ಎಸ್‌ಬಿಐನಿಂದ ಎಟಿಎಂ,ಇತರ ವಹಿವಾಟುಗಳಿಗೆ ನೂತನ ಶುಲ್ಕ ಜಾರಿ

Update: 2017-06-01 17:17 GMT

ಹೊಸದಿಲ್ಲಿ,ಜೂ.1, ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ತನ್ನ ಮೊಬೈಲ್ ಆ್ಯಪ್ ‘ಎಸ್‌ಬಿಐ ಬ್ಯಾಂಕ್ ಬಡಿ ’ಯ ಬಳಕೆದಾರರು ಎಟಿಎಂ ಮೂಲಕ ಹಣ ತೆಗೆಯುವುದಕ್ಕೆ ಮತ್ತು ಇತರ ವಿವಿಧ ವಹಿವಾಟುಗಳ ಮೇಲೆ ಪರಿಷ್ಕೃತ ಶುಲ್ಕವನ್ನು ಜೂ.1ರಿಂದ ಜಾರಿಗೊಳಿಸಿದೆ. ತನ್ನ ಮೊಬೈಲ್ ವ್ಯಾಲೆಟ್ ‘ಎಸ್‌ಬಿಐ ಬ್ಯಾಂಕ್ ಬಡಿ ’ಮೂಲಕ ಎಟಿಎಂನಿಂದ ಹಣ ಹಿಂದೆಗೆಯುವುದರ ಮೇಲೆ ಮಾತ್ರ 25 ರೂ.ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಎಸ್‌ಬಿಐ ಸ್ಪಷ್ಟೀಕರಣ ನೀಡಿದೆ.

  ಮಹಾನಗರಗಳಲ್ಲಿಯ ಸಾಮಾನ್ಯ ಉಳಿತಾಯ ಖಾತೆದಾರರು ತಿಂಗಳಿಗೆ ಎಂಟು ಬಾರಿ ಎಟಿಎಂ ಮೂಲಕ ಹಣ ತೆಗೆಯಬಹುದಾದ ಉಚಿತ ಸೌಲಭ್ಯ ಮುಂದುವರಿ ಯಲಿದೆ. ಎಸ್‌ಬಿಐ ಎಟಿಎಂ ಮೂಲಕ ಐದು ಬಾರಿಯ ಜೊತೆಗೆ ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ನಡೆಸುವ ಮೂರು ವಹಿವಾಟುಗಳೂ ಇದರಲ್ಲಿ ಸೇರಿವೆ. ಇತರ ನಗರಗಳಲ್ಲಿ ಈ ಉಚಿತ ಸೌಲಭ್ಯವು ತಿಂಗಳಿಗೆ 10 ವಹಿವಾಟುಗಳಿಗೆ ಸೀಮಿತವಾಗಿದ್ದು, ಎಸ್‌ಬಿಐ ಎಟಿಎಂ ಮೂಲಕ ಐದು ಬಾರಿಯ ಜೊತೆಗೆ ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ನಡೆಸುವ ಐದು ವಹಿವಾಟುಗಳೂ ಇದರಲ್ಲಿ ಸೇರಿವೆ. ಬ್ಯಾಂಕ್ ಶಾಖೆಗಳ ಮೂಲಕ ಹಣವನ್ನು ಹಿಂದೆಗೆಯುವ ವಹಿವಾಟು ಇದರಲ್ಲಿ ಒಳಗೊಂಡಿಲ್ಲ.

 ತಿಂಗಳಿಗೆ ನಾಲ್ಕು ಬಾರಿ ಎಟಿಎಂನಿಂದ ಹಣವನ್ನು ಹಿಂದೆಗೆಯುವ ಉಚಿತ ಸೌಲಭ್ಯದ ಮಿತಿ ಬೇಸಿಕ್ ಉಳಿತಾಯ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ. ಇದು ಸೀಮಿತ ಸೇವೆಗಳ ಬ್ಯಾಂಕ್ ಖಾತೆಯಾಗಿದ್ದು, ಯಾವುದೇ ಶುಲ್ಕಗಳ ಹೊರೆಯಿಲ್ಲದೆ ಉಳಿತಾಯ ವನ್ನು ಆರಂಭಿಸಲು ಸಮಾಜದ ಬಡವರ್ಗಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊದಿದೆ. ಈ ಖಾತೆಗಳಿಗೆ ಎಟಿಎಂ ಕಮ್ ಡೆಬಿಟ್ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇವುಗಳಿಗೆ ವಾರ್ಷಿಕ ನಿರ್ವಹಣೆ ವೆಚ್ಚಗಳಿರುವುದಿಲ್ಲ. ಬೇಸಿಕ್ ಉಳಿತಾಯ ಖಾತೆಯನ್ನು ಹೊಂದಿರುವ ವ್ಯಕ್ತಿ ಇತರ ಯಾವುದೇ ಉಳಿತಾಯ ಖಾತೆಯನ್ನು ತೆರೆಯಲು ಅರ್ಹನಾಗಿರುವುದಿಲ್ಲ.

ಎಸ್‌ಬಿಐ ತನ್ನ ಗ್ರಾಹಕರಿಗೆ ವಿವಿಧ ನಗದು ವಹಿವಾಟುಗಳ ಮೇಲೆ ಸೇವಾಶುಲ್ಕಗಳನ್ನು ಸಹ ಜೂ.1ರಿಂದ ಪರಿಷ್ಕರಿಸಿದೆ.

ಇಂಟರ್ನೆಟ್ ಬ್ಯಾಂಕಿಂಗ್/ಯುಪಿಐ/ಯುಎಸ್‌ಎಸ್‌ಡಿ ಮೂಲಕ ಐಎಂಪಿಎಸ್ ಹಣ ವರ್ಗಾವಣೆ ಶುಲ್ಕ 1ಲ.ರೂ.ವರೆಗಿನ ಮೊತ್ತಕ್ಕೆ 5 ರೂ., 1ಲ.ರೂ.ನಿಂದ ಮೇಲ್ಪಟ್ಟು 2 ಲ.ರೂ.ವರೆಗೆ 15 ರೂ.ಮತ್ತು 2.ಲ.ರೂ.ಗಿಂತ ಮೇಲ್ಪಟ್ಟು 5 ಲ.ರೂ.ವರೆಗೆ 25 ರೂ.ಆಗಿರುತ್ತದೆ. ಜೊತೆಗೆ ಈ ಎಲ್ಲ ವಹಿವಾಟುಗಳಿಗೆ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.

ಹಾಳಾದ/ವಿರೂಪಗೊಂಡಿರುವ ನೋಟುಗಳ ಬದಲಾವಣೆಗೆ 20 ನೋಟುಗಳು ಮತ್ತು 5,000 ರೂ.ವೌಲ್ಯದವರೆಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.

20 ಕ್ಕಿಂತ ಅಧಿಕ ನೋಟುಗಳಿದ್ದರೆ ಅಷ್ಟೂ ನೋಟುಗಳಿಗೆ ತಲಾ 2 ರೂ.ಸೇವಾಶುಲ್ಕ ಮತ್ತು ಸೇವಾತೆರಿಗೆಯನ್ನು ವಿಧಿಸಲಾಗುತ್ತದೆ. 5,000ರೂ.ಗಿಂತ ಹೆಚ್ಚಿನ ವೌಲ್ಯದ ನೋಟುಗಳಿಗೆ ತಲಾ 2 ರೂ. ಅಥವಾ ಪ್ರತಿ ಸಾವಿರಕ್ಕೆ 5 ರೂ. ಮತ್ತು ಸೇವಾತೆರಿಗೆ...ಒಟ್ಟು ನೋಟುಗಳಿಗೆ ಈ ಪೈಕಿ ಯಾವುದು ಹೆಚ್ಚೋ ಅದನ್ನು ವಿಧಿಸಲಾಗುತ್ತದೆ.

ಬೇಸಿಕ್ ಉಳಿತಾಯ ಖಾತೆಗಳಿಗೆ ಚೆಕ್‌ಬುಕ್,ಎಟಿಎಂ ಕಾರ್ಡ್ ವಿತರಣೆ ಮತ್ತು ಹಣ ಹಿಂದೆಗೆತದ ಮೇಲಿನ ಸೇವಾ ಶುಲ್ಕಗಳನ್ನೂ ಪರಿಷ್ಕರಿಸಲಾಗಿದೆ.

 10 ಚೆಕ್‌ಗಳಿರುವ ಪುಸ್ತಕಕ್ಕೆ ಈ ಗ್ರಾಹಕರು 30 ರೂ.ಶುಲ್ಕ ಮತ್ತು ಸೇವಾ ತೆರಿಗೆ, 25 ಚೆಕ್‌ಗಳಿರುವ ಪುಸ್ತಕಕ್ಕೆ 75 ರೂ.ಶುಲ್ಕ ಮತ್ತು ಸೇವಾ ತೆರಿಗೆ ಹಾಗೂ 50 ಚೆಕ್‌ಗಳಿ ರುವ ಪುಸ್ತಕಕ್ಕೆ 150 ರೂ.ಶುಲ್ಕ ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

ಎಟಿಎಂ ಕಾರ್ಡ್‌ಗಳ ಪೈಕಿ ರುಪೇ ಕ್ಲಾಸಿಕ್ ಕಾರ್ಡ್‌ನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಇತರ ಎಲ್ಲ ಡೆಬಿಟ್ ಕಾರ್ಡ್‌ಗಳಿಗೆ ಜೂ.1ರಿಂದ ಶುಲ್ಕವನ್ನು ವಿಧಿಸಲಾಗುತ್ತಿದೆ.ೆ

ಪರಿಷ್ಕೃತ ಮಾರ್ಗಸೂಚಿಗಳಂತೆ ಬೇಸಿಕ್ ಉಳಿತಾಯ ಖಾತೆ ಹೊಂದಿರುವವರು ಎಟಿಎಂ ಮೂಲಕ ಹಣ ಹಿಂದೆಗೆತ ಸೇರಿದಂತೆ ತಿಂಗಳಿಗೆ ನಾಲ್ಕು ಬಾರಿ ಹಣವನ್ನು ಉಚಿತವಾಗಿ ಹಿಂದೆಗೆದುಕೊಳ್ಳಬಹುದು. ಈ ಮಿತಿಯನ್ನು ದಾಟಿದರೆ ಬ್ಯಾಂಕ್ ಶಾಖೆಯಲ್ಲಿ ಪ್ರತಿ ವಹಿವಾಟಿಗೆ 50 ರೂ.ಸೇವಾಶುಲ್ಕ ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ಹಣ ಹಿಂದೆಗೆತಕ್ಕೆ ಪ್ರತಿ ವಹಿವಾಟಿಗೆ 20 ರೂ.ಸೇವಾಶುಲ್ಕ ಮತ್ತು ಸೇವಾ ತೆರಿಗೆ ಮತ್ತು ಎಸ್‌ಬಿಐ ಎಟಿಎಂಗಳ ಮೂಲಕ ಪ್ರತಿ ವಹಿವಾಟಿಗೆ 10 ರೂ.ಸೇವಾಶುಲ್ಕ ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News