ಜೂ.5ರಿಂದ ಮೇಲ್ಮನೆ ಅಧಿವೇಶನ
ಬೆಂಗಳೂರು, ಜೂ. 3: ಮಳೆಗಾಲದ ಮಹತ್ವದ ಅಧಿವೇಶನ ಕಲಾಪ ಜೂ.5ರಿಂದ ಆರಂಭಗೊಳ್ಳಲಿದ್ದು, ಒಟ್ಟು ಹತ್ತು ದಿನಗಳ ಕಾಲ ಜರುಗಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾಹಿತಿ ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಕರೆದಿದ್ದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧಿವೇಶನದ ಮೊದಲ ದಿನವೇ ಇತ್ತೀಚೆಗಷ್ಟೇ ಪರಿಷತ್‌ಗೆ ನಾಮನಿರ್ದೇಶನಗೊಂಡ ಪಿ.ಆರ್.ರಮೇಶ್ ಮತ್ತು ಮೋಹನ್ ಕೊಂಡಜ್ಜಿ ಅವರು ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆ ಬಳಿಕ ಇತ್ತೀಚೆಗೆ ನಿಧನರಾದ ಮೇಲ್ಮನೆ ಸದಸ್ಯೆ ವಿಮಲಾಗೌಡ ಅವರಿಗೆ ಸಂತಾಪ ಸೂಚನೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಕಲಾಪವನ್ನು ಅವರ ಗೌರವಾರ್ಥ ಒಂದು ದಿನ ಮುಂದೂಡಲಾಗುವುದು. ಜೂ.6ರ ಬೆಳಗ್ಗೆ 10:30ಕ್ಕೆ ಜಿಎಸ್‌ಟಿ ಕುರಿತು ಸದಸ್ಯರಿಗೆ ವಿಕಾಸಸೌಧದಲ್ಲಿ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿದೆ. ಮಧ್ಯಾಹ್ನದ ಬಳಿಕ ಅಧಿವೇಶನ ಕಲಾಪ ನಡೆಯಲಿದೆ ಎಂದರು.
ಜೂ.5ರಿಂದ ಶನಿವಾರ ಮತ್ತು ರವಿವಾರ ಹೊರತುಪಡಿಸಿ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದ ಅವರು, ಇದುವರೆಗೂ 905 ಪ್ರಶ್ನೆಗಳು ಬಂದಿದ್ದು, ಆ ಪೈಕಿ 75 ಪ್ರಶ್ನೆಗಳು ಚುಕ್ಕೆ ಗುರುತಿನವುಗಳಾಗಿವೆ. 64 ಗಮನ ಸೆಳೆಯುವ ಸೂಚನೆಗಳು, ನಿಯಮ 331ರಡಿಯಲ್ಲಿ 31 ಪ್ರಸ್ತಾವನೆಗಳು ಬಂದಿವೆ ಎಂದು ಮಾಹಿತಿ ನೀಡಿದರು.