ಐಟಿ ಉದ್ಯೋಗಿಗಳ ಸಮಸ್ಯೆ ಪರಿಹಾರ:ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
ಬೆಂಗಳೂರು, ಮೇ 31: ಐಟಿ-ಬಿಟಿ ಕಂಪೆನಿಗಳ ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸುವುದು ಸೇರಿದಂತೆ ಅವರ ಸಮಸ್ಯೆಗಳ ಪರಿಹರಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಐಟಿ ಉದ್ಯೋಗಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶೀಘ್ರವೆ ಐಟಿ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡುವುದು ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ, ಉದ್ಯೋಗಿಗಳ ಸಮಸ್ಯೆಯನ್ನು ಆಲಿಸಿ, ಸಾಧ್ಯವಾದಷ್ಟು ಮಟ್ಟಿಗೆ ಅವುಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ.
ಈ ಮೊದಲು ತಮ್ಮ ಸಮಸ್ಯೆಗಳ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸುವಂತೆ ಸಚಿವರು ಹೇಳಿದ್ದರು. ಆದರೆ, ಇತ್ತೀಚೆಗೆ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸರಕಾರ ಐಟಿ-ಬಿಟಿ ಉದ್ಯೋಗಿಗಳ ಸಮಸ್ಯೆ ಬಗೆಹರಿಸಲು ಸಿದ್ಧವಿದ್ದು, ನೌಕರಿಯಿಂದ ವಜಾಗೊಂಡ ನೌಕರರ ಸಹಾಯಕ್ಕಾಗಿ ಕಾನೂನು ಸಲಹೆ ಪಡೆಯುವುದು ಎಂದು ತಿಳಿಸಿದ್ದಾರೆ.
ಐಟಿ ಉದ್ಯೋಗಿಗಳ ಸಂಘದ ಅಧ್ಯಕ್ಷ ಸೈಯ್ಯದ್ ಮುಖೀಮುದ್ದೀನ್, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಈ ಮೇಲ್ ಸಂದೇಶದಲ್ಲಿ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವೇ ಸಭೆ ಏರ್ಪಡಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದರು.
ವಿವಿಧ ರಾಜ್ಯಗಳ ಸರಕಾರಗಳಿಗೆ ಮನವಿ ಸಲ್ಲಿಸಿದ್ದ ಸೆಯ್ಯದ್, ಉದ್ಯೋಗಿಗಳ ಕಾನೂನು ಬಾಹಿರ ವಜಾ ಸಂಬಂಧ ಬೆಂಗಳೂರಿನ ಕಾರ್ಮಿಕ ಆಯೋಗಕ್ಕೆ ದೂರು ನೀಡಿದ್ದರು. ಉದ್ಯೋಗಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದರು ವಜಾ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದರು ಎಂಬುದನ್ನು ಸಚಿವರ ಗಮನಕ್ಕೆ ತಂದಿದ್ದಾರೆ.