ಸರ ಅಪಹರಣ: ಇಬ್ಬರ ಬಂಧನ; 10 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2017-05-27 13:03 GMT

ಬೆಂಗಳೂರು, ಮೇ 27: ಒಂಟಿ ಮಹಿಳೆಯರಿಗೆ ಏರ್‌ಗನ್‌ನಿಂದ ಬೆದರಿಸಿ ಸರ, ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುತಿದ್ದ ಆರೋಪದ ಮೇಲೆ ಇಲ್ಲಿನ ರಾಜಗೋಪಾಲನಗರ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಆರೋಪಿಗಳಿಂದ ಹತ್ತು ಲಕ್ಷ ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಪೀಣ್ಯದ ಆಶ್ರಯ ನಗರದ ನಿವಾಸಿ ಪ್ರಶಾಂತ್ ಕುಮಾರ್ (32) ಹಾಗೂ ಪೀಣ್ಯ ಎಸ್‌ಆರ್‌ಎಸ್ ನಿವಾಸಿ ಮಹದೇವಸ್ವಾಮಿ (19) ಎಂದು ಗುರುತಿಸಲಾಗಿದೆ.

ಆರೋಪಿಗಳು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು. ಅಲ್ಲದೆ, ಕದ್ದ ವಾಹನಗಳಲ್ಲೆ ಒಂಟಿಯಾಗಿ ಸಂಚರಿಸುತ್ತಿದ್ದ ಮಹಿಳೆ ಮತ್ತು ಪುರುಷರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಂದ 115 ಗ್ರಾಂ ಚಿನ್ನಾಭರಣ, 9 ಬೈಕ್‌ಗಳು, 1 ಆಟೋ ರಿಕ್ಷಾ, ವಿವಿಧ ಕಂಪೆನಿಗಳ 23 ಮೊಬೈಲ್‌ ಫೋನ್‌ಗಳು ಸೇರಿದಂತೆ ಒಟ್ಟು 10 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ರಾಜಗೋಪಾಲನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದಿಂದ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಒಟ್ಟು 11ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳು ಏರ್‌ಗನ್, ಲೈಟರ್ ಗನ್, ಡ್ರಾಗರ್, ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದರೋಡೆ ಕೃತ್ಯ ನಡೆಸುತ್ತಿದ್ದರು ಎಂದು ಪೊಲೀಸರು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ರಾಜಗೋಪಾಲನಗರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News