ಐಎಎಸ್ ಅಧಿಕಾರಿಗಳಿಂದ ಕಿರುಕುಳ ಆರೋಪ ಮುಖ್ಯಕಾರ್ಯದರ್ಶಿಗೆ ಕೆ.ಮಥಾಯ್ ದೂರು

Update: 2017-05-29 14:33 GMT

ಬೆಂಗಳೂರು, ಮೇ 29: ಕೆಲ ಐಎಎಸ್ ಅಧಿಕಾರಿಗಳು ತಮ್ಮ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಕುರಿತು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಡಾ.ಸುಭಾಷ್‌ಚಂದ್ರ ಕುಂಟಿಯಾಗೆ ಹಿರಿಯ ಕೆಎಎಸ್ ಅಧಿಕಾರಿ ಕೆ.ಮಥಾಯ್ ಮೂರು ಪುಟಗಳ ದೂರು ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿಯನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಸುಮಾರು ಅರ್ಧಗಂಟೆ ಕಾಲ ಮಾತುಕತೆ ನಡೆಸಿ ಐಎಎಸ್ ಅಧಿಕಾರಿಗಳಾದ ಎಂ.ಲಕ್ಷ್ಮೀನಾರಾಯಣ ಹಾಗೂ ಡಾ.ಕಲ್ಪನಾ ವಿರುದ್ಧ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದ್ದ ಎರಡು ಸಾವಿರ ಕೋಟಿ ರೂ.ಗಳ ಹಗರಣವನ್ನು ಬಯಲಿಗೆ ತಂದಿದ್ದೆ. ಆ ಹಗರಣಕ್ಕೆ ಸಂಬಂಧಿಸಿದ ವರದಿಯಲ್ಲಿ ಹಿಂದಿನ ಬಿಬಿಎಂಪಿ ಆಯುಕ್ತರಾಗಿದ್ದ ಎಂ.ಲಕ್ಷ್ಮೀನಾರಾಯಣ ಹೆಸರಿತ್ತು ಎಂದು ಮಥಾಯ್ ಹೇಳಿದರು.

ಇದರಿಂದಾಗಿ, ಮೇಲಾಧಿಕಾರಿಗಳ ಮೂಲಕ ನನಗೆ ಕಿರುಕುಳ ನೀಡಲಾಗುತ್ತಿದೆ. ನನಗೆ ಸರಿಯಾಗಿ ವೇತನ ಹಾಗೂ ಭಡ್ತಿ ನೀಡದೆ ತಡೆ ಹಿಡಿಯಲಾಗಿದೆ. ಅದೇ ರೀತಿ ಮತ್ತೋರ್ವ ಐಎಎಸ್ ಅಧಿಕಾರಿ ಡಾ.ಕಲ್ಪನಾ ನನಗೆ ಸರಕಾರಿ ವಾಹನ ನೀಡದೆ ಕಿರುಕುಳ ನೀಡುತ್ತಿದ್ದರು. ಈ ಎಲ್ಲ ಸಮಸ್ಯೆಗಳ ಬಗ್ಗೆ ಮುಖ್ಯಕಾರ್ಯದರ್ಶಿಗೆ ಮಾಹಿತಿ ನೀಡಿದ್ದೇನೆ ಎಂದು ಅವರು ತಿಳಿಸಿದರು.

ನಾನು ಪ್ರಾಮಾಣಿಕವಾಗಿ ಇರುವುದು ಹಿರಿಯ ಅಧಿಕಾರಿಗಳಿಗೆ ಹಿಡಿಸುತ್ತಿಲ್ಲ. ಅಕ್ರಮಗಳನ್ನು ಬಯಲು ಮಾಡಿದರೆ, ನನ್ನನ್ನು ಎತ್ತಂಗಡಿ ಮಾಡಲಾಗುತ್ತಿದೆ. ನನಗೆ ಕೊಲೆ ಬೆದರಿಕೆಯಿದ್ದು, ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮುಖ್ಯಕಾರ್ಯದರ್ಶಿಗೆ ಮನವಿ ಮಾಡಿದ್ದೇನೆ ಎಂದು ಮಥಾಯ್ ಹೇಳಿದರು.

ನನ್ನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮುಖ್ಯಕಾರ್ಯದರ್ಶಿ ಡಾ.ಸುಭಾಷ್ ಚಂದ್ರ ಕುಂಟಿಯಾ ಭರವಸೆ ನೀಡಿದ್ದಾರೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ ಎಂದು ಮಥಾಯ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News