×
Ad

ನೋಟಿಸ್‌ಗೆ ಸಹಕರಿಸದಿದ್ದರೆ ಅಂಗಡಿಗೆ ಬೀಗ ಹಾಕಿ ಕಾಮಗಾರಿ ನಡೆಸಿ: ಕೆ.ಜೆ.ಜಾರ್ಜ್

Update: 2017-05-25 21:46 IST

ಬೆಂಗಳೂರು, ಮೇ 25: ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಟೆಂಡರ್‌ಶ್ಯೂರ್ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಸಹಕರಿಸದ ಸ್ಥಳೀಯರಿಗೆ ನೋಟಿಸ್ ನೀಡಿ, ಅದಕ್ಕೂ ಒಪ್ಪದಿದ್ದರೆ ಅಂಗಡಿಗಳನ್ನು ಮುಚ್ಚಿಸಿ ಕಾಮಗಾರಿ ನಡೆಸಿ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 ಗುರುವಾರ ನಗರದ ಚರ್ಚ್‌ಸ್ಟ್ರೀಟ್ ರಸ್ತೆ, ಕಲಾಸಿಪಾಳ್ಯ ಹಾಗೂ ಕಿನೋ ಥಿಯೇಟರ್ ಬಳಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಸಚಿವ ಕೆ.ಜೆ.ಜಾರ್ಜ್, ಮೇಯರ್ ಜಿ.ಪದ್ಮಾವತಿ ಹಾಗೂ ಆಯುಕ್ತ ಎನ್.ಮಂಜುನಾಥ್ ಪ್ರಸಾದ್‌ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಗರದಲ್ಲಿ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಟೆಂಡರ್‌ಶ್ಯೂರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಇಲ್ಲಿನ ಸ್ಥಳೀಯ ಅಂಗಡಿ ಮಾಲಕರು ಕಾಮಗಾರಿಗೆ ಸಹಕರಿಸದೇ ಇರುವುದು ನನ್ನ ಗಮನಕ್ಕೆ ಬಂದಿದೆ. ಅಂತಹವರ ಅಂಗಡಿಗಳನ್ನು ಮುಚ್ಚಿಸಿ, ಕಾಮಗಾರಿ ನಡೆಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಸ್ತೆಯನ್ನು ಸ್ಥಳೀಯರ ಅನುಕೂಲಕ್ಕಾಗಿ ಉತ್ತಮ ದರ್ಜೆಗೇರಿಸುತ್ತಿರುವುದೇ ಹೊರತು ನಮಗಾಗಿ ಅಲ್ಲ. ಇಲ್ಲಿನ ರಸ್ತೆ ಅಭಿವೃದ್ಧಿಯಾದರೆ ಸ್ಥಳೀಯ ಅಂಗಡಿಗಳ ವ್ಯಾಪಾರ-ವಹಿವಾಟು ಇನ್ನಷ್ಟು ಜಾಸ್ತಿಯಾಗಲಿದೆ. ಆಗ ಅಂಗಡಿಯವರು ಪಾಲಿಕೆಗೆ ಹೆಚ್ಚಿನ ತೆರಿಗೆ ನೀಡುತ್ತಾರಾ ಎಂದು ಪ್ರಶ್ನಿಸಿದ ಅವರು, ಕಾಮಗಾರಿ ಮುಗಿಯುವವರೆಗೂ ತಾಳ್ಮೆಯಿಂದ ಇರಬೇಕು ಎಂದರು.

ಗುತ್ತಿಗೆದಾರರು ಕಾಮಗಾರಿಯನ್ನು ನಿಧಾನವಾಗಿ ಮಾಡುತ್ತಿರುವುದನ್ನು ಕಂಡು ಕಿಡಿಕಾರಿದ ಸಚಿವ ಜಾರ್ಜ್, ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ, ನಡೆಯುತ್ತಿರುವ ಕಾಮಗಾರಿ ವೇಗ ನೋಡಿದರೆ ನಿಗದಿತ ಅವಧಿಯೊಳಗೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆದುದರಿಂದ ಮೂರು ಪಾಳಿಯಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಮುಗಿಯಬೇಕು ಎಂದು ಅವರು ಸೂಚಿಸಿದರು.

ಒಂದು ತಿಂಗಳಲ್ಲಿ ಪೂರ್ಣ: ಕಿನೋ ಥಿಯೇಟರ್ ಬಳಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿದ ಸಚಿವರು, ಮಳೆಗಾಲದಲ್ಲಿ ಈ ರಸ್ತೆಯು ಪ್ರವಾಹದಂತೆ ಪರಿವರ್ತನೆಯಾಗುತ್ತದೆ. ಆದುದರಿಂದ ರಾಜಕಾಲುವೆಯಲ್ಲಿನ ನೀರನ್ನು ಮಂತ್ರಿಮಾಲ್ ಬಳಿಯ ರಾಜಕಾಲುವೆಗೆ ಹರಿಸುವ ಉದ್ದೇಶದಿಂದ ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಕಿನೋ ಥಿಯೇಟರ್ ಬಳಿ ರೈಲ್ವೆ ಕೆಳ ಸೇತುವೆಯಿಂದ ಮಂತ್ರಿ ಮಾಲ್ ಬಳಿ ರಾಜಕಾಲುವೆ ವರೆಗೂ 820 ಮೀಟರ್ ಉದ್ದದ ಪೈಪು ಅಳವಡಿಕೆ ಕಾರ್ಯ ಆರಂಭಿಸಿದ್ದು, ಈಗಾಗಲೇ 515 ಮೀಟರ್ ಪೈಪು ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದ 300 ಮೀಟರ್‌ನಲ್ಲಿ ನಡೆಸಬೇಕಾದ ಕಾಮಗಾರಿಯನ್ನು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ.

ಶೇಷಾದ್ರಿಪುರ ಪೊಲೀಸ್ ಠಾಣೆ ಸಿಗ್ನಲ್‌ವರೆಗೂ ಕಾಮಗಾರಿ ಮುಗಿದಿದೆ. ಇನ್ನೂ 300 ಮೀಟರ್ ಬಾಕಿ ಉಳಿದಿರುವ ಕಾಮಗಾರಿ ನಡೆಸಲು ಒಂದೆರಡು ದಿನದ ಮಟ್ಟಿಗೆ ಶೇಷಾದಿಪುರ ಹಾಗೂ ಮಂತ್ರಿಮಾಲ್ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಬೇಕಾಗಿದೆ. ಈ ಕುರಿತು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

ಮಾರುಕಟ್ಟೆ ಅಭಿವೃದ್ಧಿ ಅಡಿಗಲ್ಲು

ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿಯಲ್ಲಿ ಕಲಾಸಿಪಾಳ್ಯ ಮಾರುಕಟ್ಟೆ ರಿಪೇರಿ ಮತ್ತು ಪುನರುಜ್ಜೀವನ ಕಾಮಗಾರಿ ಪ್ರಗತಿಗೆ ಸಚಿವ ಜಾರ್ಜ್ ಗುದ್ದಲಿ ಪೂಜೆ ನೆರವೇರಿಸಿದರು. ಶಿಥಿಲಗೊಂಡ ಮಳೆನೀರು ಪೈಪುಗಳು, ಕಿಟಕಿ ಮತ್ತು ಬಾಗಿಲುಗಳು ಪುನಃ ಅಳವಡಿಸುವುದು, ಮಾರುಕಟ್ಟೆ ಸುತ್ತ ಕಾಂಪೌಂಡ್ ಗೋಡೆ, ಶೌಚಾಲಯಗಳ ನಿರ್ಮಾಣ, ಮಳೆ ನೀರು ಚರಂಡಿ ಹೂಳು ತೆಗೆದು ಚರಂಡಿ ನಿರ್ಮಿಸುವುದು ಹಾಗೂ ಕೊಳವೆ ಬಾವಿ ಒಳಗೊಂಡಂತೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಒಟ್ಟು 10 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಗತಿ ಕಾರ್ಯ ನಡೆಯಲಿದ್ದು, 8 ತಿಂಗಳೊಳಗೆ ಕಾಮಗಾರಿ ಮುಗಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News