ಕಳೆದ ಹಬ್ಬಕ್ಕೆ ನಾನೇ ಒಂದು ಸೀರೆ ಖರೀದಿಸಿ ಮಗ ಕಳಿಸಿದ್ದು ಎಂದು ಆಕೆಗೆ ಹೇಳಿದೆ : ರಫೀಕ್ ಶೇಖ್

Update: 2017-05-27 08:45 GMT

ನನ್ನ ಪತ್ನಿಗೆ ಆಚೀಚೆ ಹೋಗಲು ತುಂಬಾ ಕಷ್ಟವಾಗುತ್ತದೆ. ಇದೇ ಕಾರಣದಿಂದ ನಾನೇ ಅಡುಗೆ ಮಾಡುತ್ತೇನೆ. ನಮ್ಮಿಬ್ಬರಿಗೆ ನಾನು ಅಡುಗೆ ಮಾಡಬೇಕಿದೆ. ಅದು ಕಷ್ಟವೇನಿಲ್ಲ. ಆದರೆ ನನ್ನ ಪತ್ನಿಯನ್ನು ಯಾವತ್ತೂ ಹಾಸಿಗೆಯಲ್ಲಿ ಮಲಗಿಕೊಂಡೇ ಇರುವುದನ್ನು ನೋಡಲು ಕಷ್ಟವಾಗುತ್ತದೆ.

ಇದಕ್ಕೆಂದೇ ನಾನು ಸಣ್ಣ ಆರಾಮ ಕುರ್ಚಿಯೊಂದನ್ನು ತಂದು ಅಡುಗೆ ಮನೆ ಪಕ್ಕ ಇಟ್ಟಿದ್ದೇನೆ. ನಾನು ಅಡುಗೆ ಮಾಡುವ ಸಮಯದಲ್ಲಿ ಆಕೆಯನ್ನು ಈ ಕುರ್ಚಿಯಲ್ಲಿ ಕೂರಿಸಿ ಅಡುಗೆ ಹೇಗೆ ಮಾಡುವುದೆಂದು ಹೇಳಲು ಆಕೆಯಲ್ಲಿ ಹೇಳುತ್ತೇನೆ. ಆಕೆ ನಕ್ಕು ನಾನು ಹೇಗೆ ಸಣ್ಣ ಸಣ್ಣ ವಿಷಯಗಳನ್ನು ಮರೆತು ಬಿಡುತ್ತೇನೆ ಎನ್ನುತ್ತಾಳೆ.

ನನಗೆ ನೆನಪಿಸಲು ಆಕೆ ಇರುವ ತನಕ ನಾನು ಮರೆಯುತ್ತಲೇ ಇರುತ್ತೇನೆ ಎಂದು ನಾನು ಆಕೆಗೆ ಹೇಳುತ್ತೇನೆ. ಆಗ ಆಕೆ ನನ್ನನ್ನು ಚಿವುಟಿ ಬಹಳ ಬೇಗನೇ ನಾನೇ ನೆನಪಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾಳೆ. ಅದಕ್ಕೆ ನಾನು ಉತ್ತರ ನೀಡುವುದಿಲ್ಲ. ಪಲ್ಯಕ್ಕೆ ಹಸಿ ಮೆಣಸು ಏಕೆ ಹಾಕುತ್ತಿಲ್ಲ ಎಂದು ಆಕೆ ನನ್ನನ್ನು ಕೇಳುತ್ತಾಳೆ. ಖಾರದ ವಸ್ತು ಆಕೆಗೆ ನಿಷಿದ್ಧ ಎಂಬುದನ್ನು ನಾನು ಆಕೆಗೆ ನೆನಪಿಸುತ್ತೇನೆ. ಪದಾರ್ಥದಲ್ಲಿ ಮೆಣಸು ಹಾಕದೆ ಆರು ವರ್ಷಗಳಾಗಿವೆ.

ಕೆಲವೊಮ್ಮೆ ನಾವು ಜಗಲಿಗೆ ಹೋದಾಗ ನಡೆದಾಡಬೇಕೆಂದು ತನಗೆಷ್ಟು ಅನಿಸುತ್ತದೆ ಎಂದು ಆಕೆ ಹೇಳುತ್ತಾಳೆ. ನಾನು ಉತ್ತರ ನೀಡದೆ ಸುಮ್ಮನೆ ಆಕೆಯ ಬಳಿ ಕುಳಿತುಕೊಳ್ಳುತ್ತೇನೆ, ನಮ್ಮ ಪ್ರೀತಿ ಪಾತ್ರರಿಗೆ ಸುಳ್ಳು ಹೇಳುವುದು ತುಂಬಾ ನೋವು ನೀಡುತ್ತದೆ. ಕಳೆದ ಹಬ್ಬದಂದು ನಾನು ಆಕೆಗೆ ಸೀರೆಯೊಂದನ್ನು ಖರೀದಿಸಿ ಅದನ್ನು ನಗರದಲ್ಲಿರುವ ನಮ್ಮ ಪುತ್ರ ಆಕೆಗಾಗಿ ಕಳುಹಿಸಿದ್ದು ಎಂದು ಹೇಳಿದೆ. ಇಡೀ ದಿನ ಆ ಸೀರೆಯನ್ನು ಆಕೆ ಎದೆಗವಚಿಕೊಂಡಿದ್ದಳು.

ಕಪಾಟಿನಲ್ಲಿಡಲು ಸೀರೆಯನ್ನು ನನಗೆ ನೀಡುವಂತೆ ಹೇಳಿದಾಗ ಆಕೆ ಕೊಡಲಿಲ್ಲ. ರಾತ್ರಿ ಊಟ ಮಾಡುವಾಗ ಆಕೆ ‘‘ನೀವೇಕೆ ನನಗೆ ಪ್ರತಿ ಬಾರಿ ಬಿಳಿ ಸೀರೆ ಖರೀದಿಸುತ್ತೀರೆ?’’ ಎಂದು ಪ್ರಶ್ನಿಸಿದಿಳು. ನನಗೆ ಆಕೆಯ ಕಣ್ಣುಗಳನ್ನು ದಿಟ್ಟಿಸಲಾಗಲಿಲ್ಲ ಹಾಗೆ ದಿಟ್ಟಿಸಿದರೆ ಆಕೆ ನಿಜ ತಿಳಿದು ಬಿಡುತ್ತಾಳೆಂಬ ಭಯ. ‘‘ನೀವು ನನಗೆ ಯಾವತ್ತೂ ಸುಳ್ಳು ಹೇಳಲು ಸಾಧ್ಯವಿಲ್ಲ’ಎಂದಾಕೆ ಹೇಳುತ್ತಾಳೆ. ಹೌದು, ನನಗಾಗದು. ಆಕೆ ಅದೆಷ್ಟು ಕಾಲ ಬದುಕುತ್ತಾಳೆ ಎಂದು ನನಗೆ ತಿಳಿಯದಾಗಿದೆ. ಆದರೆ ಆಕೆ ನನ್ನೊಂದಿಗೆ ಯಾವತ್ತೂ ಇರಬೇಕೆಂದು ನನ್ನ ಇಚ್ಛೆ.

ನೋವನ್ನನುಭವಿಸುವ ಬದಲು ಸಾಯುವುದು ಲೇಸು ಎಂದು ಜನರು ಹೃದಯವಂತಿಕೆಯಿಲ್ಲದೆ ಹೇಳುತ್ತಾರೆ. ಆದರೆ ಇದು ಆಕೆಗೆ ತಿಳಿಯದಂತೆ ನಾನು ನೋಡಿಕೊಳ್ಳುತ್ತೇನೆ. ಕೊನೆಯವರೆಗೆ ಆಕೆ ನನ್ನ ಜತೆ ಇರಬೇಕೆಂದು ನನಗೆ ಆಸೆ. ಹೊರ ಹೋಗುವಾಗ ನಾನು ಹೊರಗಿನಿಂದ ಬೀಗ ಹಾಕಿ ಹೋಗುತ್ತೇನೆ. ಹಿಂದೆ ಬಂದಾಗ ಭಯದಿಂದ ನಡುಗುತ್ತಲೇ ಬಾಗಿಲು ತೆರೆಯುತ್ತೇನೆ. ಆಕೆ ಚೆನ್ನಾಗಿದ್ದಾಳೆಂದು ತಿಳಿಯುವ ತವಕ ಆಕೆ ಎಚ್ಚರವಾಗಿದ್ದಾಳೆಯೇ ಎನ್ನುವ ಆತಂಕ. ‘‘ನೀವು ಮರಳಿ ಬಂದಿರೇನು?’’ ಎಂಬ ಆಕೆಯ ಮಾತು ಕೇಳುವ ತನಕ ನನ್ನ ಎದೆ ಜೋರಾಗಿ ಬಡಿದುಕೊಳ್ಳುತ್ತದೆ. ನತರ ಆಕೆ ನಮ್ಮ ದಶಕದಷ್ಟು ಹಳೆಯದಾದ ಹಾಸಿಗೆಯಲ್ಲಿ ಕುಳಿತುಕೊಂಡು ಏನಾಯಿತು ಎಂದು ಕೇಳುತ್ತಾಳೆ. ನಂತರ ನನ್ನ ಜಗತ್ತು ಸುರಕ್ಷಿತ ಎಂದು ನಾನಂದುಕೊಳ್ಳುತ್ತೇನೆ. ಆಕೆಯನ್ನು ಕಳೆದುಕೊಳ್ಳಲು ನನಗೆ ತುಂಬಾ ತುಂಬಾ ಭಯವಾಗುತ್ತದೆ ಎಂದು ಆಕೆಗೆ ಹೇಳಲು ಸಾಧ್ಯವಿಲ್ಲ, ನಝ್ಮಾ ಇನ್ನಿಲ್ಲದ ಜಗತ್ತಿನಲ್ಲಿ ಹೇಗೆ ಬದುಕುವುದೆಂದು ನನಗೆ ತಿಳಿಯದಾಗಿದೆ.

- ರಫೀಖ್ ಶೇಖ್ (70)

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News