ಲಂಡನ್:ಭಯೋತ್ಪಾದಕ ದಾಳಿಗೆ ಏಳು ಬಲಿ,48 ಜನರಿಗೆ ಗಾಯ

Update: 2017-06-04 13:07 GMT

ಲಂಡನ್,ಜೂ.4: ಚೂರಿಗಳನ್ನು ಝಳಪಿಸುತ್ತಿದ್ದ, ನಕಲಿ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದ ಮೂವರು ಭಯೋತ್ಪಾದಕರು ಶನಿವಾರ ರಾತ್ರಿ ಮಧ್ಯ ಲಂಡನ್‌ನಲ್ಲಿ ಮಾರಣಹೋಮ ನಡೆಸಿದ್ದಾರೆ. ರಾತ್ರಿ 10 ಗಂಟೆಗೆ(ಭಾರತೀಯ ಕಾಲಮಾನ ಸೋಮವಾರ ನಸುಕಿನ 2:30 ಗಂಟೆ) ಲಂಡನ್ನಿನ ಹೆಗ್ಗುರುತು ಲಂಡನ್ ಬ್ರಿಡ್ಜ್‌ನಲ್ಲಿ ಅತಿವೇಗದಿಂದ ಚಲಿಸುತ್ತಿದ್ದ ಬಿಳಿಯ ಬಣ್ಣದ ವ್ಯಾನ್‌ನಲ್ಲಿದ್ದ ಈ ರಾಕ್ಷಸರು ಪಾದಚಾರಿ ಗಳ ಮೇಲೆ ವಾಹನವನ್ನು ನುಗ್ಗಿಸಿದ ಬಳಿಕ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿದ್ದ ಜನರನ್ನು ಚೂರಿಗಳಿಂದ ಮನಬಂದಂತೆ ಇರಿದಿದ್ದಾರೆ. ಈ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದು, 48 ಜನರು ಗಾಯಗೊಂಡಿದ್ದಾರೆ. ಜೂ.8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಈ ಭಯೋತ್ಪಾದಕ ದಾಳಿ ನಡೆದಿದೆ.

ವ್ಯಾನ್‌ನ್ನು ಬ್ರಿಡ್ಜ್‌ನಲ್ಲಿಯ ಪಾದಚಾರಿಗಳ ಮೇಲೆ ನುಗ್ಗಿಸಿದ ಬಳಿಕ ಅದನ್ನು ಅಲ್ಲಿಯೇ ಬಿಟ್ಟ ದಾಳಿಕೋರರು ಭಾರೀ ಗಾತ್ರದ ಚೂರಿಗಳನ್ನು ಝಳಪಿಸುತ್ತ ಅಲ್ಲಿಂದ ಓಡಿ ಸಮೀಪದ ಬರೋ ಮಾರುಕಟ್ಟೆ ಪ್ರದೇಶದಲ್ಲಿಯ ಬಾರ್‌ಗಳು ಮತ್ತು ರೆಸ್ಟೋರಂಟ್‌ಗಳಿಗೆ ನುಗ್ಗಿ ‘ಇದು ಅಲ್ಲಾಹುವಿಗಾಗಿ ’ಎಂದು ಕೂಗುತ್ತ, ಮೋಜಿನಲ್ಲಿದ್ದವರನ್ನು ಮನಸ್ವೀ ಇರಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಮೊದಲ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಶಸ್ತ್ರಸಜ್ಜಿತ ಪೊಲೀಸರು ಎಲ್ಲ ಮೂವರು ದಾಳಿಕೋರರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಪೊಲೀಸರ ಕಾರ್ಯಾಚರಣೆ ಕೇವಲ ಎಂಟು ನಿಮಿಷಗಳಲ್ಲಿ ಪೂರ್ಣಗೊಂಡಿತ್ತು. ದಾಳಿಕೋರರು ಸ್ಫೋಟಕಗಳನ್ನು ಅಳವಡಿಸಿದಂತಿದ್ದ ಜಾಕೆಟ್‌ಗಳನ್ನು ಧರಿಸಿದ್ದು, ಅವು ನಕಲಿಯಾಗಿದ್ದವು ಎನ್ನುವುದು ನಂತರ ಬೆಳಕಿಗೆ ಬಂದಿದೆ.

ಇದೊಂದು ಭಯೋತ್ಪಾದಕ ದಾಳಿ ಎಂದು ನಾವು ಪರಿಗಣಿಸಿದ್ದೇವೆ ಮತ್ತು ಈಗಾಗಲೇ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಮಹಾನಗರ ಸಹಾಯಕ ಪೊಲೀಸ್ ಆಯುಕ್ತ ಹಾಗೂ ಭಯೋತ್ಪಾದನೆ ನಿಗ್ರಹ ದಳದ ಮುಖ್ಯಸ್ಥ ಮಾರ್ಕ್ ರೌಲಿ ತಿಳಿಸಿದರು. ದಾಳಿಯ ಸಂದರ್ಭದ ಮಾಹಿತಿಗಳು ಮತ್ತು ಚಿತ್ರಗಳೊಂದಿಗೆ ಪೊಲೀಸರನ್ನು ಸಂಪರ್ಕಿಸುವಂತೆ ಅವರು ಇದೇ ವೇಳೆ ಜನರನ್ನು ಆಗ್ರಹಿಸಿದರು.

ದಾಳಿಯ ಹೊಣೆಯನ್ನು ಯಾವುದೇ ಗುಂಪು ತಕ್ಷಣಕ್ಕೆ ವಹಿಸಿಕೊಂಡಿಲ್ಲ.

ದಾಳಿಕೋರರ ಇರಿತದಿಂದ ಬ್ರಿಟಿಷ್ ಟ್ರಾನ್ಸ್‌ಪೋರ್ಟ್ ಪೊಲೀಸ್‌ನ ಓರ್ವ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ದಾಳಿ ನಡೆದ ಸ್ಥಳ ಬಾರ್ ಮತ್ತು ರೆಸ್ಟೋರಂಟ್‌ಗಳು ಹಾಗೂ ಕ್ಲಬ್‌ಗಳಿಂದ ತುಂಬಿರುವ, ವಾರಾಂತ್ಯದ ದಿನಗಳಲ್ಲಿ ಲಂಡನ್ನಿಗರಿಗೆ ಅಚ್ಚುಮೆಚ್ಚಾಗಿರುವ ತಾಣಗಳ ಲ್ಲೊಂದಾಗಿದೆ.

ದಾಳಿಕೋರರು ರಸ್ತೆಯಲ್ಲಿ, ಬಾರ್-ರೆಸ್ಟೋರಂಟ್‌ಗಳಲ್ಲಿ ಜನರನ್ನು ಮನಬಂದಂತೆ ಇರಿದಿದ್ದು, ಪೊಲೀಸರು ಈ ಸ್ಥಳದಿಂದ ಓಡುವಂತೆ ಮತ್ತು ಬಚ್ಚಿಟ್ಟುಕೊಳ್ಳುವಂತೆ ಜನರಿಗೆ ಸೂಚಿಸುತ್ತಿದ್ದರು. ಇದರಿಂದಾಗಿ ಆತಂಕಿತ ಜನರು ಜೀವವುಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿದ್ದ ದೃಶ್ಯಗಳಿಗೆ ಬರೋ ಮಾರುಕಟ್ಟೆ ಸಾಕ್ಷಿಯಾಗಿತ್ತು.

ತನಿಖೆಗಾಗಿ ಇಡೀ ಪ್ರದೇಶವನ್ನು ನಿರ್ಬಂಧಿಸಲಾಗಿದ್ದು, ಮಹಾನಗರ ಪೊಲೀಸ್, ಭಯೋತ್ಪಾದನೆ ನಿಗ್ರಹ ದಳ, ಬ್ರಿಟಿಷ್ ಟ್ರಾನ್ಸ್‌ಪೋರ್ಟ್ ಪೊಲೀಸ್, ಸಿಟಿ ಆಫ್ ಲಂಡನ್ ಪೊಲೀಸ್ ಇತ್ಯಾದಿ ಏಜನ್ಸಿಗಳು ಜಂಟಿಯಾಗಿ ತನಿಖೆಯಲ್ಲಿ ತೊಡಗಿ ಕೊಂಡಿವೆ. ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಟ್ಟೆಚ್ಚರದಿಂದ ಇರುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಇದೊಂದು ಭಯಾನಕ ಘಟನೆ ಎಂದು ಪ್ರಧಾನಿ ಥೆರೆಸಾ ಮೇ ಬಣ್ಣಿಸಿದ್ದಾರೆ. ಸರಕಾರದ ಕೋಬ್ರಾ ತುರ್ತು ಸಮಿತಿಯ ಸಭೆಯನ್ನು ನಡೆಸಿದ ಮೇ, ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳಿಂದ ಇತ್ತೀಚಿನ ಮಾಹಿತಿಗಳನ್ನು ಪಡೆದುಕೊಂಡಿದ್ದು ಇದನ್ನೊಂದು ಭಯೋತ್ಪಾದನೆಯ ಘಟನೆಯೆಂದು ಪರಿಗಣಿಸಲಾಗಿದೆ ಎಂದು ಹೇಳಿಕೆ ಯೊಂದರಲ್ಲಿ ತಿಳಿಸಿದರು.

ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸೂಚಕವಾಗಿ ಅಧಿಕಾರ ಕೇಂದ್ರವಾಗಿರುವ ಡೌನಿಂಗ್ ಸ್ಟ್ರೀಟ್‌ನಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗಿದ್ದು, ಆಡಳಿತ ಕನ್ಸರ್ವೇಟಿವ್ ಪಕ್ಷವು ರವಿವಾರದ ತನ್ನ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿತ್ತು.

ಇದು ಅಮಾಯಕ ಲಂಡನ್ನಿಗರ ಮೇಲಿನ ಉದ್ದೇಶಪೂರ್ವಕ ಮತ್ತು ಹೇಡಿತನದ ದಾಳಿಯಾಗಿದೆ ಎಂದು ಹೇಳಿದ ಲಂಡನ್ ಮೇಯರ್ ಸಾದಿಕ್ ಖಾನ್ ಅವರು, ಭಯೋತ್ಪಾದಕರು ನಮ್ಮ ಪ್ರಜೆಗಳ ಮೇಲೆ ಗೆಲುವು ಸಾಧಿಸಲು ನಾವೆಂದೂ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದರು.

ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯು ದಾಳಿಗೆ ಗುರಿಯಾಗಿರಬಹುದಾದ ಭಾರತೀಯರ ನೆರವಿಗಾಗಿ ವಿಶೇಷ ಘಟಕವೊಂದನ್ನು ತೆರೆದಿದೆ.

 ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೊಂದು ಆಘಾತಕಾರಿ ಘಟನೆ ಎಂದು ಬಣ್ಣಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪಗಳು ಮತ್ತು ಗಾಯಾಳುಗಳಿಗೆ ಸಾಂತ್ವನಗಳನು ಸೂಚಿಸಿ ಅವರು ಟ್ವೀಟಿಸಿದ್ದಾರೆ.

22 ಜೀವಗಳು ಬಲಿಯಾಗಿದ್ದ ಮ್ಯಾಂಚೆಸ್ಟರ್ ಭಯೋತ್ಪಾದಕ ದಾಳಿಯ ನೆನಪು ಇನ್ನೂ ಹಸಿರಾಗಿರುವಾಗಲೇ ಶನಿವಾರದ ದಾಳಿ ನಡೆದಿದೆ. ಮೇ 22 ರಂದು ರಾತ್ರಿ ಮ್ಯಾಂಚೆಸ್ಟರ್ ಅರೆನಾದಲ್ಲಿ ಪಾಪ್ ಸಂಗೀತ ಕಾರ್ಯಕ್ರಮ ಮುಗಿದು ಜನರು ಹೊರಗೆ ಬರುತ್ತಿದ್ದಾಗ ಸಲ್ಮಾನ್ ಅಬೆದಿ ಎಂಬಾತ ಆತ್ಮಹತ್ಯಾ ಬಾಂಬ್ ದಾಳಿಯನ್ನು ನಡೆಸಿದ್ದ.

ಶನಿವಾರದ ದಾಳಿ ಈ ವರ್ಷ ಇಂಗ್ಲಂಡ್‌ನಲ್ಲಿ ನಡೆದ ಮೂರನೇ ಭಯೋತ್ಪಾದಕ ದಾಳಿಯಾಗಿದೆ. ಮಾರ್ಚ್‌ನಲ್ಲಿ ಶಂಕಿತ ಭಯೋತ್ಪಾದಕ ಖಾಲಿದ್ ಮಸೂದ್ ಎಂಬಾತ ಲಂಡನ್ನಿನ ಸಂಸತ್ ಭವನದ ಬಳಿ ಪಾದಚಾರಿಗಳ ಮೇಲೆ ಕಾರೊಂದನ್ನು ನುಗ್ಗಿಸಿದ್ದರಿಂದ ಕರ್ತವ್ಯನಿರತ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಕೊಲ್ಲಲ್ಪಟ್ಟಿದ್ದರು. ಪೊಲೀಸ್ ಅಧಿಕಾರಿಯನ್ನು ಮೊದಲು ಚೂರಿಯಿಂದ ಇರಿದು ಬಳಿಕ ಗುಂಡು ಹಾರಿಸಿ ಕೊಲ್ಲಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News