‘ಉಪವಾಸದ ನೆಪ’ದಲ್ಲಿ ದಲಿತರ ಮನೆ ಉಪಾಹಾರ ನಿರಾಕರಿಸಿದ ಸಂಸದೆ ಶೋಭಾ

Update: 2017-05-30 04:35 GMT

ಕೊಪ್ಪಳ, ಮೇ 29: ದಲಿತರ ಮದುವೆ ಸಂದರ್ಭದಲ್ಲಿ ಅಂಗಡಿ-ಹೊಟೇಲ್‌ಗಳನ್ನು ಮುಚ್ಚಿ ಅಸ್ಪಶ್ಯತೆ ಆಚರಣೆ ಮಾಡಿದ ತಾಲೂಕಿನ ಹಿರೇಬಗನಾಳ ಗ್ರಾಮದ ದಲಿತ ಮುಖಂಡ ಲಕ್ಷ್ಮಣ ಮಾದನೂರು ಅವರ ಮನೆಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉಪಾಹಾರ ಸೇವಿಸಿದ್ದಾರೆ. ಆದರೆ, ದಲಿತ ಮುಖಂಡನ ಮನೆಯೊಳಗೆ ಯಡಿಯೂರಪ್ಪ ಶೂ ಹಾಕಿಕೊಂಡೇ ಹೋಗಿದ್ದು, ಬಿಎಸ್‌ವೈ ಜೊತೆಗಿದ್ದ ಸಂಸದೆ ಶೋಭಾ ಕರಂದ್ಲಾಜೆ ಉಪವಾಸದ ನೆಪದಲ್ಲಿ ದಲಿತನ ಮನೆಯಲ್ಲಿ ಉಪಾಹಾರ ಸೇವಿಸದೆ ಹೊರ ನಡೆದ ಘಟನೆ ಸುದ್ದಿಗೆ ಗ್ರಾಸವಾಗಿದ್ದು, ತೀವ್ರ ಆಕ್ಷೇಪಕ್ಕೂ ಕಾರಣವಾಗಿದೆ.

ಬಿಜೆಪಿ ಜನ ಸಂಪರ್ಕ ಅಭಿಯಾನದ ಅಂಗವಾಗಿ ಕೊಪ್ಪಳದಲ್ಲಿ ರೈತರು ತುಂಗಭದ್ರಾ ಜಲಾಶಯ ಹೂಳೆತ್ತುವ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ಬಿಎಸ್‌ವೈ, ಹೂಳೆತ್ತುವ ಕಾರ್ಯದಲ್ಲಿ ತೊಡಗಿದ್ದ ರೈತರಿಗೆ ಬೆಂಬಲ ಸೂಚಿಸಿದರು. ಅಲ್ಲದೆ, ಬರ ಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ರಾಜ್ಯ ಸರಕಾರ ಧಾವಿಸಬೇಕು ಎಂದು ಆಗ್ರಹಿಸಿದರು.

ಆ ಬಳಿಕ ಕೊಪ್ಪಳ ನಗರದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ, ಹಿರೇಬಗನಾಳ ಗ್ರಾಮದ ದಸಂಸ ಮುಖಂಡ ಲಕ್ಷ್ಮಣ ಮಾದನೂರು ಮನೆ ಭೇಟಿ ನೀಡಿದರು.

ಉಪ್ಪಿಟ್ಟು-ಸಿರಾ: ದಲಿತ ಮುಖಂಡ ಲಕ್ಷ್ಮಣ ಮನೆಗೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಖಂಡರೊಂದಿಗೆ ಬಿಎಸ್‌ವೈ ದಿಢೀರ್ ಭೇಟಿ ನೀಡಿದರು. ಹೀಗಾಗಿ ಲಕ್ಷ್ಮಣ ಮನೆಯಲ್ಲಿ ಬಿಸಿಬಿಸಿ ಉಪ್ಪಿಟ್ಟು, ಸಿರಾ (ಕೇಸರಿಬಾತ್) ಸಿದ್ದಪಡಿಸಲಾಗಿತ್ತು. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಸಂಸದರಾದ ಕರಡಿ ಸಂಗಣ್ಣ, ಶೋಭಾ ಕರಂದ್ಲಾಜೆ ಸೇರಿ ಹಲವು ಮುಖಂಡರು ಇದ್ದರು. ಶೋಭಾ ಕರಂದ್ಲಾಜೆ ಹೊರತುಪಡಿಸಿ, ಎಲ್ಲ ಮುಖಂಡರು ಉಪಾಹಾರ ಸೇವಿಸಿದರು.

ಶೋಭಾ ಉಪಾಹಾರ ಸೇವಿಸದೆ ಉಪವಾಸದ ಕಾರಣ ನೀಡಿದರು ಎಂದು ದಲಿತ ಮುಖಂಡ ಲಕ್ಷ್ಮಣ ಮಾದನೂರು ‘ವಾರ್ತಾಭಾರತಿ’ ಪತ್ರಿಕೆಗೆ ತಿಳಿಸಿದರು.

ಶೂ ಧರಿಸಿ ಬಂದ ಬಿಎಸ್‌ವೈ: ನಮ್ಮ ಮನೆಯ ಪಡಸಾಲೆಯಲ್ಲೆ ಎಲ್ಲರಿಗೂ ಉಪಾಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಯಡಿಯೂರಪ್ಪ, ಶೂ ಧರಿಸಿಯೇ ಬಂದು ನಮ್ಮ ಮನೆಯಲ್ಲಿ ಉಪಾಹಾರ ಸೇವಿಸಿದರು.

ಪಡಸಾಲೆಗೆ ನಾವು ಸೇರಿ ಎಲ್ಲರೂ ಚಪ್ಪಲಿ ಧರಿಸಿಯೇ ಬರುತ್ತೇವೆ ಎಂದು ಲಕ್ಷ್ಮಣ ಸ್ಪಷ್ಟಣೆ ನೀಡಿದರು.

ಸಹಿಸಲು ಸಾಧ್ಯವಿಲ್ಲ: ಹಿರೇಬಗನಾಳ ಗ್ರಾಮದಲ್ಲಿ ದಲಿತ ಸಮುದಾಯದ ಮದುವೆ, ಶವ ಸಂಸ್ಕಾರ ಸಂದರ್ಭಗಳಲ್ಲಿ ಎಲ್ಲ ಅಂಗಡಿ-ಹೊಟೇಲ್‌ಗಳನ್ನು ಬಂದ್ ಮಾಡುವ ಮೂಲಕ ಅಸ್ಪಶ್ಯತೆ ಆಚರಣೆ ಮಾಡಲಾಗುತ್ತಿದೆ. ದಲಿತರನ್ನು ಕೆಲಸಕ್ಕೂ ಕರೆಯದೆ ಒಂದು ರೀತಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ತಲೆಮಾರಿಗೆ ಅಸ್ಪಶ್ಯತೆ, ಜಾತಿ ಅವಮಾನ, ಅಸಮಾನತೆ ಕೊನೆಯಾಗಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಮ್ಮ ಮನೆಗೆ ಬಂದು ಹೋದರೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸೌಜನ್ಯಕ್ಕಾದರೂ ಗ್ರಾಮಕ್ಕೂ ಭೇಟಿ ನೀಡಿಲ್ಲ

-ಲಕ್ಷ್ಮಣ ಮಾದನೂರು ದಸಂಸ ಜಿಲ್ಲಾ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News