ಅನುರಾಗ್ ತಿವಾರಿ ಪ್ರಕರಣದ ತನಿಖೆ ದಿಕ್ಕು ತಪ್ಪಿಸುವ ಹುನ್ನಾರ: ನಿವೃತ್ತ ಐಎಎಸ್ ಅಧಿಕಾರಿ ವಿಜಯಕುಮಾರ್
ಬೆಂಗಳೂರು, ಜೂ.3: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಕೊಲೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಬಂದ ಉತ್ತರ ಪ್ರದೇಶದ ವಿಶೇಷ ತನಿಖಾ ದಳದ ಅಧಿಕಾರಿಗಳು ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್.ವಿಜಯ್‌ಕುಮಾರ್ ಇಂದಿಲ್ಲಿ ಆರೋಪಿಸಿದ್ದಾರೆ.
ನಗರದಲ್ಲಿ ಅನುರಾಗ್‌ತಿವಾರಿ ವಾಸವಾಗಿದ್ದ ಮನೆಗೆ ತನಿಖಾ ದಳದ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ನನ್ನನ್ನು ತನಿಖಾ ಸಾಕ್ಷಿಯಾಗಿ ಕರೆಯಲಾಗಿತ್ತು. ಹೀಗಾಗಿ, ನಾನು ಅಲ್ಲಿಗೆ ಹೋಗಿದ್ದೆ. ಈ ವೇಳೆ ಹೊರಗಡೆ 10 ಜನ ಅಧಿಕಾರಿಗಳು, ಒಬ್ಬ ಪೊಲೀಸ್ ಅಧಿಕಾರಿ ಮಾತ್ರ ಇದ್ದರು. ಈಗಾಗಲೇ ಎಲ್ಲ ತನಿಖೆ ನಡೆಸಿ ಸಾಕ್ಷಿಗಳಿಂದ ಸಹಿಗಳನ್ನು ಪಡೆದಿದ್ದರು ಎಂದು ಹೇಳಿದರು.ಇದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿ, ಅದರಲ್ಲಿರುವ ನ್ಯೂನತೆಗಳನ್ನು ಪರಿಶೀಲಿಸಿದಾಗ, ಮನೆ ಪರಿಶೀಲನೆ ವೇಳೆ ಮನೆಗೆ ಹಾಕಿದ್ದ ಸೀಲ್ ತೆಗೆದು ಪರಿಶೀಲನೆ ನಡೆಸಿ ನಂತರ ಸೀಲ್ ಹಾಕಲಾಗಿದೆ ಎಂದು ನಮೂದಿಸಿದ್ದರು.
ಆದರೆ, ಈ ಕುರಿತು ಸಾಕ್ಷಿ ಸಹಿ ಹಾಕಿದ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸೀಲ್ ತೆಗೆದಿಲ್ಲ ಎಂಬ ಮಾಹಿತಿ ಬಹಿರಂಗಗೊಂಡಿತು ಎಂದು ಅವರು ವಿವರಿಸಿದರು. ಅನುರಾಗ್ ತಿವಾರಿಯ ಮನೆ ಬಾಗಿಲು ಮೇ 20 ರವರೆಗೆ ಮುಕ್ತವಾಗಿಡಲಾಗಿತ್ತು. ಅನಂತರ ಅದಕ್ಕೆ ಸೀಲ್ ಹಾಕಲಾಗಿದೆ. ಅಂದಿನಿಂದ ಇದುವರೆಗೂ ಯಾರು ಅದನ್ನು ತೆಗೆದಿಲ್ಲ. ಆದರೆ, ಎಸ್‌ಇಟಿ ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸದೆ ಅಧಿಕಾರಿಗಳಿಂದ ಸಹಿಗಳನ್ನು ಪಡೆದಿದ್ದಾರೆ. ಯಾವುದೇ ಪ್ರಕರಣದಲ್ಲಿ ಒಂದು ಬಾರಿ ಸೀಲ್ ಹಾಕಿದರೆ ಅದನ್ನು ಪೊಲೀಸರು ಮಾತ್ರ ತೆಗೆಯಲು ಅವಕಾಶವಿದೆ. ಆದರೆ, ಇಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಬಿಟ್ಟರೆ ಬೇರೆ ಪೊಲೀಸರು, ರಾಜ್ಯದ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂದರು.
ಇದನ್ನು ಪ್ರಶ್ನಿಸಿದ್ದಕ್ಕೆ ತನಿಖಾ ದಳ ತಯಾರಿಸಿದ್ದ ವರದಿಯನ್ನು ಹರಿದು ಹಾಕಿ, ಬೆಂಕಿ ಹಾಕಲಾಯಿತು ಎಂದ ಅವರು, ಈ ಮೂಲಕ ರಾಜ್ಯದ ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಯ ಪ್ರಕರಣವನ್ನು ಯಾವುದೇ ತನಿಖೆ ನಡೆಸದೇ ಮುಚ್ಚಿ ಹಾಕುವ ಪಿತೂರಿ ಮಾಡಲಾಗುತ್ತಿದೆ. ಹೀಗಾಗಿ ಇದನ್ನು ಕೂಡಲೇ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೂ ತಿವಾರಿ ಸಹೋದರನ್ನು ಭೇಟಿ ಮಾಡುವ ಸೌಜನ್ಯ ತೋರದಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ ಕೂಡಲೇ ಸರಕಾರ ಅವರಿಗೆ ಭದ್ರತೆ ನೀಡಬೇಕು ಹಾಗೂ ಅವರು ಉಳಿಯಲು ವ್ಯವಸ್ಥೆ ಮಾಡಿಕೊಡಬೇಕು. ಜೊತೆಗೆ, ಅನುರಾಗ್ ತಿವಾರಿ ಕುಟುಂಬ ಅತ್ಯಂತ ಬಡ ಕುಟುಂಬವಾಗಿದೆ. ಆದುದರಿಂದ ರಾಜ್ಯ ಸರಕಾರ ಅವರಿಗೆ ಪರಿಹಾರ ನೀಡಬೇಕು ಎಂದರು.
ವಿಜಯ್‌ಕುಮಾರ್‌ರ ಪತ್ನಿ ಜಯಶ್ರೀ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿರುವುದರಿಂದ ಹಗರಣ ನಡೆದಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಎಸ್‌ಐಟಿ ತನಿಖೆಯಿಂದ ನ್ಯಾಯ ಸಿಗಲ್ಲ. ಈ ತಂಡದ ಅಧಿಕಾರಿಗಳು ಎಸ್ಪಿಗೆ ಸಮಾನರಾದವರು. ಅವರು ಬಂದು ಡಿಜಿ ಎದುರು ಏನು ಮಾತಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಅನುರಾಗ್ ತಿವಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಮಯಾಂಕ ತಿವಾರಿ ಬಳಿ ಹಲವು ಮಾಹಿತಿ ಬಹಿರಂಗಪಡಿಸಿಲ್ಲ. ತಿವಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅವರು ನಗರದಲ್ಲಿದ್ದರೂ, ತುಂಬಾ ಒತ್ತಡದಲ್ಲಿದ್ದಾರೆ. ನಿನ್ನೆ ಸಂಜೆ 4 ಗಂಟೆಯಿಂದ ಇಂದು ಮಧ್ಯಾಹ್ನದವರೆಗೂ ಸುಮಾರು 15 ಬಾರಿ ಕರೆ ಮಾಡಿದ್ದೆ. ಆದರೆ, 1 ಬಾರಿ ಸ್ವೀಕರಿಸಿ ಅರ್ಧ ಗಂಟೆ ನಂತರ ಮಾತಾಡುತ್ತೇನೆ ಎಂದಿದ್ದರು. ಅನಂತರ ಕರೆ ಮಾಡಿ, ನಾನು ಕರೆ ಸ್ವೀಕರಿಸದಂತಹ ಸ್ಥಳದಲ್ಲಿದ್ದೇನೆ ಎಂದು ಹೇಳಿದ್ದರು.-ವಿಜಯ್‌ಕುಮಾರ್ ನಿವೃತ್ತ ಐಎಎಸ್ ಅಧಿಕಾರಿ