ದೇಶದಲ್ಲಿ ಯಾರು ಹೇಗಿರಬೇಕೆಂಬ ನಿರ್ಣಯ ನಾವು ಮಾಡುತ್ತೇವೆ: ಪ್ರವೀಣ್‌ ತೊಗಾಡಿಯಾ

Update: 2017-05-28 17:20 GMT

ಬೆಂಗಳೂರು, ಮೇ 28: ಭಾರತದಲ್ಲಿ ಯಾರು ಹೇಗೆ ಇರಬೇಕೆಂಬ ನಿರ್ಣಯವನ್ನು ನಾವು ಮತ್ತೊಮ್ಮೆ ನಮ್ಮ ಭುಜಗಳ ಶಕ್ತಿಯ ಆಧಾರದಲ್ಲಿ ಮಾಡುತ್ತೇವೆ ಎಂದು ವಿಶ್ವ ಹಿಂದು ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ರವಿವಾರ ನಗರದ ಹಲಸೂರಿನಲ್ಲಿರುವ ಸ್ವಾಮಿ ಯೋಗೀಶ್ವರಾನಂದ ಸ್ವಾಮಿ ಶಾಲೆಯಲ್ಲಿ ಬೆಂಗಳೂರು ಮಹಾನಗರ ವಿಶ್ವ ಹಿಂದು ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಗುರು ಗೋವಿಂದಸಿಂಗ್‌ರ 350ನೆ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ನಾವು ಮೈದಾನದಲ್ಲಿ ಇಳಿದರೆ ಭೂಕಂಪವಾಗುತ್ತದೆ. ಎದ್ದೇಳಿ ಹಿಂದೂಗಳೇ, ಗುರುಗೋವಿಂದಸಿಂಗ್, ಮಹಾರಾಣ ಪ್ರತಾಪ್, ಛತ್ರಪತಿ ಶಿವಾಜಿ, ದಕ್ಷಿಣ ಭಾರತವನ್ನು ಮೊಗಲರು, ಮುಸ್ಲಿಮರಿಂದ ಸುರಕ್ಷಿತವಾಗಿರಿಸಿದ್ದ ವಿಜಯನಗರ ಸಾಮ್ರಾಜ್ಯದ ವಂಶಸ್ಥರೆ, ಈ ದೇಶದಲ್ಲಿ ಯಾರೂ ಹೇಗೆ ಇರಬೇಕೆಂಬ ನಿರ್ಣಯವನ್ನು ನಾವು ಮಾಡಬೇಕಿದೆ ಎಂದು ಕರೆ ನೀಡಿದರು.

ಕೇವಲ ಭಜನೆ, ಕೀರ್ತನೆ ಮಾಡಿಕೊಂಡಿದ್ದ ಸಿಖ್ ಪರಂಪರೆಯನ್ನು ಧರ್ಮ ಹಾಗೂ ದೇಶದ ರಕ್ಷಣೆಗಾಗಿ ಜಾಗೃತಿಗೊಳಿಸಿದ ಗುರು ಗೋವಿಂದ ಸಿಂಗ್‌ರ ತ್ಯಾಗ, ಬಲಿದಾನ ವರ್ಣಿಸಲು ಅಸಾಧ್ಯ. ಅವರ ತಂದೆ ಹಾಗೂ ಗೋವಿಂದಸಿಂಗ್‌ರ ನಾಲ್ವರು ಮಕ್ಕಳು ಧರ್ಮದ ರಕ್ಷಣೆಗಾಗಿ ಬಲಿದಾನ ನೀಡಿದ್ದಾರೆ ಎಂದು ಹೇಳಿದರು.

ಮೊಗಲರ ಆಳ್ವಿಕೆಯಲ್ಲಿ ಇಡೀ ದೇಶವನ್ನು ದಾರೂಲ್ ಇಸ್ಲಾಮ್ ಮಾಡುವ ವಾತಾವರಣ ನಿರ್ಮಾಣವಾಗಿತ್ತು. ಇವತ್ತು ಸಮಾನತೆ ಹಾಗೂ ಅಧಿಕಾರದ ಮಾತುಗಳನ್ನಾಡುವ ಮುಸ್ಲಿಮರೇ, ಇದೇ ಭೂಮಿಯ ಮೇಲೆ ಮೊಗಲರು ನಮ್ಮ ಪೂರ್ವಜರಿಂದ ತೆರಿಗೆ, ಜಝಿಯಾವನ್ನು ಅವರ ತಲೆಯನ್ನು ಕಡಿದು ಸಂಗ್ರಹಿಸುತ್ತಿದ್ದರು. ಗುರುಗೋವಿಂದಸಿಂಗ್ ಅಂದು ಹೋರಾಟ ಮಾಡದೇ ಇದ್ದಿದ್ದರೆ, ದೇಶದಲ್ಲಿ ಯಾವ ಹಿಂದೂವು ಉಳಿಯುತ್ತಿರಲಿಲ್ಲ ಎಂದರು.

ನಮ್ಮ ಈ ಯುದ್ಧವು ಇಸ್ಲಾಮ್ ವಿರುದ್ಧ, ಸಿಖ್ಖರು ಹಾಗೂ ಸನಾತನ ಹಿಂದೂಗಳ ಯುದ್ಧವು ಇಸ್ಲಾಮ್ ವಿರುದ್ಧವಿದೆ. ಗುರು ತೇಜ್‌ಬಹದ್ದೂರ್, ಗುರುಗೋವಿಂದ ಸಿಂಗ್, ಅವರ ಇಬ್ಬರು ಮಕ್ಕಳ ಬಲಿ ಪಡೆದ ಮುಸ್ಲಿಮರು, ದೇಶವನ್ನು ದಾರೂಲ್ ಇಸ್ಲಾಮ್ ಮಾಡಲು ಹೊರಟ್ಟಿದ್ದವರ ವಿರುದ್ಧವಿದೆ ಎಂದು ಪ್ರವೀಣ್ ತೊಗಾಡಿಯಾ ಹೇಳಿದರು.

ಔರಂಗ್‌ಜೇಬ್ ಮರಣ ನಂತರವು ನಮ್ಮ ವಿರುದ್ಧದ ಯುದ್ಧವನ್ನು ಮೊಗಲರು ನಿಲ್ಲಿಸಿರಲಿಲ್ಲ. ಆನಂತರ, ಮಹಾರಾಣ ರಣ ಜೀತ್‌ಸಿಂಗ್ ನೇತೃತ್ವದಲ್ಲಿ ಲಾಹೋರನ್ನು ರಾಜಧಾನಿ ಮಾಡಿಕೊಂಡು ಈ ದೇಶದಲ್ಲಿ ಆಳ್ವಿಕೆ ಮಾಡುವುದು ನಾವು, ಮುಸ್ಲಿಮರು, ಮೊಗಲರಲ್ಲ ಎಂಬ ಘೋಷಣೆ ಮೊಳಗಿತು ಎಂದು ಅವರು ತಿಳಿಸಿದರು.

ಸಿಖ್ಖರ ಎಲ್ಲ ಪೂರ್ವಜರು ಹಾಗೂ ಸನಾತನ ಹಿಂದೂಗಳು ಪೂರ್ವಜರು ಒಂದೇ. ನಮ್ಮ ಪೂಜಾ ವಿಧಾನ, ಪದ್ಧತಿಗಳಲ್ಲಿ ವಿಭಿನ್ನತೆಗಳಿರಬಹುದು. ಆದರೆ, ನಾವೆಲ್ಲ ಒಂದೇ. ನಮ್ಮ ಪೂರ್ವಜರು ಒಂದೇ, ನಮ್ಮ ಶತ್ರುಗಳು ಹಾಗೂ ಮಿತ್ರರು ಒಂದೇ ಎಂಬುದನ್ನು ಯಾರೂ ಮರೆಯಬಾರದು ಎಂದು ಪ್ರವೀಣ್‌ ತೊಗಾಡಿಯಾ ಹೇಳಿದರು.

ಇಂಗ್ಲೆಂಡ್‌ನ ಮ್ಯಾಂಚೆಸ್ಟೆರ್, ಸಿರಿಯಾದ ಕ್ರೈಸ್ತರು, ವರ್ಲ್ಡ್ ಟ್ರೇಡ್ ಸೆಂಟರ್ ಸುರಕ್ಷಿತವಾಗಿಲ್ಲ. ನಾವು 1400 ವರ್ಷಗಳಿಂದ ಅಸುರಕ್ಷತೆಯಿಂದಿದ್ದೇವೆ. ಆದುದರಿಂದ, ಭಾರತದ 100 ಕೋಟಿ ಸನಾತನ ಹಿಂದೂಗಳು ಸಿಖ್ಖರು (ಸಿಂಹಗಳು) ಹಾಗೂ ಸೈನಿಕರಾಗಬೇಕು.

ಶತ್ರುಗಳನ್ನು ಪರಾಜಿತ ಮಾಡುವ, ಬಲಿದಾನಕ್ಕೆ ಸಿದ್ಧರಾಗಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಹಲಸೂರಿನ ಗುರುದ್ವಾರದ ಶ್ರೀ ಗುರುಸಿಂಗ್ ಸಭಾದ ಅಧ್ಯಕ್ಷ ಪರಬ್‌ಜೋತ್‌ಸಿಂಗ್ ಬಾಲಿ, ವಿಶ್ವ ಹಿಂದು ಪರಿಷತ್ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಟಿ.ಎ.ಪಿ.ಶೆಣೈ, ಬೆಂಗಳೂರು ಮಹಾನಗರ ಕಾರ್ಯದರ್ಶಿ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News