ಶೋಲೆ ತಾಣದಲ್ಲಿ ಸಿನೆಮಾ ನೆನಪು ಮತ್ತು ಹದ್ದುಗಳ ಸಂಘರ್ಷ

Update: 2017-05-28 05:12 GMT

ಉದ್ದೇಶಿತ ಥೀಂಪಾರ್ಕ್, ‘ಶೋಲೆ’ ಹಾಗೂ ರಾಮನಗರದ ನಡುವಿನ ಆಳವಾದ ಸಂಬಂಧಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಿದೆ. ಇದರಲ್ಲಿ ಕೃತಕ ಕೆರೆ ಹಾಗೂ ಶಿಲಾರೋಹಣ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ. ‘‘ಪ್ರವಾಸಿಗರಿಗೆ ತಲ್ಲೀನಗೊಳಿಸುವ ಹಾಗೂ ಸಮಗ್ರ ಅನುಭವ ನೀಡುವುದು ನಮ್ಮ ಉದ್ದೇಶ’’ ಎಂದು ಖರ್ಗೆ ವಿವರಿಸುತ್ತಾರೆ.


ನಾವಿನ್ನೂ ‘ಶೋಲೆ ಥೀಂಪಾರ್ಕ್’ ಬಗ್ಗೆ ವಿಸ್ತೃತವಾದ ಯೋಜನಾ ವರದಿ ಸಿದ್ಧಪಡಿಸಬೇಕಿದೆ ಗಬ್ಬಾರ್ ಗುಹೆ, ವನ್ಯಧಾಮದ ಒಳಗೆಯೇ ಬರುತ್ತದೆ; ಆದರೆ ನಾವು ಈ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ. ಆದಾಗ್ಯೂ ನಾವು ಈ ಗುಹೆಯನ್ನು ವನ್ಯಧಾಮದ ವ್ಯಾಪ್ತಿಯಿಂದ ಹೊರಗೆ ಮರುಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಏಕೆಂದರೆ ಆತ ಇಡೀ ಚಿತ್ರದ ಜನಪ್ರಿಯ ಐಕಾನ್.
-ಪ್ರಿಯಾಂಕ್ ಖರ್ಗೆ
ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ

 

ರಮೇಶ್ ಸಿಪ್ಪಿ ಅವರ ‘ಶೋಲೆ’ಯ ಉಲ್ಲೇಖ ಮಾಡಿದಾಗಲೆಲ್ಲ ಬೆಂಗಳೂರು- ಮೈಸೂರು ಹೆದ್ದಾರಿಯ ಬದಿಯ ಬೆಟ್ಟಗಳಿಂದ ಆವೃತವಾದ ಪ್ರದೇಶ ಕಣ್ಣಮುಂದೆ ಬರುತ್ತದೆ. 1975ರಲ್ಲಿ ಈ ಅದ್ಭುತ ಚಿತ್ರವನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು. ಕುತೂಹಲದ ಪ್ರವಾಸಿಗರು ಅದರಲ್ಲೂ ಕರ್ನಾಟಕದ ಹೊರಗಿನ ಪ್ರವಾಸಿಗಳು ಈ ಅಪೂರ್ವ ಚಿತ್ರ ಚಿತ್ರೀಕರಣಗೊಂಡ ತಾಣಕ್ಕೆ ಇಂದಿಗೂ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ, ಚಿತ್ರದಲ್ಲಿ ರಾಮಗಡ ಎಂದು ಬಿಂಬಿಸಲ್ಪಟ್ಟಿರುವ ರಾಮನಗರದಲ್ಲಿ ‘ಶೋಲೆ’ ಚಿತ್ರದಿಂದ ಸ್ಫೂರ್ತಿ ಪಡೆದ ಥೀಂಪಾರ್ಕ್ ಸಿದ್ಧಪಡಿಸಲು ಮುಂದಾಗಿದೆ.

ಈ ಥೀಂಪಾರ್ಕ್‌ನಲ್ಲಿ ಚಿತ್ರದ ಕ್ಷಣಗಳ ವರ್ಚುವಲ್ ರಿಯಾಲಿಟಿಗಳ ಮರುಸೃಷ್ಟಿ, ಸಾಹಸ ಕ್ರೀಡೆ ಹಾಗೂ ಕರಕುಶಲ ಕಲೆಗಳ ಹಬ್ ಸೇರಲಿದೆ. 120 ಎಕರೆ ಪ್ರದೇಶ ದಲ್ಲಿ ಈ ಥೀಂಪಾರ್ಕ್ ತಲೆ ಎತ್ತಲಿದೆ. ಇಂಥ ಥೀಂಪಾರ್ಕ್ ಗೆ ಇದು ಪರಿಪೂರ್ಣ ಸ್ಥಳ. ದೊಡ್ಡ ಕಲ್ಲುಗಳು ಮತ್ತು ಬೆಟ್ಟ ಗುಡ್ಡವನ್ನು ಒಳಗೊಂಡ ರಾಮನಗರ ಎರಡು ನಗರಗಳ ನಡುವಿನ ಸೂಕ್ತವಾದ ತಾಣ. ಆದರೆ ಈ ಪ್ರಸ್ತಾವನೆಗೆ ರಾಜ್ಯ ಸರಕಾರದ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿದೆ. ಇಲಾಖೆಯ ಪ್ರತಿಪಾದನೆಯಂತೆ, ರಕ್ಷಿತಾರಣ್ಯ ಪ್ರದೇಶದಲ್ಲಿ ಪ್ರವಾಸಿ ತಾಣ ಅಭಿವೃದ್ಧಿಪಡಿಸುವುದು ಕಾನೂನು ಬಾಹಿರ. ‘ಶೋಲೆ’ ಅಭಿಮಾನಿಗಳು ನೆನಪಿಸಿಕೊಳ್ಳುವಂತೆ, ‘ಶೋಲೆ’ ಚಿತ್ರ ಭಾಗಶಃ ರಾಮನಗರದ ರಾಮ ದೇವರ ಬೆಟ್ಟ ಹದ್ದುಗಳ ಸಂರಕ್ಷಿತ ಪ್ರದೇಶವನ್ನು ಒಳಗೊಳ್ಳುತ್ತದೆ. ‘ಶೋಲೆ’ ಚಿತ್ರದಲ್ಲಿ ಬರುವ ಗಬ್ಬರ್ ಸಿಂಗ್ ಅವರ ಕೊಟ್ಟಿಗೆ, ಠಾಕೂರ್ ಬಲದೇವ್ ಸಿಂಗ್ ಅವರ ನಿವಾಸ ಹಾಗೂ ಠಾಕೂರ್ ಅವರ ಕೈಗಳನ್ನು ಗಬ್ಬರ್ ಕತ್ತರಿಸುವ ದೃಶ್ಯಾವಳಿಗಳ ಸರಣಿ ಚಿತ್ರೀಕರಣವಾದ ಪ್ರದೇಶ ಇದು. ಹದ್ದು ಸಂರಕ್ಷಿತ ಪ್ರದೇಶವನ್ನು ಅಧಿಕೃತವಾಗಿ 2012ರಲ್ಲಿ ಸ್ಥಾಪಿಸಲಾಗಿದೆ. ಆದರೆ ಉದ್ದ ಕೊಕ್ಕಿನ ಈಜಿಪ್ಟಿಯನ್ ಹಾಗೂ ಬಿಳಿ ಬೆನ್ನಿನ ಹದ್ದುಗಳು ಹಲವು ವರ್ಷಗಳಿಂದ ರಾಮನಗರ ಬೆಟ್ಟದಲ್ಲಿ ವಾಸವಾಗಿವೆ. ಭಾರತದಲ್ಲಿ ಕಂಡು ಬರುವ ಒಂಬತ್ತು ಪ್ರಭೇದದ ಹದ್ದುಗಳ ಪೈಕಿ ಮೂರು ಪ್ರಭೇದಗಳು ಇಲ್ಲಿ ಕಂಡುಬರುತ್ತವೆ. ಕಳೆದ ಕೆಲವು ವರ್ಷಗಳಿಂದ ಆತಂಕಕಾರಿ ಪ್ರಮಾಣದಲ್ಲಿ ಹದ್ದುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಉದ್ದ ಕೊಕ್ಕಿನ ಹದ್ದುಗಳ ಸಂಖ್ಯೆ ಶೇ.97ರಷ್ಟು ಹಾಗೂ ಈಜಿಪ್ಟಿಯನ್ ಹದ್ದುಗಳ ಸಂಖ್ಯೆ ಶೇ.99ರಷ್ಟು ಕುಂಠಿತವಾಗಿದೆ. ಪರಿಸರವಾದಿಗಳು ಮತ್ತು ಪಕ್ಷಿವೀಕ್ಷಕರು ಈ ಪ್ರದೇಶವನ್ನು ವನ್ಯಧಾಮವಾಗಿ ಘೋಷಿಸುವಂತೆ ಒತ್ತಾಯಿಸುತ್ತಾ ಬಂದಿದ್ದರು. 2012ರಲ್ಲಿ ಸುಮಾರು 346.41 ಹೆಕ್ಟೇರ್ ಪ್ರದೇಶವನ್ನು ಹದ್ದುಗಳ ಸಂರಕ್ಷಿತ ಪ್ರದೇಶ ಎಂದು ಗುರುತಿಸಲಾಯಿತು. ಈ ನಕ್ಷೆಯ ವ್ಯಾಪ್ತಿಯಲ್ಲೇ ಉದ್ದೇಶಿತ ‘ಶೋಲೆ’ ಥೀಂ ಪಾರ್ಕ್ ಸ್ಥಾಪನೆಯಾಗಲಿದೆ.

ಪ್ರವಾಸೋದ್ಯಮ ಸಚಿವಾಲಯ ಇದಕ್ಕೆ ಪರಿಹಾರ ಕಂಡುಕೊಂಡಿರುವುದಾಗಿ ಸಮರ್ಥಿಸಿಕೊಳ್ಳುತ್ತಿದೆ. ರಾಜ್ಯ ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಕಾರ, ‘ಶೋಲೆ’ ಪ್ರವಾಸಿ ಗ್ರಾಮವನ್ನು ವನ್ಯಧಾಮದ ಹೊರಗೆ, ಆದರೆ ಸಾಮಾನ್ಯ ಪ್ರದೇಶದ ಒಳಗೆ ನಿರ್ಮಿಸಲಾಗುತ್ತದೆ. ‘‘ನಾವಿನ್ನೂ ಈ ಬಗ್ಗೆ ವಿಸ್ತೃತವಾದ ಯೋಜನಾ ವರದಿ ಸಿದ್ಧಪಡಿಸಬೇಕಿದೆ ಗಬ್ಬಾರ್ ಗುಹೆ, ವನ್ಯಧಾಮದ ಒಳಗೆಯೇ ಬರುತ್ತದೆ; ಆದರೆ ನಾವು ಈ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ. ಆದಾಗ್ಯೂ ನಾವು ಈ ಗುಹೆಯನ್ನು ವನ್ಯಧಾಮದ ವ್ಯಾಪ್ತಿಯಿಂದ ಹೊರಗೆ ಮರುಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಏಕೆಂದರೆ ಆತ ಇಡೀ ಚಿತ್ರದ ಜನಪ್ರಿಯ ಐಕಾನ್’’ ಎಂದು ಖರ್ಗೆ ವಿವರಿಸುತ್ತಾರೆ.

ಪ್ರಸ್ತುತ ಪ್ರಸ್ತಾವನೆಯ ವಿವರಗಳನ್ನು, ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರಕಾರಿ ಅಧಿಕಾರಿಯೊಬ್ಬರು ನೀಡಿದ್ದಾರೆ. ‘‘ಉದ್ದೇಶಿತ ಥೀಂಪಾರ್ಕ್, ವನ್ಯಧಾಮದ 10 ಕಿ.ಮೀ ಸರಹದ್ದಿನಲ್ಲಿ ನಿರ್ಮಾಣವಾಗಲಿದೆ. ಮುಖ್ಯರಸ್ತೆಯಿಂದ ಸುಮಾರು ಎರಡು ಕಿ.ಮೀ ದೂರದಲ್ಲಿ ಇದು ನಿರ್ಮಾಣವಾಗಲಿದೆ. ಇಲ್ಲಿಗೆ ಬರುವ ಪ್ರವಾಸಿಗಳು ಮೊದಲು ಈ ಸಾಂಸ್ಕೃತಿಕ ತಾಣವನ್ನು ವೀಕ್ಷಿಸಿ, ಅದೇ ಮಾರ್ಗದಲ್ಲಿ ಮುಂದುವರಿದರೆ ವನ್ಯಧಾಮವನ್ನು ಆಸ್ವಾದಿಸಲು ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ’’.

ಆದರೆ ಚಿತ್ರೀಕರಣದ ತಾಣಗಳು ವನ್ಯಧಾಮದ ಒಳಗೆ ಬರುತ್ತದೆಯಲ್ಲವೇ ಎಂದು ಕೇಳಿದ ಪ್ರಶ್ನೆಗೆ, ‘‘ಥೀಂಪಾರ್ಕ್ ನಿಂದ ನಾವು ಸೂಕ್ತ ಗೈಡ್‌ಗಳನ್ನು ವ್ಯವಸ್ಥೆ ಮಾಡಿ, ಚಿತ್ರೀಕರಣ ನಡೆದ ಪ್ರದೇಶವನ್ನೊಳಗೊಂಡ ವನ್ಯಧಾಮವನ್ನು ಜನರಿಗೆ ಪರಿಚಯಿಸಲು ವ್ಯವಸ್ಥೆ ಮಾಡುತ್ತೇವೆ. ಬಳಿಕ ಅವರು ಮತ್ತೆ ಥೀಂಪಾರ್ಕ್‌ಗೆ ಮರಳಿ, ಸಭಾಗೃಹಕ್ಕೆ ಬರುತ್ತಾರೆ. ಅಲ್ಲಿ ಚಿತ್ರದ ದೃಶ್ಯಾವಳಿಗಳನ್ನು ವೀಕ್ಷಿಸಲು 3ಡಿ ವರ್ಚುವಲ್ ಟೂರ್ ವ್ಯವಸ್ಥೆ ಮಾಡಲಾಗುತ್ತದೆ’’ ಎಂದು ವಿವರಿಸುತ್ತಾರೆ.

‘ಶೋಲೆ’ಯ ಕಲಾ ನಿರ್ದೇಶಕ ರಾಮ್ ಯೆಡೇಕರ್ ಚಿತ್ರೀಕರಣಕ್ಕಾಗಿ ರಾಮನಗರವನ್ನು ಆಯ್ಕೆ ಮಾಡಿದ್ದರು. ‘‘ತೀರಾ ಪರಿಚಿತವಾದ ಪ್ರದೇಶದ ಬದಲಾಗಿ ರಮೇಶ್ ಅವರು, ತೀರಾ ಕಠಿಣ ಹಾಗೂ ಗುಡ್ಡಗಾಡು ಪ್ರದೇಶವನ್ನು ಆಯ್ಕೆ ಮಾಡಿದರು’’ ಎಂದು ’‘ಶೋಲೆ’ ದ ಮೇಕಿಂಗ್ ಆಫ್ ಎ ಕ್ಲಾಸಿಕ್’ನಲ್ಲಿ ಅನುಪಮಾ ಚೋಪ್ರಾ ಹೇಳಿದ್ದರು. ‘‘ನಾಗರಿಕತೆಯಿಂದ ದೂರ ಇರುವ ಸ್ಥಳ, ಸಮಯ ಮರೆಯುವ ತಾಣ ಅದಾಗಿರಬೇಕು ಎಂದು ಬಯಸಿದ್ದರು’’.
ಯೆಡೇಕರ್ ಅವರು ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಜಾನ್ ಬೆರ್ರಿಯವರ ಇಂಡಿಯನ್ ಜಂಗಲ್ ಅಡ್ವೆಂಚರ್ ಮಾಯಾ (1966)ಗೆ ಚಿತ್ರೀಕರಿಸಿದ್ದರು. ರಮೇಶ್ ಸಿಪ್ಪಿ ಹಾಗೂ ಸಿನೆಮಾ ಛಾಯಾಗ್ರಾಹಕ ದ್ವಾರಕ ದಿವೇಚ ಅವರಿಗೆ ಈ ಪ್ರದೇಶ ಇಷ್ಟವಾಗಿತ್ತು. ಅದರೆ ಚಿತ್ರೀಕರಣ ತಂಡಕ್ಕೆ ಮಾತ್ರ ಈ ಗುಡ್ಡಗಾಡು ಪ್ರದೇಶ ಸವಾಲಾಗಿತ್ತು. ‘‘ಈ ಪ್ರದೇಶದ ಸುತ್ತಮುತ್ತಲ ರೈತರಿಂದ ಅನುಮತಿ ಪಡೆಯಲಾಗಿತ್ತು. ಹಲವು ಕಡೆಗಳಲ್ಲಿ ಜಾಗವನ್ನು ಸಮತಟ್ಟು ಮಾಡಬೇಕಾಯಿತು. ಕಠಿಣವಾದ ಇತರ ಪ್ರದೇಶದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಬೇಕಾಯಿತು’’ ಎಂದು ಛೋಪ್ರಾ ವಿವರಿಸಿದ್ದಾರೆ. ಚಿತ್ರತಂಡದ ನಿರ್ಮಾಣ ವ್ಯವಸ್ಥಾಪಕರಾಗಿದ್ದ ಅಝೀಝ್ ಹನೀಫ್ ಶೇಖ್, ರಾಮನಗರವನ್ನು ರಾಮಗಡವಾಗಿ ಪರಿವರ್ತಿಸಲು ಸಾಕಷ್ಟು ಶ್ರಮ ವಹಿಸಿದ್ದರು. ‘‘ಗುಡಿಸಲುಗಳು ಧ್ವಂಸವಾಗುವಂಥ ಚಿತ್ರಣ, ಯಂತ್ರೋಪಕರಣಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ಕಾಡಿನಲ್ಲಿ ನೆಲವನ್ನು ಸಮತಟ್ಟುಗೊಳಿಸುವಂಥ ದೃಶ್ಯಾವಳಿಗಳನ್ನು ರಾತ್ರೋರಾತ್ರಿ ಸಿದ್ಧಪಡಿಸಿದರು. ಇದರ ಜತೆಗೆ ರಾಮನಗರ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಹಾಗೂ ದೂರವಾಣಿ ಲೈನ್‌ಗಳನ್ನೂ ಅಭಿವೃದ್ಧಿಪಡಿಸಿದ್ದರು’’ ಎಂದು ಛೋಪ್ತಾ ನೆನಪಿಸಿಕೊಂಡಿದ್ದಾರೆ.

ಉದ್ದೇಶಿತ ಥೀಂಪಾರ್ಕ್, ‘ಶೋಲೆ’ ಹಾಗೂ ರಾಮನಗರದ ನಡುವಿನ ಆಳವಾದ ಸಂಬಂಧಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಲಿದೆ. ಇದರಲ್ಲಿ ಕೃತಕ ಕೆರೆ ಹಾಗೂ ಶಿಲಾರೋಹಣ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ. ‘‘ಪ್ರವಾಸಿಗರಿಗೆ ತಲ್ಲೀನಗೊಳಿಸುವ ಹಾಗೂ ಸಮಗ್ರ ಅನುಭವ ನೀಡುವುದು ನಮ್ಮ ಉದ್ದೇಶ’’ ಎಂದು ಖರ್ಗೆ ವಿವರಿಸುತ್ತಾರೆ. ‘ಶೋಲೆ’ಯನ್ನು ಕೇಂದ್ರವಾಗಿಟ್ಟುಕೊಂಡು, ಅದಕ್ಕಿಂತಲೂ ಹೆಚ್ಚಿನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕೆ ಅರಣ್ಯ ಇಲಾಖೆಯ ಸಲಹೆ ಪಡೆಯುವ ಅಗತ್ಯವಿಲ್ಲ. ಏಕೆಂದರೆ ಈ ಭೂಮಿ ಕಂದಾಯ ಇಲಾಖೆಗೆ ಸಂಬಂಧಿಸಿದ್ದು ಎಂಬ ಸಮರ್ಥನೆ ಅವರದ್ದು.

ಅದರೆ ಸಂರಕ್ಷಣಾವಾದಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ. ಡೇವಿಡ್ ಲಿಯಾನ್ ಅವರ ‘ಎ ಪ್ಯಾಸೇಜ್ ಟೂ ಇಂಡಿಯಾ’ ಪರಿಸರಕ್ಕೆ ಮಾಡಿದ ಹಾನಿಯ ನಿದರ್ಶನವನ್ನು ಅವರು ಬೆಟ್ಟು ಮಾಡುತ್ತಾರೆ. ಈ ಚಿತ್ರವನ್ನು 1983-84ರಲ್ಲಿ ರಾಮನಗರ ಪರಿಸರದಲ್ಲಿ ಚಿತ್ರೀಕರಿಸಲಾಗಿತ್ತು. ‘‘ಎ ಪ್ಯಾಸೇಜ್ ಟೂ ಇಂಡಿಯಾ ಚಿತ್ರೀಕರಣಕ್ಕೆ ಸ್ಥಳವನ್ನು ಸಿದ್ಧಪಡಿಸುವ ವೇಳೆ, ಹಲವು ಬೆಟ್ಟಗಳನ್ನು ಸಿಡಿಸಲಾಗಿತ್ತು. ಈ ಪೈಕಿ ಕೆಲವು ಹದ್ದುಗಳ ವಾಸತಾಣವಾಗಿದ್ದವು’’ ಎಂದು ಪರಿಸರ ಸಂರಕ್ಷಣಾ ಹೋರಾಟಗಾರ ಹಾಗೂ ಹದ್ದು ವನ್ಯಧಾಮ ಅಭಿಯಾನದ ಹೋರಾಟಗಾರ ಶಿವನಂಜಯ್ಯ ಹೇಳುತ್ತಾರೆ. ‘‘ಇತರ ಹಕ್ಕಿಗಳಂತೆ ಹದ್ದುಗಳು ಕೂಡಾ, ತೀರಾ ಸೂಕ್ಷ್ಮ. ಅವುಗಳ ಬಳಿ ಫ್ಲಾಶ್ ಕ್ಯಾಮರಾ ಬಳಸುವಂತಿಲ್ಲ. ಅವುಗಳ ಸಹಜ ವಾಸತಾಣದಲ್ಲಿ ಬದಲಾವಣೆಗಳನ್ನು ಮಾಡಿದರೆ, ಜನರ ಇರುವಿಕೆ ಅಥವಾ ವಾಣಿಜ್ಯ ಚಟುವಟಿಕೆಗಳು ಅಲ್ಲಿ ನಡೆದರೆ, ಅವುಗಳು ಭೀತಿಯಿಂದ ದೂರವಾಗುವ ಸಾಧ್ಯತೆ ಇದೆ. ನಿರಂತರವಾಗಿ ಚಿತ್ರೀಕರಣಗಳು ಖಂಡಿತವಾಗಿಯೂ ಅವುಗಳಿಗೆ ಹಾನಿ ಉಂಟು ಮಾಡಿವೆ.’’

ಈ ಜನಪ್ರಿಯ ಹಿಂದಿ ಚಿತ್ರದ ನೆನಪಿಗಾಗಿ ಥೀಂಪಾರ್ಕ್ ಸೃಷ್ಟಿಸುವುದರಿಂದ ಈ ಪಕ್ಷಿಗಳಿಗೆ ಯಾವ ನೆರವೂ ಆಗದು ಎನ್ನುವುದು ಪರಿಸರವಾದಿಗಳ ನಿಲುವು. ‘‘ಹದ್ದುಗಳಿಗೆ ಯಾವುದೇ ಜೈವಿಕ ಅಥವಾ ಭೌಗೋಳಿಕ ಗಡಿ ಇಲ್ಲ. ಮಾನವ ಚಟುವಟಿಕೆಗಳನ್ನು ಆರಂಭಿಸುವ 10 ಕಿ.ಮೀ ಸರಹದ್ದಿನ ಪರಿವೆ ಅವರಿಗೆ ಇರುವುದಿಲ್ಲ’’ ಎಂದು ಸೇವ್ ಟೈಗರ್ ಫಸ್ಟ್ ಸ್ವಯಂಸೇವಾ ಸಂಸ್ಥೆಯ ಸಹ ಸಂಸ್ಥಾಪಕಿ ಪದ್ಮಾ ಅಶೋಕ್ ಅಭಿಪ್ರಾಯಪಡುತ್ತಾರೆ. ಇವರು ರಾಮನಗರ ಬೆಟ್ಟದಲ್ಲಿ ಹದ್ದುಗಳ ಬಗ್ಗೆ ಒಂದು ವರ್ಷ ಅಧ್ಯಯನ ಕೈಗೊಂಡವರು. ‘‘ಇದು ವನ್ಯಧಾಮವಾಗಿರುವುದರಿಂದ ಪ್ರವಾಸಿಗಳು ಈಗಾಗಲೇ ದಾಂಗುಡಿ ಇಡುತ್ತಿದ್ದಾರೆ. ವನ್ಯಧಾಮದ ಒಳಗೆ ಒಂದು ರಾಮದೇವಾಲಯವಿದೆ. ಅಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಈ ವನ್ಯಧಾಮಕ್ಕೆ ಹೊಂದಿಕೊಂಡಂತೆ ಕೆಲ ಮನೆಗಳೂ ಇವೆ. ಅಲ್ಲಿಂದ ಮಕ್ಕಳು ಬೆಟ್ಟ ಹತ್ತುತ್ತಾರೆ. ಆದರೆ ಅವರಿಗೆ ಅಥವಾ ಪ್ರವಾಸಿಗರಿಗೆ, ಹದ್ದುಗಳ ಸಂರಕ್ಷಿತ ಪ್ರದೇಶದಲ್ಲಿ ಹೇಗೆ ಶಿಸ್ತಿನಿಂದ ವರ್ತಿಸಬೇಕು ಎಂಬ ಬಗ್ಗೆ ಯಾವ ಮಾರ್ಗದರ್ಶನ ನೀಡುವ ವ್ಯವಸ್ಥೆಯೂ ಇಲ್ಲ’’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮಾನವ ವಾಸತಾಣ ನಿರ್ಮಾಣವಾದ ಬಳಿಕ ಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿಯತ್ತಿದೆ ಎಂದು ಅಶೋಕ್ ಹೇಳುತ್ತಾರೆ. ‘‘ಇದು ಹದ್ದುಗಳು ಗೂಡುಕಟ್ಟುವ ಹಾಗೂ ಬೆಳೆಯುವ ತಾಣ. ಅವುಗಳ ಮೊಟ್ಟೆಗಳನ್ನು ಇಟ್ಟ ಜಾಗ ಸ್ವಲ್ಪ ಬದಲಾದರೂ, ಅವುಗಳಿಗೆ ಧಕ್ಕೆಯಾಗುತ್ತದೆ’’ ಎನ್ನುವುದು ಅವರ ಕಾಳಜಿ. ‘‘ಈ ಪ್ರದೇಶದಲ್ಲಿ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸುವ ಯೋಜನೆ, ಜನದಟ್ಟಣೆಯನ್ನು ಮಾತ್ರ ಹೆಚ್ಚಿಸಲು ಸಾಧ್ಯ. ಅದರಲ್ಲೂ ವನ್ಯಧಾಮದಲ್ಲಿ ಗೈಡ್‌ಗಳಿಂದ ನಿರ್ದೇಶಿತವಾದ ವಿಹಾರ ವ್ಯವಸ್ಥೆ ಇರುತ್ತದೆ. ಇದು ಹದ್ದುಗಳಿಗೆ ಮತ್ತಷ್ಟು ದಣಿವು ತರುವ ವಿಚಾರ. ಹದ್ದುಗಳು ಖಾಲಿ ಫಿಝ್ಝೆ ಪೊಟ್ಟಣದೊಂದಿಗೆ ಹಾರುವ ದೃಶ್ಯವನ್ನು ನಾನು ನೋಡಿದ್ದೇನೆ. ಪ್ರವಾಸಿಗಳು ಗಾಜಿನ ಬಾಟಲಿಗಳನ್ನು, ಆಹಾರ ಪೊಟ್ಟಣಗಳನ್ನು ಎಸೆಯುತ್ತಾ, ಬೊಬ್ಬೆ ಹಾಕುತ್ತಿರುತ್ತಾರೆ. ಆದರೆ ವಾಸ್ತವವಾಗಿ ನಾವು ದೂರದಿಂದಲೇ ಪಕ್ಷಿವೀಕ್ಷಣೆ ಮಾಡಬೇಕು. ಅವುಗಳು ತಮ್ಮ ಪಾಡಿಗೆ ಇರಲು ಅವಕಾಶ ಮಾಡಿಕೊಡಬೇಕು. ನಿಮ್ಮ ಮನೆಗೆ ಬಂದು ಇತರರು ನಿಮ್ಮನ್ನು ದಿಟ್ಟಿಸಿ ನೋಡುವುದನ್ನು ನೀವು ಬಯಸುತ್ತೀರಾ?’’ ಎಂಬ ಪ್ರಶ್ನೆ ಅವರದ್ದು.

ಥೀಂಪಾರ್ಕ್‌ನಲ್ಲಿ ನಿರ್ಮಾಣ ಚಟುವಟಿಕೆಯಿಂದಾಗಿ ಪಕ್ಷಿಗಳು ದೃಶ್ಯಾವಳಿಗಳನ್ನು ಗುರುತಿಸುವುದು ಕಷ್ಟವಾಗಲಿದೆ. ಈ ಅರಣ್ಯದಲ್ಲಿ ಚಿರತೆ, ಕರಡಿ ಹಾಗೂ ನವಿಲುಗಳು ಕೂಡಾ ಇದ್ದು, ಮಾನವ ಚಟುವಟಿಕೆಗಳಿಂದ ಇವುಗಳ ಇರುವಿಕೆಗೂ ಧಕ್ಕೆಯಾಗಲಿದೆ ಎಂದು ಅಶೋಕ್ ಅಭಿಪ್ರಾಯಪಡುತ್ತಾರೆ.
ಈ ಯೋಜನೆ, ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಇದಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. ‘‘ನಮ್ಮ ಜನಸಂಖ್ಯೆ ಹೆಚ್ಚಿದಂತೆ ಭೂಮಿ ಲಭ್ಯತೆ ಹೆಚ್ಚದು’’ ಎನ್ನುವುದು ವನ್ಯಜೀವಿ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಸಂರಕ್ಷಣಾಧಿಕಾರಿ ಜಯರಾಂ ಅವರ ನಿಲುವು. ಒಂದು ಆದರ್ಶ ವನ್ಯಧಾಮ ಎಂದರೆ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಕೂಡಾ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ಹದ್ದುಗಳಿಗೆ ಅಪಾಯ ತರುವ ವಾಣಿಜ್ಯ ಯೋಜನೆ ಇದೇ ಮೊದಲಲ್ಲ. 2005ರಲ್ಲಿ, ಇದೇ ಪ್ರದೇಶದ ಹಂದಿಗೊಂದಿ ಶಿಲೆಯಲ್ಲಿ ದೊಡ್ಡ ಬುದ್ಧವಿಗ್ರಹವನ್ನು ನಿರ್ಮಿಸಲು ಸಂಘಮಿತ್ರ ಫೌಂಡೇಷನ್ ಪ್ರಸ್ತಾವನೆ ಸಲ್ಲಿಸಿತ್ತು. ಹೋರಾಟಗಾರರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಯೋಜನೆಗೆ ಚಾಲನೆ ಸಿಗಲಿಲ್ಲ ಎಂದು ಶಿವನಂಜಯ್ಯ ವಿವರಿಸುತ್ತಾರೆ. ಅಂತೆಯೇ 2010ರಲ್ಲಿ ಒಂದು ರೆಸಾರ್ಟ್ ನಿರ್ಮಿಸುವ ಪ್ರಸ್ತಾವವೂ ಇತ್ತು. ಅದಕ್ಕೂ ವಿರೋಧ ವ್ಯಕ್ತಪಡಿಸಿದೆವು. ಹದ್ದುಗಳಿಗೆ ಅವುಗಳ ಮನೆಯನ್ನು ಸಂರಕ್ಷಿಸುವುದು ಸುದೀರ್ಘ ಹಾಗೂ ಕಠಿಣ ಕಸರತ್ತು.
‘ಶೋಲೆ’ ಗ್ರಾಮವನ್ನು ರಾಮನಗರದಲ್ಲಿ ಅಭಿವೃದ್ಧಿಪಡಿಸುವ ಪ್ರಯತ್ನವನ್ನು ಕರ್ನಾಟಕ ಸರಕಾರ ಹಲವು ವರ್ಷಗಳಿಂದ ಮಾಡುತ್ತಿದೆ. ಈ ಪ್ರದೇಶದಲ್ಲಿ ಹಾದುಹೋಗುವಾಗಲೆಲ್ಲ ಕೆಲವರು ಇದನ್ನು ‘ಶೋಲೆ’ ಚಿತ್ರೀಕರಣಗೊಂಡ ಪ್ರದೇಶ ಎಂದು ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದವರು ಮೈಸೂರಿಗೆ ಹೋಗುವಾಗ ಅದನ್ನು ವಿವರಿಸುತ್ತಾರೆ ಎಂದು ಖರ್ಗೆ ಹೇಳುತ್ತಾರೆ.

ಚಿತ್ರದ ಹೆಸರಿನ ಥೀಂಪಾಕ್ ಅಭಿವೃದ್ಧಿಪಡಿಸಲು ಅತ್ಯುತ್ಸಾಹ ತೋರುತ್ತಿರುವ ರಾಜ್ಯ ಸರಕಾರ, ಕಳೆದ ಹಲವು ವರ್ಷಗಳಿಂದ ರಾಮನಗರ ಅಭಿವೃದ್ಧಿಗೆ ಮಾಡಿರುವ ಪ್ರಯತ್ನ ಅತ್ಯಲ್ಪ. ಬೆಂಗಳೂರಿನಿಂದ ಕೇವಲ 53 ಕಿ.ಮೀ ಪ್ರಯಾಣಿಸಿದಾಗ ಸೌಲಭ್ಯಗಳ ಕೊರತೆ ಎದ್ದುಕಾಣುತ್ತದೆ. ಗೈಡ್‌ಗಳ ಲಭ್ಯತೆ ಇಲ್ಲದಿರುವುದು ಅಥವಾ ಪ್ರವಾಸಿ ತಾಣದ ಯಾವ ಕುರುಹುಗಳೂ ಇಲ್ಲಿ ಗೋಚರಿಸುವುದಿಲ್ಲ. ಇದು ‘ಶೋಲೆ’ ಚಿತ್ರೀಕರಣವಾದ ಪ್ರದೇಶ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಪುಷ್ಟಿ ನೀಡುವ ಯಾವ ಅಂಶಗಳೂ ಇಲ್ಲಿ ಕಾಣಸಿಗುವುದಿಲ್ಲ ಎಂದು ಅರುಣಾಚಲ ಪ್ರದೇಶದ ಪ್ರವಾಸಿಗುಂಪಿನ ಸದಸ್ಯರಾದ ಸಾಂಜ್ ಹೇಳುತ್ತಾರೆ. ಇಲ್ಲಿ ಯಾವ ಸಂಕೇತಗಳೂ ಇಲ್ಲ. ಕೇವಲ ಬೆಟ್ಟ ಹಾಗೂ ಕಲ್ಲುಗಳು.

ಥೀಂಪಾರ್ಕ್ ಅಭಿವೃದ್ಧಿಯಾದರೆ, ಈ ಚಿತ್ರದ ಜತೆ ಸಂಪರ್ಕ ಕಲ್ಪಿಸಿಕೊಳ್ಳುವ ಈ ಪ್ರದೇಶದ ಜನರಿಗೆ ಖುಷಿಯಾಗುತ್ತದೆ. ವನ್ಯಧಾಮದ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ 70 ವರ್ಷದ ವೀರಯ್ಯ ಅವರಿಗೆ ‘ಶೋಲೆ’ ಚಿತ್ರೀಕರಣವಾದಾಗ 15 ವರ್ಷ ವಯಸ್ಸಾಗಿತ್ತು. ಗಬ್ಬರ್ ಗ್ಯಾಂಗ್‌ನ ಹೆಚ್ಚುವರಿ ಸದಸ್ಯನಾಗಿಯೂ ಅವರು ಪಾತ್ರ ನಿರ್ವಹಿಸಿದ್ದರು. ಗನ್ ಪಡೆದು ಗಬ್ಬರ್‌ಗೆ ನೀಡುವುದು ನನ್ನ ಕೆಲಸವಾಗಿತ್ತು ಎಂದು ವೀರಯ್ಯ ನೆನಪಿಸಿಕೊಳ್ಳುತ್ತಾರೆ. ಅದು ನಟನೆ ಎಂದು ಗೊತ್ತಿದ್ದೂ, ಅವರನ್ನು ನೋಡಿ ನಾನು ಹೆದರಿಕೊಂಡಿದ್ದೆ. ಅಂಥ ಧ್ವನಿ ಅವರದ್ದು.
ಇತರ ನಟರ ಬಗ್ಗೆ ಏನು ಹೇಳುತ್ತೀರಿ? ಎಂಬ ಪ್ರಶ್ನೆಗೆ, ಧರ್ಮೇಂದ್ರ ಆಕರ್ಷಕವಾಗಿ ಕಾಣುತ್ತಿದ್ದರು. ಅಮಿತಾಭ್ ಬಚ್ಚನ್ ಪಕ್ಕಾ ಮೆಕ್ಯಾನಿಕ್‌ನಂತೆ ಕಾಣುತ್ತಿದ್ದರು. ಅವರನ್ನು ನಾನು ಗಮನಿಸಲೇ ಇಲ್ಲ ಎಂದು ವೀರಯ್ಯ ವಿವರಿಸಿದರು. 

ಈ ಯೋಜನೆ ಕಾರ್ಯಗತಗೊಂಡರೆ, ತಮ್ಮನ್ನು ಅಧಿಕೃತ ಗೈಡ್ ಆಗಿ ನೇಮಕ ಮಾಡಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಅವರಲ್ಲಿದೆ. ಬಹುಶಃ ಅವರು ತನಗೆ ಆ ವೇಷಭೂಷಣವನ್ನೂ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ.

ಕೃಪೆ: ಸ್ಕ್ರೋಲ್.ಇನ್

Writer - ಅರ್ಚನಾ ನಾಥನ್

contributor

Editor - ಅರ್ಚನಾ ನಾಥನ್

contributor

Similar News