ನಿರ್ದೇಶಕ ಚಲಪತಿ ಸೇರಿ ಐದು ಮಂದಿ ಬಂಧನ

Update: 2017-05-27 13:00 GMT

ಬೆಂಗಳೂರು, ಮೇ 27: ಜಾಹೀರಾತು ಪ್ರಚಾರಕ ಪರಮೇಶ್ ಎಂಬವರನ್ನು ಅಪಹರಿಸಿ ಹಲ್ಲೆ ನಡೆಸಿ ತೋಟದ ಮನೆಯಲ್ಲಿ ಕೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಇಲ್ಲಿನ ಮಾಗಡಿ ರೋಡ್ ಠಾಣಾ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸಿನಿಮಾ ನಿರ್ದೇಶಕ ಬಸವೇಶ್ವರ ನಗರದ ಚಲಪತಿ (34), ಆತನ ಸಹಚರರಾದ ಕೆ.ಆರ್.ಪುರಂ ಕಿರಣ್ (32), ಶೆಟ್ಟಿಗೆರೆಯ ಮೂರ್ತಿ (33), ಮೋಹನ್ (32), ಜಾಲಹೋಬಳಿ ಕಾಡಯರಪ್ಪನಹಳ್ಳಿ ಮದನ್ (31) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕಾರು, 5 ಮೊಬೈಲ್‌ಗಳು, ಪರಮೇಶ್ವರ್ ಅವರಿಂದ ಸುಲಿಗೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರಮುಖ ಆರೋಪಿ ಚಲಪತಿ, ವೇಗ ಚಿತ್ರದ ನಿರ್ದೇಶನ ಮಾಡುತ್ತಿದ್ದ. ಎರಡು ಕನಸು ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕನಾದ ಆರೋಪಿ, ಮದನ್ ಸಲಹೆಯಂತೆ ತನ್ನ ಸಿನಿಮಾದ ಜಾಹೀರಾತು ಪ್ರಚಾರವನ್ನು 16 ಲಕ್ಷ ರೂ.ಗಳಿಗೆ ಪರಮೇಶ್ವರ್‌ಗೆ ನೀಡಿದ್ದ. ಆದರೆ, ಪರಮೇಶ್ ವೇಗ ಸಿನಿಮಾಕ್ಕೆ ಸರಿಯಾಗಿ ಪ್ರಚಾರ ಮಾಡಿಲ್ಲ ಎಂದು ಜಗಳ ತೆಗೆದ ಚಲಪತಿ, 8 ಲಕ್ಷ ರೂ.ವಾಪಸ್ಸು ಕೊಡುವಂತೆ ಕೇಳಿದ್ದರು. ಪ್ರಚಾರಕ್ಕಾಗಿ ಈಗಾಗಲೇ 13 ಲಕ್ಷ ರೂ.ಖರ್ಚಾಗಿದ್ದು, ಉಳಿದ 3 ಲಕ್ಷ ರೂ.ಹಣವನ್ನು ಬಾಕಿ ಇರುವ ಪ್ರಚಾರಕ್ಕಾಗಿ ಬಳಸಿಕೊಳ್ಳುವುದಾಗಿ ಹೇಳಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಗೊತ್ತಾಗಿದೆ. ಇದರಿಂದ ಕುಪಿತಗೊಂಡ ಪ್ರಮುಖ ಆರೋಪಿ ಚಲಪತಿ, ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಬಸವೇಶ್ವರನಗರದ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಮೇ 24ರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪರಮೇಶ್ ಅವರನ್ನು ಕಾರಿನಲ್ಲಿ ಅಪಹರಿಸಿ ದೇವನಹಳ್ಳಿ ಸಮೀಪದ ಕಾಡಯರಪ್ಪನ ಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಪರಮೇಶ್ವರ್ ಅವರನ್ನು ಮೂರು ದಿನಗಳ ಕಾಲ ಕ್ರಿಕೆಟ್ ಬ್ಯಾಟ್, ವಿಕೇಟ್‌ಗಳಿಂದ ಹಲ್ಲೆ ನಡೆಸಿದ್ದು, 8 ಲಕ್ಷ ರೂ. ಹಣ ನೀಡುವಂತೆ ಒತ್ತಾಯ ಮಾಡಿದ್ದರು. ಪರಮೇಶ್ವರ್ ದಿಢೀರ್ ನಾಪತ್ತೆ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಮೊಕದ್ದಮೆ ದಾಖಲಿಸಿಕೊಂಡು ಮಾಗಡಿ ರಸ್ತೆ ಠಾಣಾ ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಆರೋಪಿಗಳನ್ನು ಪತ್ತೆ ಮಾಡಿದ್ದು, ಅಪಹೃತ ಪರಮೇಶ್ವರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News