ತ್ರಿವಳಿ ತಲಾಕ್ ಮಾನವೀಯತೆಗೆ ವಿರುದ್ಧ: ಡಿ.ವಿ.ಸದಾನಂದಗೌಡ

Update: 2017-05-26 14:40 GMT

ಬೆಂಗಳೂರು, ಮೇ 26: ತ್ರಿವಳಿ ತಲಾಕ್ ಮಾನವೀಯತೆಗೆ ವಿರುದ್ಧ ಪ್ರಕ್ರಿಯೆ. ಸುಪ್ರೀಂಕೋರ್ಟ್ ಹಾಗೂ ಇಸ್ಲಾಮ್ ಧರ್ಮದ ಹಿರಿಯರು ಈ ಪದ್ಧತಿಯನ್ನು ವಿರೋಧಿಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಶುಕ್ರವಾರ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹಿಳೆಯರಿಗೆ ವಿಶೇಷ ಗೌರವ ಇರುವ ದೇಶ ಇದು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಲ್ಲರೂ ಗೌರವಿಸಬೇಕು. ಬಸವಣ್ಣನ ಕಾಲದಿಂದಲೂ ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ ದೇಶ ನಮ್ಮದು ಎಂದರು. ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ದೇಶಾದ್ಯಂತ ಗೋಹತ್ಯೆ ನಿಷೇಧ ಮಾಡಲಾಗಿದೆ. ಇದರಿಂದ ದೇಶ ಹಾಗೂ ಸಮಾಜಕ್ಕೆ ಒಳಿತಾಗಲಿದೆ ಎಂದು ಭಾವಿಸಿದ್ದೇನೆ. ಗೋವಿನಲ್ಲಿ 33 ಸಾವಿರ ದೇವರನ್ನು ಕಾಣುವ ದೇಶ ನಮ್ಮದು. ತ್ರಿವಳಿ ತಲಾಕ್‌ನಂತೆ ಗೋಹತ್ಯೆಯನ್ನು ವಿರೋಧಿಸುವವರು ಇದ್ದಾರೆ ಎಂದು ಸದಾನಂದಗೌಡ ಹೇಳಿದರು.

ಪಾರ್ವತಮ್ಮ ರಾಜ್‌ಕುಮಾರ್ ಇನ್ನೂ ಡಯಾಲಿಸಿಸ್‌ನಲ್ಲಿದ್ದಾರೆ. ವೈದ್ಯರು ಅವರ ಆರೋಗ್ಯವನ್ನು ಸುಧಾರಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಒಬ್ಬ ತಾಯಿಯಾಗಿ ಅವರ ಇರುವಿಕೆಯು ನಮಗೆಲ್ಲ ಶಕ್ತಿ. ಅವರು ಆದಷ್ಟು ಬೇಗ ಗುಣಮುಖರಾಗಲಿ ಅಂತ ಪ್ರಾರ್ಥನೆ ಮಾಡೋಣ ಎಂದು ರಾಜ್ಯದ ಜನತೆಗೆ ಕೇಳಿಕೊಳ್ಳುತ್ತೇನೆ ಎಂದು ಸದಾನಂದಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News