ಮಾಧ್ಯಮಗಳಿಂದ ಮೋದಿ ಪರ ಬಿಟ್ಟಿ ಪ್ರಚಾರ: ಎಚ್.ಡಿ.ದೇವೇಗೌಡ ಆಕ್ರೋಶ

Update: 2017-05-26 14:18 GMT

ಬೆಂಗಳೂರು, ಮೇ 26: ಅಸ್ಸಾಂನ ಧೋಲಾ, ಅರುಣಾಚಲ ಪ್ರದೇಶದ ಸದಿಯಾ ನಡುವೆ ಸಂಪರ್ಕ ಕಲ್ಪಿಸುವ ದೇಶದ ಅತಿ ಉದ್ದನೆಯ ಸೇತುವೆಯ ನಿರ್ಮಾಣ ಕಾರ್ಯದಲ್ಲಿ ಹಲವು ಪ್ರಧಾನಿಗಳ ಶ್ರಮವಿದೆ. ಆದರೆ ಈ ಸೇತುವೆಯ ನಿರ್ಮಾಣದ ಸಂಪೂರ್ಣ ಯಶಸ್ಸನ್ನು ಮಾಧ್ಯಮಗಳು ಈಗಿನ ಪ್ರಧಾನಿ ನರೇಂದ್ರ ಮೋದಿಗೆ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದ ಲಾಲ್‌ಬಾಗ್ ಆವರಣದಲ್ಲಿರುವ ಎಂ.ಎಚ್. ಮರೀಗೌಡ ಸ್ಮಾರಕ ಭವನದಲ್ಲಿ ಗ್ರಾಮೀಣ ನ್ಯಾಚುರಲ್ ಮತ್ತು ಗ್ರಾಮೀಣ ಕುಟುಂಬ ಆಯೋಜಿಸಿದ್ದ 5ನೆ ವರ್ಷದ ಸಿರಿಧಾನ್ಯ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ದೇಶದಲ್ಲಿ ಆಡಳಿತ ನಡೆಸಿದ ಎಲ್ಲಾ ಪ್ರಧಾನ ಮಂತ್ರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡುತ್ತಿವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ 9.3 ಕಿ.ಮೀ ಉದ್ದದ ಸೇತುವೆಗೆ ನನ್ನ ಅಧಿಕಾರ ಅವಧಿಯಲ್ಲಿ ಅನುಮೋದನೆ ಸಿಕ್ಕಿತ್ತು. ನಂತರ ಬಂದ ಪ್ರಧಾನ ಮಂತ್ರಿಗಳು ಸೇತುವೆ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದರು.

ಕೇವಲ ಮೂರು ವರ್ಷಗಳಲ್ಲಿ ಸೇತುವೆ ನಿರ್ಮಾಣವಾಗಿಲ್ಲ. ಸುದೀರ್ಘ ಅವಧಿಯಲ್ಲಿ ಸೇತುವೆ ನಿರ್ಮಾಣಗೊಂಡಿದೆ. ಆದರೆ ಮೋದಿ ನೇತೃತ್ವ ಸರಕಾರದ ಮೂರನೇ ವರ್ಷದ ಸಂಭ್ರಮಾಚಣೆಯ ದಿನವೇ ಈ ಸೇತುವೆ ಲೋಕಾರ್ಪಣೆ ಮಾಡುವ ಮೂಲಕ ತಾವೇ ನಿರ್ಮಾಣ ಮಾಡಿದಂತೆ ಬೀಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News