ಶಾಸಕ ಮುನಿರತ್ನ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಕಾರ್ಪೊರೇಟರ್‌ಗಳು

Update: 2017-05-29 15:55 GMT

ಬೆಂಗಳೂರು, ಮೇ 29: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ಅವರ ಬೆಂಬಲಿಗರು ತಮ್ಮ ಮೇಲೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೂವರು ಮಹಿಳಾ ಸದಸ್ಯರು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಜರುಗಿತು.

ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ, ಜೆಪಿ ಪಾರ್ಕ್ ವಾರ್ಡ್‌ನ ಮಮತಾ ವಾಸುದೇವ್ ಹಾಗೂ ಹೆಚ್‌ಎಂಟಿ ವಾರ್ಡ್‌ನ ಆಶಾ ಸುರೇಶ್, ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಮುಂದಾದಾಗ, ಪಕ್ಕದಲ್ಲಿದ್ದ ಬಿಬಿಎಂಪಿ ಸದಸ್ಯರು ಬಾಟಲಿಗಳನ್ನು ಕಸಿಯುವ ಮೂಲಕ ಅವಘಡವನ್ನು ತಪ್ಪಿಸಿದರು.

ಈ ಘಟನೆ ಸಭೆಯಲ್ಲಿ ಕೋಲಾಹಲ, ಮಾತಿನ ಚಕಮಕಿಗೆ ಕಾರಣವಾಯಿತು. ಸಭೆ ಆರಂಭಗೊಂಡ ಕ್ಷಣದಿಂದ ಶಾಸಕ ಮುನಿರತ್ನ ಅವರ ಬೆಂಗಲಿಗರಿಂದ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಈ ಮೂವರು ಮಹಿಳಾ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನಾ ಧರಣಿ ನಡೆಸಿದರು.

ಶಾಸಕ ಮುನಿರತ್ನ ಮತ್ತು ಅವರ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಶಾಸಕ ಮುನಿರತ್ನ ಅವರ ಬೆಂಬಲಿಗರು ಕಳೆದ ಎರಡು ವರ್ಷಗಳಿಂದ ಪದೇ ಪದೇ ತಮ್ಮ ಮೇಲೆ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆಗಳನ್ನು ಹೂಡುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಹಿಳಾ ಸದಸ್ಯರ ಪ್ರತಿಭಟನೆಗೆ ಬಿಜೆಪಿ ಹಾಗೂ ಜೆಡಿಎಸ್‌ನ ಎಲ್ಲ ಸದಸ್ಯರು ಬೆಂಬಲಕ್ಕೆ ನಿಂತು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಪರಿಣಾಮ ಸಭೆ ಗದ್ದಲ, ಕೋಲಾಹಲದಲ್ಲಿ ಮುಳುಗಿಹೋಯಿತು. ಈ ವೇಳೆ ಮೇಯರ್ ಜಿ. ಪದ್ಮಾವತಿ ಮಾತನಾಡಿ, ನಾನು ಕೂಡಾ ಒಂದು ಹೆಣ್ಣು. ನನಗೂ ನಿಮ್ಮ ನೋವು ಅರ್ಥವಾಗುತ್ತದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನಗರದಲ್ಲಿಲ್ಲ. ಅವರು ಬಂದ ತಕ್ಷಣವೇ ಸಂಬಂಧಪಟ್ಟ ಶಾಸಕರು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು, ಮೂರು ಪಕ್ಷಗಳ ಶಾಸಕರು ಹಾಗೂ ಮಹಿಳಾ ಸದಸ್ಯರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ಮೇಯರ್ ಭರವಸೆಗೂ ಸೊಪ್ಪು ಹಾಕದ ಈ ಮೂವರು ಮಹಿಳಾ ಸದಸ್ಯರು ಪ್ರತಿಭಟನೆಯನ್ನು ಜೋರು ಮಾಡಿದರು. ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಶರವಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಮಹಿಳಾ ಸದಸ್ಯೆ ಮೇಲೆ ಹಲ್ಲೆ ನಡೆದಿದೆ. ಅಲ್ಲದೆ, ಅವರ ಸೀರೆಯನ್ನು ಎಳೆದಿದ್ದಾರೆ. ಅವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನೀವು ಅಲ್ಲೇ ಇದ್ದಾಗ ಈ ಘಟನೆ ನಡೆದಿದೆ. ಶಾಸಕರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ತೀಕ್ಷ್ಣವಾಗಿ ಬಿಜೆಪಿ ಸದಸ್ಯರು ಪ್ರಶ್ನಿಸಿದರು.

ಇದನ್ನು ಒಪ್ಪದ ಮೇಯರ್, ಸಭೆಯಲ್ಲಿ ಸುಳ್ಳು ಹೇಳಬೇಡಿ. ಆ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೊರಟಾಗಲೆ ನಿರ್ಗಮಿಸಿದ್ದೆ. ನಂತರವೇ ಈ ಘಟನೆ ನಡೆದಿದೆ ಎಂದು ಸಮರ್ಥಿಸಿಕೊಂಡರು. ಜೆಡಿಎಸ್ ಶಾಸಕ ಗೋಪಾಲಯ್ಯ, ಮಹಿಳಾ ಸದಸ್ಯರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಪಟ್ಟ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಾರೆ. ಆದರೆ, ಸದಸ್ಯರಿಗೆ ಗೌರವ ಇಲ್ಲವೇ. ಸಂಬಂಧಪಟ್ಟ ಎಲ್ಲ ಕೇಸ್‌ಗಳನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ ಮಾತನಾಡಿ, ನನಗಾದ ಪರಿಸ್ಥಿತಿ ಬೇರೆ ಯಾವ ಹೆಣ್ಣು ಮಗಳಿಗೂ ಬರಬಾರದು. ಶಾಸಕರನ್ನು ತಕ್ಷಣವೇ ಬಂಧಿಸಬೇಕು. ನಾನು ಸತ್ತು ಹೋದ ಮೇಲೆ ಬಂಧಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆ.ಪಿ.ಪಾರ್ಕ್‌ನ ಮಮತಾ ವಾಸುದೇವ್, ಮೇ 15 ರಂದು ನನ್ನ ಮೇಲೆ ಅನಗತ್ಯವಾಗಿ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಆಯುಕ್ತರಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ, ಮೂವರು ಕಾರ್ಪೋರೇಟರ್‌ಗಳ ಗಂಡಂದಿರ ಮೇಲೆ ರೌಡಿ ಶೀಟರ್‌ಗಳೆಂದು ದೂರು ದಾಖಲಿಸಲಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.

ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಮಹಿಳಾ ಸದಸ್ಯರ ಮೇಲೆ ಏನಾದರೂ ಆದರೆ ಅದಕ್ಕೆ ಆಯುಕ್ತರು ಮತ್ತು ಅಧಿಕಾರಿಗಳೇ ಹೊಣೆ ಮಾಡಬೇಕು ಎಂದು ಒತ್ತಾಯಿಸಿದರು.

ಧರಣಿಯನ್ನು ಕೈಬಿಟ್ಟು ಅವರ ಸ್ಥಾನಗಳಿಗೆ ತೆರಳುವಂತೆ ಪದೇ ಪದೇ ಮೇಯರ್ ಮನವಿ ಮಾಡಿದರೂ, ಯಾವುದೇ ಪ್ರಯೋಜನ ವಾಗದೆ ಸಭೆಯನ್ನು ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News