400 ನಗರಗಳಲ್ಲಿ ‘ಮೋದಿ ಉತ್ಸವ’: ಅನಂತ್‌ಕುಮಾರ್
ಬೆಂಗಳೂರು, ಜೂ.3: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರು ವರ್ಷಗಳ ಸಾಧನೆಯನ್ನು ಬಿಂಬಿಸಲು ದೇಶದ 400 ನಗರಗಳಲ್ಲಿ ‘ಮೋದಿ ಉತ್ಸವ’ವನ್ನು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷವಾಕ್ಯದೊಡನೆ ಆಚರಿಸಲಾಗುತ್ತಿದೆ ಎಂದು ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್ ತಿಳಿಸಿದ್ದಾರೆ.
ಶನಿವಾರ ಕೆ.ಆರ್.ಪುರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ನರೇಂದ್ರಮೋದಿ ನೇತೃತ್ವದ ಸರಕಾರವು ಮೂರು ವರ್ಷಗಳಲ್ಲಿ ಬಡವರ ಕಲ್ಯಾಣಕ್ಕೆ ಶ್ರಮಿಸಿದೆ. ಜನಧನ್ ಯೋಜನೆ 22 ಕೋಟಿ ಜನರಿಗೆ, ಬೇವು ಮಿಶ್ರಿತ ಯೂರಿಯಾ 16 ಕೋಟಿ ರೈತರಿಗೆ, ಮುದ್ರಾ ಯೋಜನೆಯಿ 3.50 ಕೋಟಿ ಯುವಕ, ಯುವತಿಯರಿಗೆ, ಜೀವನ್‌ಭೀಮಾ, ಜೀವನ್‌ಜ್ಯೋತಿ, ಅಟಲ್ ಪೆನ್ಷನ್ ಯೋಜನೆಯಿಂದ 11 ಕೋಟಿ ಜನರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಬರಪರಿಹಾರಕ್ಕಾಗಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರಕಾರವು 2004-14ರವರೆಗೆ 10 ವರ್ಷಗಳಲ್ಲಿ 4500 ಕೋಟಿ ರೂ.ಗಳನ್ನು ನೀಡಿತ್ತು. ಆದರೆ, ನರೇಂದ್ರಮೋದಿ ಸರಕಾರವು ಕೇವಲ ಮೂರು ವರ್ಷಗಳಲ್ಲಿ 4500 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಿದೆ. ಕೇಂದ್ರ ನೀಡಿರುವ ಬರಪರಿಹಾರದ ಅನುದಾನದಲ್ಲಿ ಇನ್ನೂ 550 ಕೋಟಿ ರೂ.ಗಳನ್ನು ರಾಜ್ಯ ಸರಕಾರ ರೈತರ ಖಾತೆಗಳಿಗೆ ಜಮೆ ಮಾಡಿಲ್ಲ ಎಂದು ಅವರು ಆರೋಪಿಸಿದರು.
ಕೇಂದ್ರ ಸರಕಾರ ದೇಶಾದ್ಯಂತ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೋಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಅವರೆಲ್ಲರೂ ಮತ್ತೊಮ್ಮೆ ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಸರಿಯಾಗಿ ಓದಬೇಕು. ಸಂವಿಧಾನದ ನಿರ್ದೇಶನ ತತ್ವಗಳಲ್ಲಿ ಗೋ ಹತ್ಯೆ ನಿಷೇಧ ಹಾಗೂ ಗೋ ಸಂತತಿ ರಕ್ಷಣೆಗೆ ಆದ್ಯತೆ ನೀಡಲಾಗಿದೆ ಎಂದು ಅನಂತ್‌ಕುಮಾರ್ ಹೇಳಿದರು.
2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 126 ಸ್ಥಾನಗಳನ್ನು ಗೆದ್ದಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲವು ಸಾಧಿಸಿತು. ಕೇವಲ ಒಂದು ವರ್ಷದಲ್ಲೆ ಬಿಜೆಪಿ 136 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ನರೇಂದ್ರಮೋದಿ ಹಾಗೂ ಯಡಿಯೂರಪ್ಪ ನಾಯಕತ್ವದಲ್ಲಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ನವೆಂಬರ್‌ನಲ್ಲಿ ಗುಜರಾತ್, ಡಿಸೆಂಬರ್‌ನಲ್ಲಿ ಹಿಮಾಚಲಪ್ರದೇಶ ಹಾಗೂ ಮುಂದಿನ ವರ್ಷದ ಮಾರ್ಚ್ ಅಥವಾ ಎಪ್ರಿಲ್‌ನಲ್ಲಿ ಕರ್ನಾಟಕದ ಚುನಾವಣೆ ನಡೆಯಲಿದ್ದು, ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಈಗ ದೇಶದ 15 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಈ ಮೂರು ರಾಜ್ಯಗಳ ಚುನಾವಣೆ ನಂತರ 18 ರಾಜ್ಯಗಳಲ್ಲಿ ನಮ್ಮ ಅಧಿಕಾರವಿರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಸಾಧ್ಯತೆ ಕುರಿತು ಮಾಧ್ಯಮಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನಂತ್‌ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ತಂತ್ರ, ಕುತಂತ್ರ ನಡೆಸುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಯಾವ ಸಂದರ್ಭದಲ್ಲಿ ಚುನಾವಣೆ ನಡೆದರೂ ಅದನ್ನು ಎದುರಿಸಲು ಬಿಜೆಪಿ ಸಿದ್ಧವಿದೆ. ರಾಜ್ಯದ 6.50 ಕೋಟಿ ಜನ ಈ ಸರಕಾರದ ದುರಾಡಳಿತದಿಂದ ಬೇಸತ್ತಿದ್ದಾರೆ ಎಂದರು.