ಮುಂದುವರೆದ ವರುಣನ ಆರ್ಭಟ: ಬಿಳೇಕನಹಳ್ಳಿಯಲ್ಲಿ 50 ಮನೆಗಳಿಗೆ ನುಗ್ಗಿದ ನೀರು

Update: 2017-05-27 16:57 GMT

ಬೆಂಗಳೂರು, ಮೇ 26: ರಾಜಧಾನಿಯಲ್ಲಿ ನಿನ್ನೆಯಿಂದ ಶುರುವಾದ ಮಳೆಯ ಆರ್ಭಟ ಇಂದೂ ಮುಂದುವರೆದು, ಶನಿವಾರ ರಾತ್ರಿಯಿಡಿ ಸುರಿದ ಮಳೆಗೆ ಬಿಳೇಕನಹಳ್ಳಿಯಲ್ಲಿ ಸುಮಾರು 50 ಮನೆಗಳಿಗೆ ನೀರು ನುಗ್ಗಿದ್ದು, ಲೆಕ್ಕವಿಲ್ಲದಷ್ಟು ಮರಗಳು ನೆಲಕ್ಕುರುಳಿ, ವಿದ್ಯುತ್ ಕಂಬಗಳು ಮುರಿದುಬಿದ್ದ ಪರಿಣಾಮ ಹಲವೆಡೆ ಸಂಚಾರ ವ್ಯವಸ್ಥೆ ಹದಗೆಟ್ಟು, ಜನಜೀವನ ಅಸ್ತವ್ಯಸ್ತವಾಗಿದೆ.

ನಗರದ ಹೃದಯ ಭಾಗವಾದ ಕಾರ್ಪೋರೇಷನ್, ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಎಂ.ಎಸ್.ಬಿಲ್ಡಿಂಗ್, ಶಿವಾನಂದ ಸರ್ಕಲ್, ಶೇಷಾದ್ರಿಪುರಂ ಜಂಕ್ಷನ್, ಸುಲ್ತಾನ್‌ಪಾಳ್ಯ, ಬಿಟಿಎಂ ಲೇಔಟ್ ಸೇರಿದಂತೆ ನಗರದ ನಾನಾ ಕಡೆ ಮಳೆ ನೀರು ರಸ್ತೆ ತುಂಬಿ ಹರಿದು, ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಗಂಟೆಗಟ್ಟಲೆ ನಿಂತ ಜಾಗದಲ್ಲಿಯೇ ನಿಲ್ಲುವಂತಾಗಿತ್ತು.

ಬಿಳೇಕನಹಳ್ಳಿಯ ಸುಮಾರು 50 ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಹೊರಹಾಕಲು ಮನೆಯ ಜನ ಪರದಾಡುತ್ತಿದ್ದರು. ಮನೆ ಮಕ್ಕಳೆಲ್ಲ ಪಾತ್ರೆ ಹಿಡಿದು ನೀರನ್ನು ಹೊರಹಾಕಲು ಪ್ರಯಾಸಪಡುತ್ತಿದ್ದರು. ಆದರೆ ಬಿಬಿಎಂಪಿಯ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಸಂತ್ರಸ್ತರ ನೆರವಿಗೆ ಧಾವಿಸದಿರುವುದು, ಸಾವಜರ್ನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಕಲಾಸಿಪಾಳ್ಯ, ಬಂಬುಬಜಾರ್‌ಗಳಂತಹ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಲ್ಲಿಂದ ನೀರನ್ನು ಹೊರಹಾಕಲು ಮನೆ, ಅಂಗಡಿ ಮಾಲಕರು ಹರಸಾಹಸ ಪಡುತ್ತಿದ್ದರು.

ನಿನ್ನೆ ಬಿದ್ದ ಮಳೆಗೆ ಸಾರ್ವಜನಿಕರಿಂದ ಬಂದ ದೂರುಗಳು ಮತ್ತು ಬಿಬಿಎಂಪಿಯ ವಿರುದ್ಧ ಸಿಡಿದೆದ್ದ ಆಕ್ರೋಶದ ಪರಿಣಾಮವಾಗಿ, ಇಂದು ಬಿಬಿಎಂಪಿಯ ಕಂಟ್ರೋಲ್ ರೂಮಿಗೆ ಖುದ್ದು ಮೇಯರ್ ಪದ್ಮಾವತಿಯವರೇ ಆಗಮಿಸಿ, ಸಾರ್ವಜನಿಕರ ದೂರುಗಳನ್ನು ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿದ್ದು ವಿಶೇಷವಾಗಿತ್ತು.

ನಿನ್ನೆ ಬಿದ್ದ ಮಳೆ ಈ ಹಿಂದಿನ ದಾಖಲೆಗಳನ್ನು ಹಿಂದಕ್ಕೆ ಸರಿಸಿದ್ದು, ಸುಮಾರು 110 ಮಿಮಿ ಮಳೆ ಬಿದ್ದು ದಾಖಲೆ ಬರೆದಿದೆ ಎಂದು ಹವಾಮಾನ ಇಲಾಖೆಯ ಸುಂದರ್ ಮೇತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News