ಮೇ 30: ಹೊಟೇಲ್, ರೆಸ್ಟೋರೆಂಟ್, ಔಷಧಿ ಅಂಗಡಿಗಳು ಬಂದ್

Update: 2017-05-29 16:56 GMT

 ಬೆಂಗಳೂರು, ಮೇ 29: ಆನ್‌ಲೈನ್‌ನಲ್ಲಿ ಔಷಧಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದನ್ನು ಖಂಡಿಸಿ ಹಾಗೂ ಹೊಟೇಲ್‌ಗಳಿಗೆ ಶೇ.5 ರಷ್ಟು ಜಿಎಸ್‌ಟಿಯಲ್ಲಿ ತೆರಿಗೆ ನಿಗದಿ ಮಾಡುವಂತೆ ಆಗ್ರಹಿಸಿ ನಾಳೆ(ಮೇ 30) ರಾಜ್ಯಾದ್ಯಂತ ಹೊಟೇಲ್ ಮತ್ತು ಔಷಧಿ ಅಂಗಡಿಗಳನ್ನು ಮುಚ್ಚಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಂದು ದಿನದ ಮಟ್ಟಿಗೆ ಎಲ್ಲ ಹೊಟೇಲ್‌ಗಳಿಗೆ ಬೀಗ ಹಾಕಲು ತೀರ್ಮಾನಿಸಲಾಗಿದೆ. ಆದುದರಿಂದ ಹೊಟೇಲ್, ರೆಸ್ಟೋರೆಂಟ್ ಊಟದ ಮೇಲೆ ಅವಲಂಬಿತರಾಗಿರುವವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಅಲ್ಲದೆ, ಹೊಟೇಲ್‌ಗಳ ಮುಷ್ಕರಕ್ಕೆ ಅಲ್ಲಲ್ಲಿ ಬೇಕರಿ, ಸಿಹಿ ತಿಂಡಿ ಮಾರಾಟಗಾರರು ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬೇಕರಿಗಳೂ ಮುಚ್ಚಲು ತೀರ್ಮಾನಿಸಿರುವುದರಿಂದ, ಬೇಕರಿ ತಿನಿಸುಗಳು ಸಿಗುವುದು ಅನುಮಾನವಾಗಿದೆ.

ಜಿಎಸ್‌ಟಿ ಹೆಚ್ಚಳ ಖಂಡಿಸಿ ವಿರೋಧಿಸಿ ಹೊಟೇಲ್ ಉದ್ಯಮಿದಾರರು ಬಂದ್‌ಗೆ ಕರೆ ನೀಡಿದ್ದರೆ, ಮತ್ತೊಂದು ಕಡೆಯಲ್ಲಿ ಆನ್‌ಲೈನ್ ಔಷಧ ಮಾರಾಟಕ್ಕೆ ಅವಕಾಶ ಕಲ್ಪಿಸಿರುವುದರಿಂದ ತಮ್ಮ ವ್ಯಾಪಾರಕ್ಕೆ ಕುತ್ತು ಬರುತ್ತದೆ ಎಂದು ಮೆಡಿಕಲ್ ಸ್ಟೋರ್ ಮಾಲಕರು, ಔಷಧಿ ಅಂಗಡಿಗಳಿಗೆ ಬೀಗ ಹಾಕಿ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿವೆ. ಹೀಗಾಗಿ ಇಂದು ರಾಜ್ಯಾದ್ಯಂತ ಎಲ್ಲ ಮೆಡಿಕಲ್ ಶಾಪ್‌ಗಳಿಗೆ ಬೀಗ ಹಾಕಲಾಗುತ್ತದೆ ಎಂದು ಬೆಂಗಳೂರು ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ.ಕುಮಾರ್ ತಿಳಿಸಿದರು. ಸಾಮಾನ್ಯವಾಗಿ ಎಂತಹ ಪ್ರತಿಭಟನೆ, ಮುಷ್ಕರ, ಬಂದ್ ನಡೆದರೂ ಸದಾ ತೆರೆದು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದ ಔಷಧ ಅಂಗಡಿಗಳು, ಇದೀಗ ಅವರೇ ಪ್ರತಿಭಟನೆ ಮುಂದಾಗಿದ್ದಾರೆ. ಇದರಿಂದಾಗಿ ಇಂದು ನಗರದಲ್ಲಿ ಔಷಧಗಳ ಖರೀದಿಯಲ್ಲಿ ವ್ಯತ್ಯಯ ಉಂಟಾಗಲಿದೆ. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಆಸ್ಪತ್ರೆ, ಖಾಸಗಿ ಕ್ಲಿನಿಕ್‌ಗಳಲ್ಲಿ ಮೆಡಿಕಲ್‌ಗಳನ್ನು ತೆರೆಯಲಾಗಿರುತ್ತದೆ ಎಂದು ಕುಮಾರ್ ಹೇಳಿದರು.

ಮುಷ್ಕರದ ಭಾಗವಾಗಿ ಇಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹೊಟೇಲ್ ಮಾಲಕರು ಪ್ರತಿಭಟನೆ ನಡೆಸುತ್ತಿದ್ದರೆ, ಬನ್ನಪ್ಪ ಪಾರ್ಕ್‌ನಲ್ಲಿ ಮೆಡಿಕಲ್ ಸ್ಟೋರ್ ಮಾಲಕರು ಪ್ರತಿಭಟನೆ ನಡೆಸಲಿದ್ದಾರೆ.

ಬೇಡಿಕೆಗಳು:

- ಜಿಎಸ್‌ಡಿಯಲ್ಲಿ ಅಧಿಕ ತೆರಿಗೆ ನಿಗದಿ ಮಾಡಲು ಮುಂದಾಗಿರುವುದಕ್ಕೆ ಖಂಡನೆ. ಶೇ.5 ರಷ್ಟು ತೆರಿಗೆ ನಿಗದಿ ಮಾಡಲು ಆಗ್ರಹ -ವೈದ್ಯರು ನೀಡುವ ಪ್ರಿಸ್ಕ್ರಿಪ್ಷನ್ ಸ್ಕಾನ್ ಮಾಡಿ ಮೆಡಿಕಲ್ ಸ್ಟೋರ್‌ನವರು ಸೆಂಟ್ರಲ್-ಇ-ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ವ್ಯವಸ್ಥೆ ಜಾರಿಗೆ ಮುಂದಾಗಿರುವುದು ಬೇಡ ಎಂದು ಒತ್ತಾಯ

- ಆನ್‌ಲೈನ್‌ನಲ್ಲಿ ಔಷಧ ಮಾರಾಟಕ್ಕೆ ವಿರೋಧ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News