×
Ad

ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಕೆ?

Update: 2017-05-29 18:28 IST

ಬೆಂಗಳೂರು, ಮೇ 29: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರನ್ನೆ ಮುಂದಿನ ವಿಧಾನಸಭಾ ಚುನಾವಣೆ ಯವರೆಗೆ ಮುಂದುವರೆಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ನಿರ್ಧರಿಸಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿಯಿದೆ ಎಂದು ತಿಳಿದು ಬಂದಿದೆ.

ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಸೇರಿದಂತೆ ಇನ್ನಿತರ ಪ್ರಮುಖ ನಾಯಕರೊಂದಿಗೆ ಪ್ರತ್ಯೇಕವಾಗಿ ರಾಹುಲ್‌ಗಾಂಧಿ ಚರ್ಚೆ ನಡೆಸಿದರು.

ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ಒಂದು ವರ್ಷದ ಹಿಂದೆಯೆ ನೇಮಕ ಮಾಡಬೇಕಿತ್ತು. ಆದರೆ, ಈಗ ಚುನಾವಣೆಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಿದೆ. ಇಂತಹ ಸಂದರ್ಭದಲ್ಲಿ ಪರಮೇಶ್ವರ್‌ರನ್ನು ಬದಲಾಯಿಸಿದರೆ ದಲಿತ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆದುದರಿಂದ, ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಕರ್ನಾಟಕದಲ್ಲಿ ಯಾವುದೆ ರೀತಿಯ ಸಾಹಸಕ್ಕೆ ಕೈ ಹಾಕುವುದು ಬೇಡ. ಸದ್ಯದ ಪರಿಸ್ಥಿತಿಯಲ್ಲಿ ಪರಮೇಶ್ವರ್ ಅಧ್ಯಕ್ಷರಾಗಿ ಮುಂದುವರೆದರೆ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಎಲ್ಲ ಮುಖಂಡರ ಅಭಿಪ್ರಾಯಗಳನ್ನು ಕೇಳಿರುವ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೀಡಿರುವ ಸಲಹೆಯಂತೆ ಪರಮೇಶ್ವರ್ ಅವರನ್ನೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಈ ಎಲ್ಲ ಪ್ರಕ್ರಿಯೆಗಳ ನಡುವೆ ಕೆಪಿಸಿಸಿ ಅಧ್ಯಕ್ಷಗಾದಿಯ ಪ್ರಬಲ ಆಕಾಂಕ್ಷಿಗಳಾದ ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಮಾಜಿ ಸಚಿವ ಎಸ್.ಆರ್.ಪಾಟೀಲ್ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಅಂತಿಮ ಹಂತದ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸರಕಾರದ ಸಾಧನೆ, ಪಕ್ಷ ಸಂಘಟನೆ ಹಾಗೂ ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕಾತಿ ಸಂಬಂಧ ಅಭಿಪ್ರಾಯ ಕ್ರೋಡೀಕರಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಸರಣಿ ಸಭೆಗಳ ಮಾಹಿತಿಯನ್ನು ರಾಹುಲ್‌ಗಾಂಧಿ ಗಮನಕ್ಕೆ ತಂದಿದ್ದಾರೆ.

ರಾಜ್ಯ ಸರಕಾರ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ದಲಿತ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿರುವುದು ಬಹಿರಂಗಗೊಂಡಿದೆ. ಇದರಿಂದಾಗಿ, ಬಿಜೆಪಿಯು ದಲಿತರ ಮತಗಳನ್ನು ಸೆಳೆಯಲು ಕಸರತ್ತು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ದಲಿತ ಸಮುದಾಯದ ವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವುದು ಸೂಕ್ತವಾದುದ್ದಲ್ಲ ಎಂಬ ಅಂಶ ರಾಹುಲ್‌ಗಾಂಧಿಗೆ ಮನವರಿಕೆಯಾಗಿದೆ.

ಒಬ್ಬರಿಗೆ ಒಂದೇ ಹುದ್ದೆ ಎಂಬ ಕಾಂಗ್ರೆಸ್ ಪಕ್ಷದ ನಿಯಮದಂತೆ ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರೆಯುವುದಾದರೆ ಒಂದು ತಿಂಗಳೊಳಗೆ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ಸಂಘಟನೆಯತ್ತ ಮುಖ ಮಾಡಬೇಕು ಎಂದು ರಾಹುಲ್‌ಗಾಂಧಿ ವೌಖಿಕವಾಗಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕ ಭಾಗದ ಪ್ರಬಲ ಲಿಂಗಾಯತ ಸಮುದಾಯದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆಯೂ ಕೇಳಿ ಬಂದಿತ್ತು. ಆದರೆ, ಈಗಾಗಲೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ಲಿಂಗಾಯತ ಸಮುದಾಯದ ಲಕ್ಷ್ಮಿ ಹೆಬ್ಬಾಳ್ಕರ್, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಸವನಗೌಡ ಬಾದರ್ಲಿ ಆಯ್ಕೆಯಾಗಿ ದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವು ಅದೇ ಸಮುದಾಯಕ್ಕೆ ಸೇರಿದವರಿಗೆ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ. ಈ ಎಲ್ಲ ಅಂಶಗಳ ಆಧಾರದಲ್ಲಿ ಪರಮೇಶ್ವರ್ ಮುಂದುವರಿಸಲು ರಾಹುಲ್‌ಗಾಂಧಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News