ಹೀಗೆ ಇಫ್ತಾರ್ ಮಾಡಿದರೆ ಹೇಗೆ ? : ಎಸ್ . ಬಿ. ಮುಹಮ್ಮದ್ ದಾರಿಮಿ

Update: 2017-06-02 14:07 GMT

ಅಸ್ಸಲಾಮು ಅಲೈಕುಮ್.

ಗಲ್ಫ್‌ನಲ್ಲಿ ಮತ್ತು ಊರಲ್ಲಿರುವ ನಮ್ಮ ಅನೇಕ ಸಹೃದಯಿ ಸಹೋದರರು ತಮ್ಮ ಬೆವರ ಹನಿಗಳನ್ನು ಹರಿಸಿ ಸಂಪಾದಿಸಿದ ಸಂಪಾದನೆಯನ್ನು ಊರಿನ ಅಭಿವೃದ್ಧಿ ಕಾರ್ಯಗಳಿಗೆ ದಾನ ಮಾಡುತ್ತಿರುವುದು ಅಭಿನಂದನೀಯ. ಅದರಲ್ಲೂ ಉಪವಾಸ ತಿಂಗಳಲ್ಲಿ ತಮ್ಮೂರ ಮಸೀದಿಗಳಲ್ಲಿ ಇಫ್ತಾರ್ ಕೂಟ ನಡೆಸಲು ಉತ್ತಮ ಮೊತ್ತವನ್ನು ಕಳುಹಿಸಿಕೊಡುತ್ತಿದ್ದಾರೆ. ಸದರಿ ಸಂಗ್ರಹವಾದ ಹಣವನ್ನು ಇಫ್ತಾರ್ ಕೂಟದ ಹೆಸರಿನಲ್ಲಿ ಕೆಲವು ಕಡೆ ವೈವಿಧ್ಯಮಯ ಆಹಾರಗಳನ್ನು, ಕರಿದ ಪದಾರ್ಥಗಳನ್ನು ಬೇಕಾಬಿಟ್ಟಿ ತಯಾರಿಸಿ ಪೋಲು ಮಾಡುತ್ತಿರುವುದು ಸರಿಯಲ್ಲ. ಇಫ್ತಾರ್ ಕೂಟವನ್ನು ಸರಳಗೊಳಿಸಿ ಸದರಿ ಮೊತ್ತವನ್ನು ಈ ಕೆಳಗಿನ ಉದ್ದೇಶಗಳಿಗೆ ಸದ್ವಿನಿಯೋಗ ಮಾಡಬಹುದಾಗಿದೆ.

►ನಮ್ಮೂರಿನ ಕಷ್ಟದಲ್ಲಿರುವ ಕುಟುಂಬಗಳಿಗೆ ರೇಷನ್ ಒದಗಿಸಬಹುದು.

►ರೋಗಿಗಳಿಗೆ ಔಷಧಿ ಮತ್ತು ಆಸ್ಪತ್ರೆ ವೆಚ್ಚಗಳಿಗೆ ನೀಡಬಹುದು.

►ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಸಿಪ್ ನೀಡಬಹುದು.

►ಮನೆಯಿಲ್ಲದವರಿಗೆ ಹೊಸ ಮನೆ, ಶೌಚಾಲಯ ನಿರ್ಮಿಸಬಹುದು ಹಾಗೂ ಹಳೆ ಮನೆಗಳನ್ನು ದುರಸ್ತಿ ಮಾಡಬಹುದು.

►ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಿ ಸ್ವ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು.

►ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅಗತ್ಯವಿರುವ ಸಾಮಾಗ್ರಿಗಳು, ಗಾಡಿ ಹಾಗೂ ತಲೆ ಹೊರೆಯಲ್ಲಿ ಮೀನು ಮಾರುವವರಿಗೆ ಸೈಕಲ್ ವಿತರಿಸಬಹುದು.

►ಸಾಲದಲ್ಲಿ ಸಿಲುಕಿ ಹೊಬರಲಾಗದೆ ಕಷ್ಟಪಡುತ್ತಿರುವವರನ್ನು ಅದರಿಂದ ಮುಕ್ತಿಗೊಳಿಸಬಹುದು

►ಧಾರ್ಮಿಕ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವನ್ನು ನೀಡಬಹುದು ಹಾಗೂ ಮಸೀದಿ, ಮದ್ರಸದ ಮೂಲಭೂತ ಅಗತ್ಯಗಳಿಗೆ ಬಳಸಬಹುದು.

►ಮಸೀದಿಯ ಹೊರಗಡೆ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದು.

►ಹಬ್ಬಕ್ಕೆ ಹೊಸಬಟ್ಟೆ ಖರೀದಿಸಲು ಸಾಧ್ಯವಾಗದ ಕುಟುಂಬಗಳಿಗೆ ಬಟ್ಟೆ ಖರೀದಿಸಲು ಅಗತ್ಯ ಸಹಕಾರ ನೀಡಬಹುದು.

ಮಹಿಳೆಯರು ತಮ್ಮ ದಿನವಿಡೀ ಸಮಯವನ್ನು ಇಫ್ತಾರ್‌ಗೆ ನಾನಾ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಾ ಕಾಲ ಕಳೆಯುವ ಬದಲು ಅದನ್ನು ಈ ಕೆಳಗಿನಂತೆ ಸದ್ವಿನಿಯೋಗಗೊಳಿಸಬಹುದು.

►ಅಲ್ಲಾಹನ ಆರಾಧನೆಯನ್ನು (ಇಬಾದತ್) ಹೆಚ್ಚಿಸಬಹುದು.

►ಓದು ಮತ್ತು ಅಧ್ಯಯನಕ್ಕೆ ಬಳಸಬಹುದು.

►  ಸಮಾಜ ಸೇವೆ ಮಾಡಬಹುದು. ಪ್ರಾಯ ಮೂವತ್ತು ಮೀರಿದ ಹೆಣ್ಮಕ್ಕಳ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ನುಡಿಯಬಹುದು. ರೋಗಿಗಳನ್ನು ಸಂದರ್ಶಿಸಬಹುದು.

►ಮನೆಯ ಸುತ್ತಮುತ್ತ ಮತ್ತು ಮಹಡಿಯ ಮೇಲೆ ಸಾವಯವ ಕೃಷಿ (ತರಕಾರಿ/ಹಣ್ಣುಹಂಪಲು) ಬೆಳೆಸಬಹುದು.

ಪ್ರವಾದಿ ಮುಹಮ್ಮದ್ (ಸ.ಅ) ರು ಆರೋಗ್ಯವರ್ಧನೆಗೆ ಮತ್ತು ರೋಗಗಳನ್ನು ತಡೆಗಟ್ಟುವ ಸಲುವಾಗಿ ಕಡಿಮೆ ತಿನ್ನುವಂತೆ ಸೂಚಿಸಿದ್ದಾರೆ.

“ನಿಮ್ಮ ಹೊಟ್ಟೆಯ ಮೂರರಲ್ಲಿ ಒಂದು ಭಾಗ ಆಹಾರಕ್ಕಾಗಿ, ಒಂದು ಭಾಗ ನೀರಿಗಾಗಿ ಹಾಗೂ ಒಂದು ಭಾಗ ಉಸಿರಾಟಕ್ಕಾಗಿ ಮೀಸಲಿಡಿರಿ” -ಪ್ರವಾದಿ ವಚನ.

ಪ್ರವಾದಿವರ್ಯರ ಈ ಸುನ್ನತನ್ನು ಪರಿಪಾಲಿಸದೆ ಇರುವುದರಿಂದ ಬಹಳಷ್ಟು ರೋಗಗಳಿಗೆ ನಾವು ಬಲಿಯಾಗುತ್ತಿದ್ದೇವೆ. ಈ ಸುನ್ನತನ್ನು ಸರಿಯಾಗಿ ಪರಿಪಾಲಿಸಿ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟು ಆಸ್ಪತ್ರೆಗಳಿಗೆ ಖರ್ಚು ಮಾಡುವ ಕೋಟ್ಯಾಂತರ ರೂ.ಗಳನ್ನು ಉಳಿಸಬಹುದು. ನಮ್ಮ ಎತ್ತರಕ್ಕೆ ಅನುಗುಣವಾದ ತೂಕವನ್ನು ಕಾಪಾಡಿಕೊಂಡು ಆರೋಗ್ಯವಂತರಾಗಿ ನೆಮ್ಮದಿಯ ಬದುಕನ್ನು ಸಾಗಿಸಬಹುದು (ಇನ್ಶಾ ಅಲ್ಲಾಹ್)

ಮನುಷ್ಯನ ಎತ್ತರ ಮತ್ತು ತೂಕದ ಅನುಪಾತ ಚಾರ್ಟು

 

ಮುಸ್ಲಿಮೇತರ ವೈದ್ಯರು ಹಾಗೂ ಸಂಶೋಧಕರು ಸಹ ರಂಝಾನ್ ಉಪವಾಸದ ಪ್ರಯೋಜನಗಳ ಬಗ್ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಮಝಾನ್ ತಿಂಗಳನ್ನು ಆಡಂಬರದ ಭೋಜನೆಗಳಿಗೆ ಮೀಸಲಿಡದೆ, ಇಬಾದತ್, ದಾನಧರ್ಮ ಮತ್ತು ಸಮಾಜಸೇವೆಯನ್ನು ಅಧಿಕಗೊಳಿಸಿ ಈ ಪುಣ್ಯಮಾಸವನ್ನು ಮತ್ತು ಪ್ರವಾದಿವರ್ಯರ ಸುನ್ನತ್ತನ್ನು ಜೀವಂತಗೊಳಿಸೋಣ. ಈ ದಿಸೆಯಲ್ಲಿ ಮುನ್ನಡೆಯಲು ಸರ್ವಶಕ್ತನಾದ ಅಲ್ಲಾಹನು ನಮಗೆ ತೌಫೀಖ್ ನೀಡಲಿ. ಆಮೀನ್.

 

ಎಸ್.ಬಿ ಮುಹಮ್ಮದ್ ದಾರಿಮಿ

ಅಧ್ಯಕ್ಷರು, ರಾಜ್ಯ ದಾರಿಮಿ ಉಲಮಾ ಒಕ್ಕೂಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News