ಮಿಲಿಯಾಂತರ ಪ್ರಜೆಗಳ ಜೀವನಾಧಾರಕ್ಕೆ ಕುತ್ತು ತರಬೇಡಿ: ಮೋದಿಗೆ ಪಿಣರಾಯಿ ವಿಜಯನ್ ಪತ್ರ

Update: 2017-05-27 15:46 GMT

ತಿರುವನಂತಪುರಂ, ಮೇ 27: ಹತ್ಯೆಗಾಗಿ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯನ್ನು ವಿರೋಧಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ಮೋದಿಗೆ ‘ಫೇಸ್‌ಬುಕ್’ನಲ್ಲಿ ಬಹಿಂಗ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದ ವಿವರ ಹೀಗಿದೆ: ಪ್ರಾಣಿಗಳಿಗೆ ಕ್ರೌರ್ಯ ತಡೆ(ಜಾನುವಾರು ಮಾರುಕಟ್ಟೆ ನಿಯಂತ್ರಣ) 2017ರ ಅನ್ವಯ ಜಾನುವಾರುಗಳನ್ನು ಕೃಷಿ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿದೆ ಎಂಬ ದಾಖಲೆ ಪತ್ರ ಹೊಂದಿರುವವರು ಮಾತ್ರ ಜಾನುವಾರುಗಳನ್ನು ಮಾರಾಟ ಮಾಡಬಹುದಾಗಿದೆ. ಈ ದೇಶದಲ್ಲಿರುವ ಮಿಲಿಯಗಟ್ಟಲೆ ಕೃಷಿಕರಲ್ಲಿ ಕೇವಲ ಬೆರಳೆಣಿಕೆಯಷ್ಟು ಕೃಷಿಕರು ಮಾತ್ರ ತಾವು ಕೃಷಿ ಕಾರ್ಯದಲ್ಲಿ ತೊಡಗಿರುವುದನ್ನು ದೃಢಪಡಿಸುವ ದಾಖಲೆಗಳನ್ನು ಹೊಂದಿದ್ದಾರೆ. ಆದ್ದರಿಂದ ದೇಶದ ಹೆಚ್ಚಿನ ಸಂಖ್ಯೆಯ ಕೃಷಿಕರಿಗೆ ತಮ್ಮ ಕೃಷಿ ಮತ್ತು ಇತರ ಮನೆಬಳಕೆಯ ಕಾರ್ಯಕ್ಕಾಗಿ ಜಾನುವಾರುಗಳನ್ನು ಖರೀದಿಸುವುದು ತ್ರಾಸದಾಯಕವಾಗಲಿದೆ.
  ಅಲ್ಲದೆ ಕಾಯ್ದೆಯ ಪ್ರಕಾರ ಜಿಲ್ಲಾ ಮಟ್ಟದಲ್ಲಿ ಜಾನುವಾರು ಮಾರುಕಟ್ಟೆ ಮೇಲ್ವಿಚಾರಣೆ ಸಮಿತಿ ಮತ್ತು ಜಾನುವಾರು ಮಾರುಕಟ್ಟೆ ಸಮಿತಿ ರಚಿಸಲಾಗುವುದು. ಜಾನುವಾರು ವ್ಯಾಪಾರದ ಮೇಲ್ವಿಚಾರಣೆಗಾಗಿ ಇಂತಹ ಸಮಿತಿ ರಚಿಸುವುದರಿಂದ ಇದುವರೆಗೆ ಸಲೀಸಾಗಿ, ಸರಳವಾಗಿ ನಡೆಯುತ್ತಿದ್ದ ಜಾನುವಾರು ವ್ಯಾಪಾರವನ್ನು ಇಕ್ಕಟ್ಟಿಗೆ ತಳ್ಳಿದಂತಾಗುತ್ತದೆ. ಅಲ್ಲದೆ ಇತ್ತೀಚೆಗೆ ದೇಶದೆಲ್ಲೆಡೆ ಜಾನುವಾರು ವ್ಯಾಪಾರಿಗಳ ಮೇಲೆ ‘ಗೋರಕ್ಷಕರ’ ಹೆಸರಿನಲ್ಲಿ ನಡೆಯುತ್ತಿದ್ದ ಹಲ್ಲೆ ಮಿತಿಮೀರಿದೆ. ಸಮಿತಿಯ ಪದಾಧಿಕಾರಿಗಳು ಕಾನೂನಿನ ರಕ್ಷಣೆಯಲ್ಲಿ ಗೋರಕ್ಷಕರ ರೀತಿ ವತಿರ್ಸಬಹುದೇ ಎಂಬ ಭಯವೂ ಇಲ್ಲಿ ಕಾಡುತ್ತಿದೆ.

     ಮಾಂಸವು ಈ ದೇಶದ ಮಿಲಿಯಗಟ್ಟಲೆ ಬಡವರ, ಜನಸಾಮಾನ್ಯರ, ಅದರಲ್ಲೂ ಪ್ರಮುಖವಾಗಿ ದಲಿತರಿಗೆ ಸುಲಭವಾಗಿ ದೊರಕುವ ಪೌಷ್ಠಿಕ ಖಾದ್ಯವಾಗಿದೆ. ರಮಝಾನ್ ಸಂದರ್ಭದಲ್ಲಿ ಮಾಂಸದ ಮೇಲೆ ಈ ರೀತಿಯ ನಿರ್ಬಂಧ ವಿಧಿಸುವುದರಿಂದ ತಮ್ಮ ಮೇಲೆ ಸರಕಾರ ನೇರವಾಗಿ ಆಕ್ರಮಣ ನಡೆಸಿದೆ ಎಂದು ಕೆಲವು ಸಮುದಾಯದವರು ಭಾವಿಸಬಹುದು. ಅಲ್ಪಸಂಖ್ಯಾತರು ಮಾತ್ರವಲ್ಲ, ಎಲ್ಲಾ ಧರ್ಮೀಯರೂ ಈ ದೇಶದಲ್ಲಿ ಮಾಂಸವನ್ನು ಸೇವಿಸುತ್ತಾರೆ. ಈ ನಿರ್ಬಂಧ ಜಾರಿಗೆ ಬಂದರೆ ಸುಲಭದಲ್ಲಿ ದೊರಕುವ ಪೌಷ್ಠಿಕ ಖಾದ್ಯವನ್ನು ಜನರಿಂದ ಕಿತ್ತುಕೊಂಡಂತೆ ಆಗುವುದಲ್ಲದೆ ಚರ್ಮ ಉದ್ದಿಮೆಗೆ ಅಗತ್ಯವಾದ ಕಚ್ಛಾ ವಸ್ತು ಕೂಡಾ ಕೊರತೆಯಾಗಲಿದೆ. ಭಾರತದ 2.5 ಮಿಲಿಯನ್ ಜನರು ಚರ್ಮ ಕೈಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದು ಇವರಲ್ಲಿ ಹೆಚ್ಚಿನವರು ದಲಿತರು. ಆದ್ದರಿಂದ ಈ ನಿರ್ಬಂಧದಿಂದ ಹಿಂದುಳಿದ ವರ್ಗದ ಜನತೆಯ ಬದುಕು ಮತ್ತು ಜೀವನಾಧಾರದ ವೆುೀಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಮಾಂಸ ರಫ್ತು ಕ್ಷೇತ್ರದಲ್ಲಿ ಭಾರತವು ವಿಶ್ವದ ಅಗ್ರಗಣ್ಯ ರಾಷ್ಟ್ರವೆಂದು ಪರಿಗಣಿತವಾಗಿದೆ. ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧದಿಂದ ಮಾಂಸ ರಫ್ತಿಗೆ ತೊಂದರೆಯಾಗಲಿದೆ ಮತ್ತು ವಿದೇಶಿ ವಿನಿಮಯದಲ್ಲಿ ಭಾರೀ ಇಳಿಕೆಯಾಗಲಿದೆ. ಹೊಸ ಕಾಯ್ದೆಯಿಂದಾಗಿ ಕೇರಳದಲ್ಲಿರುವ ‘ಭಾರತೀಯ ಮಾಂಸ ಉತ್ಪನ್ನ ಸಂಸ್ಥೆ’ಯ ರೀತಿಯ ಹಲವಾರು ರಾಜ್ಯ ಸರಕಾರಿ ಅಧೀನದ ಮಾಂಸ ಸಂಸ್ಕರಣಾ ಉದ್ದಿಮೆಗಳು ವಿನಾಶದ ಅಂಚಿಗೆ ಸಾಗಲಿವೆ.
      
ಕೇರಳ ರಾಜ್ಯದಲ್ಲಿ ಹೆಚ್ಚಿನ ಜನತೆ ಮಾಂಸವನ್ನು ತಿನ್ನುವವರು. ಇದೇ ರೀತಿ ಇತರ ದಕ್ಷಿಣ ಭಾರತದ ರಾಜ್ಯಗಳ, ಈಶಾನ್ಯ ರಾಜ್ಯಗಳ ಜನರು ಬಹುತೇಕ ಮಾಂಸವನ್ನು ಸೇವಿಸುವವರು. ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗೋವಾ, ಜಮ್ಮು-ಕಾಶ್ಮೀರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಪ.ಬಂಗಾಲ ಇತ್ಯಾದಿ ರಾಜ್ಯಗಳಲ್ಲಿ ಮಾಂಸಾಹಾರಿಗಳ ಸಂಖ್ಯೆ ಅಧಿಕವಾಗಿದೆ. ಆದ್ದರಿಂದ ರಾಜ್ಯಗಳೊಂದಿಗೆ ಸಮಾಲೋಚಿಸಿದ ಬಳಿಕ ಹೊಸ ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕಿದೆ. ಇಂತಹ ತೀವ್ರ ಪರಿಣಾಮ ಬೀರುವ ಕ್ರಮ ಕೈಗೊಳ್ಳುವ ಮೊದಲು ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆಯದೆ ಇರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ನಡೆಯಾಗಿದೆ ಹಾಗೂ ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ನೀಡಲಾಗಿರುವ ಅಧಿಕಾರಕ್ಕೆ ವಿರುದ್ಧವಾಗಿದೆ. ತರಾತುರಿಯಲ್ಲಿ ಈ ರೀತಿಯ ನಿರ್ಬಂಧವನ್ನು ಜಾರಿಗೊಳಿಸಿರುವುದು ನಮ್ಮ ರಾಷ್ಟ್ರದ ವೈಶಿಷ್ಟವಾದ ಬಹುತ್ವಕ್ಕೆ ಒಡ್ಡಿರುವ ಸವಾಲಾಗಿದೆ. ಅಲ್ಲದೆ ನಮ್ಮ ಸಂವಿಧಾನದಲ್ಲಿ ಹೇಳಲಾಗಿರುವ ಜಾತ್ಯಾತೀತ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಆದ್ದರಿಂದ ಹೊಸದಾಗಿ ಅನುಷ್ಠಾನಗೊಳಿಸಿರುವ ನಿರ್ಬಂಧಗಳನ್ನು ಹಿಂಪಡೆಯುವ ಮೂಲಕ ಮಿಲಿಯಾಂತರ ಪ್ರಜೆಗಳ ಜೀವನ ಮತ್ತು ಜೀವನಾಧಾರವನ್ನು ರಕ್ಷಿಸುವ ಮತ್ತು ಸಂವಿಧಾನದ ಮೂಲಭೂತ ಸಿದ್ದಾಂತಗಳನ್ನು ಸಂರಕ್ಷಿಸಬೇಕು ಎಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News