ಎಸ್ಸಿ ಎಸ್ಟಿ ಕಾಲನಿಗಳ ನೀರಿನ ಬಾಕಿ ಬಿಲ್ ಮನ್ನಾ: ಸಿಎಂ ಸಿದ್ದರಾಮಯ್ಯ ಘೋಷಣೆ

Update: 2017-05-26 17:30 GMT

ಬೆಂಗಳೂರು, ಮೇ 26: ಬಿಬಿಎಂಪಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಗಳ ನಿವಾಸಿಗಳಿಗೆ ಮಾಸಿಕ 10 ಸಾವಿರ ಲೀ.ನೀರು ಉಚಿತ ವಿತರಣೆಯ ಜೊತೆಗೆ ಬಾಕಿರುವ ನೀರಿನ ಬಿಲ್‌ನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಶುಕ್ರವಾರ ನಗರದ ಅಂಬೇಡ್ಕರ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಬಿಎಂಪಿ ವ್ಯಾಪ್ತಿಯೊಳಗಿನ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳಿಗೆ ಉಚಿತ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿರುವ ನೀರಿನ ಸಂಪರ್ಕಗಳ ಪಟ್ಟಿಗೆ ಜಲಮಂಡಳಿಗೆ ಸೂಚಿಸಲಾಗಿದೆ. ಈ ಸರ್ವೆ ಪೂರ್ಣಗೊಂಡು ವರದಿ ಕೈ ಸೇರಿದ ಬಳಿಕ ಉಚಿತ ನೀರು ಸರಬರಾಜು ಮತ್ತು ಬಾಕಿ ಉಳಿಸಿಕೊಂಡಿರುವ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದರು.

2006-07ನೆ ಸಾಲಿನಲ್ಲಿ ಆಗೀನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಿಬಿಎಂಪಿ ವಿಸ್ತೀರ್ಣವನ್ನು 220 ಕಿ.ಮೀ ನಿಂದ 800 ಕಿ.ಮೀ.ಗೆ ಹೆಚ್ಚಿಸಿದರು. ಆದರೆ ಈ ಭಾಗಗಳಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸಿರಲಿಲ್ಲ. ಕೆಲ ದಿನಗಳಿಂದೆ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿದೆ. ನಗರದಲ್ಲಿ ಮೂಲಭೂತ ಸೌಕರ್ಯಗಳಿಗೆ ಐದು ವರ್ಷಗಳಲ್ಲಿ 7,300 ಕೋಟಿ ರೂ ಅನುದಾನ ನೀಡಲಾಗಿದೆ ಎಂದರು.

ನಗರದ ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳು 24 ಕೋಟಿ ರೂ.ನೀರಿನ ಬಿಲ್‌ ಜೊತೆಗೆ 16 ಕೋಟಿ ರೂ.ಗಳ ಬಡ್ಡಿಯನ್ನು ಉಳಿಸಿಕೊಂಡಿದ್ದರು. ಈ ಕುರಿತು ಜಲಮಂಡಳಿ ಬಜೆಟ್‌ಗೂ ಮುನ್ನಾ ಸರಕಾರಕ್ಕೆ ವರದಿ ನೀಡಿತ್ತು. ಕೊಳಚೆ ಪ್ರದೇಶದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಾಕಿ ಬಿಲ್‌ನ್ನು ಮನ್ನಾ ಮಾಡಿ, ಮಾಸಿಕ 10 ಸಾವಿರ ಕುಡಿಯುವ ನೀರನ್ನು ಉಚಿತವಾಗಿ ಪೂರೈಕೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆ ಘೋಷಣೆ ಈಗ ಕಾರ್ಯರೂಪಕ್ಕೆ ಬಂದಿದೆ ಎಂದರು.

ಕುಡಿಯುವ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬರು ಮಳೆ ನೀರು ಕೋಯ್ಲು ಮಾಡಿದರೆ ನೀರಿನ ಕೊರತೆಯನ್ನು ನೀಗಿಸಬಹುದು ಎಂದು ಕಿವಿಮಾತು ಹೇಳಿದರು.

3,000 ಹೊಸ ಬಸ್: ನಗರದಲ್ಲಿ ಸಾರಿಗೆ ವ್ಯವಸ್ಥೆ ಸುಧಾರಿಸಲು 3,000ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಮೆಟ್ರೊ ರೈಲಿನ ಎರಡನೆ ಹಂತದ ಕಾಮಗಾರಿ ಪೂರ್ಣಗೊಂಡರೆ ಪ್ರತಿನಿತ್ಯ 5 ಲಕ್ಷ ಮಂದಿ ಪ್ರಯಾಣ ಬೆಳೆಸಬಹುದು. ಇದರ ಜೊತೆಗೆ ನಗರಕ್ಕೆ ಸಬ್‌ಅರ್ಬನ್ ರೈಲು ಬರಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ದಿನೇಶ್ ಗುಂಡೂರಾವ್, ಸುರೇಶ್ ಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಮೇಯರ್ ಪದ್ಮಾವತಿ, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಸೇರಿದಂತೆ ಇತರರು ಇದ್ದರು.

ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಚಿಸಿರುವ ಸ್ಪೀಕರ್ ಕೆ.ಬಿ. ಕೋಳಿವಾಡ ನೇತೃತ್ವದಲ್ಲಿ ಕೆರೆ ಒತ್ತುವರಿ ಪತ್ತೆ ಕುರಿತ ಸದನ ಸಮಿತಿ ವರದಿ ಸಲ್ಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

-ಸಿದ್ದರಾಮಯ್ಯ,ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News