​ಕಳವು ಪ್ರಕರಣ: 7 ಜನರ ಬಂಧನ

Update: 2017-05-26 15:06 GMT

ಬೆಂಗಳೂರು, ಮೇ 26: ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಪ್ರಕರಣ ಸಂಬಂಧ ಏಳು ಜನರನ್ನು ಬಂಧಿಸಿರುವ ಶ್ರೀರಾಂಪುರ ಠಾಣಾ ಪೊಲೀಸರು, ಆರೋಪಿಗಳಿಂದ 3.20 ಲಕ್ಷ ರೂ.ನಗದು ವಶಕ್ಕೆ ಪಡೆದಿದ್ದಾರೆ.

ನಗರದ ಯಶವಂತಪುರದ ಯಾಸಿನ್ (30), ಅನಿಲ್ (22), ಗೌತಮ್ (26), ನಂದಿನಿ ಲೇಔಟ್‌ನ ಸಂತೋಷ್ (23), ನೆಲಮಂಗಲದ ಲೋಕೇಶ್ (21), ಚೇತನ್ (20), ರಾಜಗೋಪಾಲನಗರದ ಅರುಣ್ (21) ಹಾಗೂ ಗೊರಗುಂಟೆಪಾಳ್ಯದ ಸುರೇಶ್ ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ಆರ್‌ಎಂಸಿ ಯಾರ್ಡ್‌ನಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಫೈಝಲ್ ಮಂಡ್ಯದ ಅಂಗಡಿಗಳಿಗೆ ಬೇಳೆ ಸರಬರಾಜು ಮಾಡಿದ್ದ 7 ಲಕ್ಷ ರೂ.ಗಳನ್ನು ಪಡೆದುಕೊಂಡು ಕಳೆದ ಮೇ 11 ರಂದು ಮಧ್ಯಾಹ್ನ 2:30ರ ವೇಳೆ ನಗರಕ್ಕೆ ಬರಲು ಮಂಡ್ಯದ ಸಿಟಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ ಬೆದರಿಸಿ ಸುಲಿಗೆ ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.

ಇದಲ್ಲದೆ, ಆರೋಪಿ ಸಂತೋಷ್ ಎಪ್ರಿಲ್ 28 ರಂದು ಯಶವಂತಪುರದಲ್ಲಿ ಒಂಟಿ ಮಹಿಳೆಯೊಬ್ಬರ ಮನೆಗೆ ಮನೆ ಬಾಡಿಗೆ ಕೇಳುವ ನೆಪದಲ್ಲಿ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ 15 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತರಿಂದ 13 ಗ್ರಾಂ ತೂಕದ ಚಿನ್ನದ ಸರ, ಎರಡು ಬೈಕ್ ಸೇರಿ 3.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News