ಚಂಪಾರಣ್ಯ ಸತ್ಯಾಗ್ರಹ ಮತ್ತು ಬತಖ್ ಮಿಯಾ

Update: 2017-05-28 04:48 GMT

ಇರ್ವಿನ್ ಸಾಹೇಬನ ಆಮಿಷಕ್ಕೆ ಒಳಗಾಗಿ ಬತಖ್ ಮಿಯಾ ಗಾಂಧೀಜಿಗೆ ನೀಡಿದ ಹಾಲಿನ ಕುರಿತು ಅವರಿಗೆ ತಿಳುವಳಿಕೆ ನೀಡದೇ ಇದ್ದರೇ ಮುಂದಿನ ಸ್ವಾತಂತ್ರ ಹೋರಾಟಕ್ಕೆ ಗಾಂಧೀಜಿ ದಕ್ಕುತಿರಲಿಲ್ಲವೇನೊ? ಬತಖ್ ಮಿಯಾನ ಸಮಯ ಪ್ರಜ್ಞೆ ಗಾಂಧೀಜಿಯವರನ್ನು ಕಾಪಾಡಿ ಅವರು ಈ ದೇಶಕ್ಕೆ ದಕ್ಕುವಂತೆ ಮಾಡಿತು. ಆದರೆ ಬತಖ್ ಮಿಯಾನ ನಿಷ್ಠೆಗೆ ಯಾವ ಬೆಲೆಯೂ ದಕ್ಕಲಿಲ್ಲ.

ಗಾಂಧೀಜಿ ಚಂಪಾರಣ್ಯಕ್ಕೆ ಬಂದಾಗ ಅವರಿಗೆ ಅತಿಥಿ ಸತ್ಕಾರದ ರೂಪವಾಗಿ ಹಾಲನ್ನು ನೀಡಲಾಯಿತು. ಹಾಲನ್ನು ನೀಡುವಾಗ ಅದರಲ್ಲಿ ಏನೋ ಬೆರೆತಿದೆ ಎಂದು ಸೂಕ್ಷ್ಮವಾಗಿ ಗಾಂಧೀಜಿಗೆ ತಿಳಿಸಲು ಬತಖ್ ಮಿಯಾ ಮರೆಯಲಿಲ್ಲ. ಅದರಂತೆ ಬತಖ್ ಮಿಯಾ ನೀಡಿದ ಹಾಲನ್ನು ಕುಡಿಯದೇ ಗಾಂಧೀಜಿ ಹಾಲಿನ ಲೋಟವನ್ನು ಹಾಗೆಯೇ ಕೆಳಗಿಟ್ಟರು. ಇರ್ವಿನ್‌ನ ಅಪೇಕ್ಷೆಯಂತೆ ಗಾಂಧೀಜಿಗೆ ಸಾವು ಬರಲಿಲ್ಲ. ಅವರು ಬದುಕುಳಿದು ಚಂಪಾರಣ್ಯ ಸತ್ಯಾಗ್ರಹವನ್ನು ನಡೆಸಿದರು. ಮುಂದಿನದೆಲ್ಲಾ ಇತಿಹಾಸ. 

1917ರ ಗಾಂಧೀಜಿಯವರ ಚಂಪಾರಣ್ಯ ಸತ್ಯಾಗ್ರಹದ ಹಿನ್ನೆಲೆಯಲ್ಲಿ ನಮ್ಮನ್ನು ಕಾಡುವುದು ಮುಸ್ಲಿಮ್ ಸಮುದಾಯದ ಬತಖ್ ಮಿಯಾರ ನೆನಪು. ಬಿಳಿಯರ ಮಾಲಕತ್ವದಲ್ಲಿದ್ದ ಚಂಪಾರಣ್ಯದ ಎಲ್ಲಾ ಇಂಡಿಗೊ ಪ್ಲಾಂಟೇಶನ್‌ಗಳಲ್ಲಿ ಬಲವಂತವಾಗಿ ದುಡಿಮೆಗೆ ಹಚ್ಚಲ್ಪಟ್ಟ ಸ್ಥಳೀಯ ಕಾರ್ಮಿಕರ ಸಂಕಷ್ಟಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿಯವರು ಅಲ್ಲಿಗೆ ಬರುವವರಿದ್ದರು. ಗಾಂಧೀಜಿಯವರ ಆಗಮನ ಆ ಬಿಳಿಯ ಮಾಲಕರಿಗೆ ತಲೆನೋವಿನ ವಿಚಾರವಾಗಿತ್ತು. ಈ ಸಮಸ್ಯೆಯ ನಿವಾರಣೆಗೆ ಪರಿಹಾರೋಪಾಯ ಕಂಡುಹಿಡಿದದ್ದು ಅಂಥ ಪ್ಲಾಂಟೇಶನ್ ಒಂದರ ಮೇಲ್ವಿಚಾರಕ ಇರ್ವಿನ್ ಎಂಬ ಬಿಳಿಯ. ಗಾಂಧೀಜಿ ಚಂಪಾರಣ್ಯಕ್ಕೆ ಬಂದು ತಲುಪಿದಾಗ ಅವರಿಗೆ ಕುಡಿಯಲು ಒಂದು ಲೋಟ ವಿಷ ಮಿಶ್ರಿತ ಹಾಲು ನೀಡುವ ಮೂಲಕ ಅವರನ್ನು ನಿರ್ನಾಮ ಮಾಡಿ ಎದುರಾಗಿರುವ ಸಮಸ್ಯೆಯನ್ನು ಶಾಶ್ವಾತವಾಗಿ ನಿವಾರಿಸಿಕೊಳ್ಳವುದು ಇರ್ವಿನ್ ರೂಪಿಸಿದ ಸಂಚಿನ ಭಾಗ. ಈ ಕೆಲಸಕ್ಕೆ ಇರ್ವಿನ್ ನಿಯುಕ್ತಿ ಮಾಡಿದ್ದು ತನ್ನ ಮನೆಯ ಅಡುಗೆಯಾಳು ಮುಸ್ಲಿಮ್ ಸಮುದಾಯದ ಬತಖ್ ಮಿಯಾ ಎಂಬ ವ್ಯಕ್ತಿಯನ್ನು. ಮತ್ತೆ ಗಾಂಧೀಜಿ ಚಂಪಾರಣ್ಯಕ್ಕೆ ಬಂದಾಗ ಅವರಿಗೆ ಅತಿಥಿ ಸತ್ಕಾರದ ರೂಪವಾಗಿ ಹಾಲನ್ನು ನೀಡಲಾಯಿತು. ಹಾಲನ್ನು ನೀಡುವಾಗ ಅದರಲ್ಲಿ ಏನೋ ಬೆರೆತಿದೆ ಎಂದು ಸೂಕ್ಷ್ಮವಾಗಿ ಗಾಂಧೀಜಿಗೆ ತಿಳಿಸಲು ಬತಖ್ ಮಿಯಾ ಮರೆಯಲಿಲ್ಲ. ಅದರಂತೆ ಬತಖ್ ಮಿಯಾ ನೀಡಿದ ಹಾಲನ್ನು ಕುಡಿಯದೇ ಗಾಂಧೀಜಿ ಹಾಲಿನ ಲೋಟವನ್ನು ಹಾಗೆಯೇ ಕೆಳಗಿಟ್ಟರು. ಇರ್ವಿನ್‌ನ ಅಪೇಕ್ಷೆಯಂತೆ ಗಾಂಧೀಜಿಗೆ ಸಾವು ಬರಲಿಲ್ಲ. ಅವರು ಬದುಕುಳಿದು ಚಂಪಾರಣ್ಯ ಸತ್ಯಾಗ್ರಹವನ್ನು ನಡೆಸಿದರು. ಮುಂದಿನದೆಲ್ಲಾ ಇತಿಹಾಸ. ಗಾಂಧೀಜಿ ಹಾಲು ಕುಡಿಯದೇ ಇರಲು ಬತಖ್ ಮಿಯಾನೇ ಕಾರಣ ಎಂದು ಇರ್ವಿನ್‌ಗೆ ಆನಂತರ ತಿಳಿಯಿತು. ಇರ್ವಿನ್ ರೂಪಿಸಿದ ಸಂಚು ಕೈಗೂಡಲಿಲ್ಲ. ಆಗ ಅಲ್ಲಿ ಗಾಂಧೀಜಿ ಜತೆಗೆ ಬಂದ್ದಿದ ಭಾರತದ ಭಾವಿ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದರು ಈ ಘಟನೆಗೆ ಸಾಕ್ಷಿಯಾದರು.

ಮತ್ತೆ ಮುಂದೆ ಬತಖ್ ಮಿಯಾನ ಕತೆ ಏನಾಯಿತು? ತಾನು ರೂಪಿಸಿದ್ದ ಸಂಚು ಫಲಿಸದೇ ಇರಲು ಬತಖ್ ಮಿಯಾನೇ ಕಾರಣ ಎಂದರಿತ ಇರ್ವಿನ್ ಕೋಪಗೊಂಡು ಬತಖ್ ಮಿಯಾನನ್ನು ಕೆಲಸದಿಂದ ತೆಗೆದು ಹಾಕಿದ್ದು ಅಲ್ಲದೇ ಅವನ ಪುಟ್ಟಮನೆ ಹಾಗೂ ಅಷ್ಟಿಷ್ಟು ಆಸ್ತಿ ಮುಟ್ಟುಗೋಲು ಹಾಕಿಸಿ ಅವನಿಗೆ ಜೈಲುವಾಸ ಆಗುವಂತೆ ಮಾಡಿದ. ಬತಖ್ ಮಿಯಾನ ಕುಟುಂಬ ಬೀದಿಗೆ ಬಿತ್ತು.

ಮುಂದೆ 1950ರಲ್ಲಿ ಗಣತಂತ್ರ ಭಾರತದ ಪ್ರಥಮ ರಾಷ್ಟ್ರಪತಿಯಾದ ಬಾಬು ರಾಜೇಂದ್ರಪ್ರಸಾದರು ಕಾರ್ಯಕ್ರಮದ ನಿಮಿತ್ತ ಚಂಪಾರಣ್ಯದ ಮೋತಿಹಾರಿಗೆ ಬಂದರು. ಅಲ್ಲಿನ ರೈಲು ನಿಲ್ದಾಣದಲ್ಲಿ ಬಂದಿಳಿದಾಗ ಅವರನ್ನು ಎದುರುಗೊಳ್ಳಲು ಬಂದ ಜನಸಂದಣಿಯ ದೂರದ ಒಂದು ಮೂಲೆಯಲ್ಲಿ ನಿಂತ ಬತಖ್ ಮಿಯಾನ ಗುರುತು ಹಚ್ಚಿದ ಬಾಬು ರಾಜೇಂದ್ರ ಪ್ರಸಾದರು ಅವನ ಬಳಿ ಸಾಗಿ ಅವನನ್ನು ಅಪ್ಪಿಕೊಂಡರು. ಅಲ್ಲದೇ ಅಲ್ಲಿದ್ದ ಜನರಿಗೆಲ್ಲ ಗಾಂಧೀಜಿಯನ್ನು ಅಂದು ಅಪಾಯದಿಂದ ಬತಖ್ ಮಿಯಾ ಪಾರು ಮಾಡಿದ್ದು ಹೇಗೆ ಎಂಬುದನ್ನು ವಿವರಿಸಿದರು. ಆನಂತರ ಬತಖ್ ಮಿಯಾನ ಕುಟುಂಬದ ದಾರುಣ ಸ್ಥಿತಿಗಾಗಿ ಮರುಗಿ ಸರಕಾರದಿಂದ ಪರಿಹಾರದ ರೂಪದಲ್ಲಿ ತಕ್ಷಣವೇ ಅವನಿಗೆ 50 ಎಕರೆ ಜಮೀನು ನೀಡುವಂತೆ ಅಲ್ಲಿದ್ದ ಜಿಲ್ಲಾಧಿಕಾರಿಗೆ ಆದೇಶ ನೀಡಿದರು. ಆದರೆ ಆದೇಶ ಪಾಲನೆಯಾದದ್ದು ಸುಮಾರು ಒಂದು ದಶಕದ ನಂತರ. ಅದಾಗಲೇ ಬತಖ್ ಮಿಯಾ ಸತ್ತುವರ್ಷವಾಗಿತ್ತು. ಬತಖ್ ಮಿಯಾನ ಕುಟುಂಬ ವಾಸಿಸುತ್ತಿದ್ದ ಮೋತಿಹಾರಿಯ ಸಮೀಪದ ಸಿಸ್ವಾ ಅಜ್ಗಾರಿಯಿಂದ ನೂರು ಕಿ.ಮೀ. ಅಂತರದಲ್ಲಿರುವ ಒಂದು ಕುಗ್ರಾಮದಲ್ಲಿ ಬರೇ 6 ಎಕ್ರೆ ಜಮೀನು ನೀಡಿ ಸರಕಾರ ಕೈ ತೊಳೆದುಕೊಂಡಿತು. ನದಿ ದಂಡೆಯಲ್ಲಿರುವ ಆ ಗ್ರಾಮ ವಾಲ್ಮೀಕಿ ಅಭಯಾರಣ್ಯಕ್ಕೆ ಸಮೀಪವಿರುವ ಕಾರಣ ಆಗಾಗ ಅರಣ್ಯದಿಂದ ಬರುವ ಕಾಡು ಪ್ರಾಣಿಗಳ ಕಾಟ ಮತ್ತು ಮಳೆಗಾಲದಲ್ಲಿ ಉಕ್ಕಿ ಹರಿಯುವ ನೆರೆಯ ಕಾರಣ ಆ ಜಮೀನಿನಿಂದ ಬತಖ್ ಮಿಯಾ ಕುಟುಂಬಕ್ಕೆ ಯಾವ ಪ್ರಯೋಜನವೂ ದಕ್ಕದಾಯಿತು.

ಮುಂದೆ 2010ರಲ್ಲಿ ಕೂಲಿ ಮಾಡಿ ಬದುಕು ಸಾಗಿಸುವ ಈ ಕುಟುಂಬದ ದಾರುಣ ಸ್ಥಿತಿಯ ಕುರಿತು ದೈನಿಕವೊಂದರಲ್ಲಿ ಲೇಖನ ಪ್ರಕಟವಾದಾಗ ಅಂದು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೇಲರ ಗಮನಕ್ಕೆ ಬಂದು ಆ ಕುರಿತು ತಕ್ಷಣವೇ ಕ್ರಮ ತೆಗೆದುಕೊಳ್ಳುವುದಕ್ಕೆ ಅವರು ಜಿಲ್ಲಾ ನ್ಯಾಯಾಧೀಶರಿಗೆ ಆದೇಶ ನೀಡಿದರೂ ಅದರಿಂದ ಏನೂ ಆಗಲಿಲ್ಲ. ಇದೆಲ್ಲ ಜಡ್ಡು ಗಟ್ಟಿದ ನಮ್ಮ ವ್ಯವಸ್ಥೆಗೆ ಕನ್ನಡಿ ಹಿಡಿದಂತೆ. ಇಬ್ಬರು ರಾಷ್ಟ್ರಪತಿಗಳು ಇದರಲ್ಲಿ ಆಸಕ್ತಿ ವಹಿಸಿದರೂ ಅಧಿಕಾರಿಶಾಹಿಯ ನಿರ್ಲಕ್ಷದಿಂದ ಆ ಕುಟುಂಬಕ್ಕೆ ನ್ಯಾಯ ದೊರಕಲಿಲ್ಲವೆಂದರೆ ಏನೆಂದು ಹೇಳಬೇಕು? ಇತ್ತೀಚೆಗೆ ಪಾಟ್ನಾ ಮತ್ತು ಮೋತಿಹಾರಿನಲ್ಲಿ ಚಂಪಾರಣ್ಯದ ಸತ್ಯಾಗ್ರಹದ ನೂರರ ನೆನಪಿನ ಸಂಭ್ರಮಾಚರಣೆ ನಡೆದ ಸಂಭ್ರಮದಲ್ಲಾದರೂ ಬತಖ್ ಮಿಯಾನ ಕುಟುಂಬವನ್ನು ಗುರುತಿಸಬಹುದಿತ್ತು. ಅದೂ ಆಗಲಿಲ್ಲ. ಹೋಗಲಿ, ಒಂದು ಆಮಂತ್ರಣ ಪತ್ರಿಕೆ ಕಳಿಸಿದ್ದರೆ ಆ ಕುಟುಂಬಕ್ಕೆ ಸಂತೋಷವಾಗುತ್ತಿತ್ತು. ಅದು ಕೂಡ ಇಲ್ಲ.

ಅಂದು ಇರ್ವಿನ್ ಸಾಹೇಬನ ಆಮಿಷಕ್ಕೆ ಒಳಗಾಗಿ ಬತಖ್ ಮಿಯಾ ಗಾಂಧೀಜಿಗೆ ನೀಡಿದ ಹಾಲಿನ ಕುರಿತು ಅವರಿಗೆ ತಿಳುವಳಿಕೆ ನೀಡದೇ ಇದ್ದರೇ ಮುಂದಿನ ಸ್ವಾತಂತ್ರ ಹೋರಾಟಕ್ಕೆ ಗಾಂಧೀಜಿ ದಕ್ಕುತಿರಲಿಲ್ಲವೇನೊ? ಬತಖ್ ಮಿಯಾನ ಸಮಯ ಪ್ರಜ್ಞೆ ಗಾಂಧೀಜಿಯವರನ್ನು ಕಾಪಾಡಿ ಅವರು ಈ ದೇಶಕ್ಕೆ ದಕ್ಕುವಂತೆ ಮಾಡಿತು. ಆದರೆ ಬತಖ್ ಮಿಯಾನ ನಿಷ್ಠೆಗೆ ಯಾವ ಬೆಲೆಯೂ ದಕ್ಕಲಿಲ್ಲ. ತಂತಮ್ಮ ಸಾಧನಾ ಸಮಾವೇಶಗಳ ಆಚರಣೆಗೆ ಮತ್ತು ಅವುಗಳ ಜಾಹೀರಾತುಗಳಿಗೆ ಸರಕಾರದ ಬೊಕ್ಕಸದಿಂದ ಕೋಟಿಗಟ್ಟಲೆ ಖರ್ಚುಮಾಡಿ ಕುರ್ಚಿ ಉಳಿಸಿಕೊಳ್ಳಲು ನಾನಾ ಕಸರತ್ತು ನಡೆಸುವ ರಾಜಕೀಯ ಪಕ್ಷಗಳ ಭ್ರಷ್ಟ ವ್ಯವಸ್ಥೆಗೆ ಒಂದಲ್ಲ ನೂರು ಬತಖ್ ಮಿಯಾರ ತ್ಯಾಗಗಳೂ ಕಾಣಿಸುವುದಿಲ್ಲ. ಈ ದೇಶದ ರಾಜಕೀಯದವರ ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತ ಈ ಕುಟುಂಬ ಈಗ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಉಪವಾಸ ಕೂರುವ ನಿರ್ಧಾರ ಮಾಡಿದೆ. ಇದಾದರೂ ಫಲ ನೀಡುತ್ತದೆಯೇ?

Writer - ಕೆ.ಶಾರದಾಭಟ್ ಉಡುಪಿ

contributor

Editor - ಕೆ.ಶಾರದಾಭಟ್ ಉಡುಪಿ

contributor

Similar News