ಒಕ್ಕಲಿಗ- ಲಿಂಗಾಯಿತರಿಂದ ಹಿಂದುಳಿದ ಜಾತಿಗಳಿಗೆ ಹಿನ್ನಡೆಯ ಶಿಕ್ಷೆ: ಎಚ್.ಡಿ.ದೇವೇಗೌಡ ಆರೋಪ

Update: 2017-05-28 17:27 GMT

ಬೆಂಗಳೂರು, ಮೇ 28: ರಾಜ್ಯದಲ್ಲಿ ಹಿಂದುಳಿದ ಜಾತಿಗಳಿಗೆ ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನ ದೊರಕದಿರಲು ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದ ನಾಯಕರೇ ಕಾರಣ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಬಲಿಜ ಮಹಾಸಭಾ ಆಯೋಜಿಸಿದ್ದ ಬಲಿಜ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲ ಹಿಂದುಳಿದ ಜಾತಿಗಳು ಅವಕಾಶಗಳನ್ನು ವಂಚಿತರಾಗಲು ಒಕ್ಕಲಿಗ ಮತ್ತು ಲಿಂಗಾಯಿತ ಎರಡು ಜಾತಿಗಳೇ ಕಾರಣ. ಈ ಎರಡು ಪ್ರಬಲ ಜಾತಿಗಳ ಮುಖಂಡರು ಹಿಂದುಳಿದ ಜಾತಿಗಳನ್ನು ನಿಕೃಷ್ಟವಾಗಿ ನೋಡಿಕೊಂಡಿರುವುದರಿಂದ ಇಂಥ ಶಿಕ್ಷೆಯನ್ನು ಅನುಭವಿಸಬೇಕಾಗಿದೆ ಎಂದರು.

ಸಮಾವೇಶದಲ್ಲಿ ಶಿಳ್ಳೆ,ಚಪ್ಪಾಳೆ ಹೊಡೆದರೆ ಏನೂ ಲಾಭವಿಲ್ಲ. ಇತಿಹಾಸವನ್ನು ತಿಳಿದುಕೊಳ್ಳಬೇಕು.ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ಶ್ರಮಿಸಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇಂದು ಸ್ಮರಿಸಬೇಕು. ಈಗೀನ ಸರಕಾರ ಹಿಂದುಳಿದ ವರ್ಗಗಳ ಪರವಾಗಿದೆ ಎಂದು ಹೇಳಿದ ಅವರು, ನಾನು ಸಿದ್ದರಾಮಯ್ಯನವರನ್ನು ಹೊಗಳಲು ಇಲ್ಲಿ ಬಂದಿಲ್ಲ. ಸಮಾವೇಶವನ್ನು ಪಕ್ಷಾತೀತವಾಗಿ ಆಯೋಜಿಸಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆ ಗಳಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು. ನಂತರ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಾಗ ಬಲಿಜ ಸಮುದಾಯದಿಂದ ಉದ್ಗೋಗ ಮೀಸಲಾತಿಯನ್ನು ಕಸಿದು ಕೊಂಡರು ಎಂದು ಟೀಕಿಸಿದ ಅವರು, ಬಲಿಜ ಸಮುದಾಯದ ಬೇಡಿಕೆಯನ್ನು ಈಡೇರಿಸಲು ನನ್ನ ಕೈಯಲ್ಲಿ ಅಧಿಕಾರವಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ಬಲಿಜ ಸಮುದಾಯವನ್ನು ಪ್ರವರ್ಗ 2(ಎ) ಸ್ಥಾನಮಾನ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈ ಆದೇಶವನ್ನು ಸರಕಾರಗಳು ಶಿಫಾರಸ್ಸು ಮಾಡಬೇಕು. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಬಳಿ ಬಲಿಜ ಸಮುದಾಯವನ್ನು ಪ್ರವರ್ಗ 2(ಎ) ಪಟ್ಟಿಗೆ ಸೇರಿಸುವಂತೆ ನಿವೇಧನೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

‘ದೇವೇಗೌಡರಿಗೆ ವಯಸ್ಸಾಯಿತು. ಅವರ ಕತೆ ಮುಗಿದೇ ಹೋಯಿತು ಎನ್ನುವುದು ನಿಮ್ಮ ಭ್ರಮೆಯಷ್ಟೇ. ರಾಜ್ಯಾದ್ಯಾಂತ ಪ್ರವಾಸ ಮಾಡಿ ಜನರನ್ನು ಸಂಘಟಿಸುವ ಶಕ್ತಿ ಇನ್ನಲ್ಲಿ ಇನ್ನೂ ಇದೆ’-ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News