ಪೊಲೀಸರ ಬಟ್ಟೆ ಎಳೆದಾಡಿ ಹಲ್ಲೆ ಆರೋಪ: ಮಹಿಳೆಯರಿಬ್ಬರು ಸೇರಿ ಮೂವರ ಬಂಧನ
ಬೆಂಗಳೂರು, ಜೂ. 2: ಪೊಲೀಸರ ಬಟ್ಟೆ ಎಳೆದಾಡಿ ಹಲ್ಲೆ ನಡೆಸಿರುವ ಆರೋಪದ ಮೇಲೆ ಮಹಿಳೆಯರಿಬ್ಬರು ಸೇರಿ ಮೂವರನ್ನು ಇಲ್ಲಿನ ಬೆಳ್ಳಂದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮನಿಷಾ ಶರ್ಮಾ (37), ಅಕ್ಷತಾ ಹಾಗೂ ಸಂಜೇಶ್‌ದಾಲ್ (27) ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ಮೇ.31ರಂದು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪೇದೆ ವೃಷಭೇಂದ್ರ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಜೆ 7:45 ಗಂಟೆ ಸುಮಾರಿಗೆ ಮನಿಷಾ ಶರ್ಮ, ಸ್ನೇಹಿತೆ ಅಕ್ಷತಾ ಜತೆಗೆ ಠಾಣೆಗೆ ಹಾಜರಾಗಿ ಈ ಹಿಂದೆ ತಾನು ನೀಡಿರುವ ಮೊಕದ್ದಮೆಯ ಹಂತ ತಿಳಿಸುವಂತೆ ಏರುಧ್ವನಿಯಲ್ಲಿ ಕೂಗಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವಿಡಿಯೋ ರೆಕಾರ್ಡಿಂಗ್ ಮಾಡಲು ಮುಂದಾಗಿದ್ದ ವೇಳೆ ಇಬ್ಬರೂ ಮಹಿಳೆಯರು ಕೂಗಾಡಿ ಪೊಲೀಸರ ಮೇಲೆ ಹಲ್ಲೆ ಮಾಡಿ ಸಮವಸ್ತ್ರವನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಜತೆಗೆ ಇವರಿಗೆ ಸಹಕರಿಸಿದ್ದ ಆರೋಪದ ಮೇಲೆ ಸಂಜೇಶ್ ದಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.