಿಳಿಯುವ ಮೂಲಕ ಸುಭದ್ರ ಕನ್ನಡ ನಾಡನ್ನು ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಕಂಕಣ ಬದ್ಧನಾಗಬೇಕು. ಬೆಳಗಾವಿಯನ್ನು ರಕ್ಷಿಸುವ ಸಲುವಾಗಿ ಎಲ್ಲ ರೀತಿಯ ತ್ಯಾಗಕ್ಕೂ ನಾವು ಸಿದ್ಧರಾಗಬೇಕೆಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News