ಸಲ್ಲದ ಸಮರ್ಥನೆ, ಸಲ್ಲದ ಭೀತಿ ಮಾತು

Update: 2017-06-04 06:57 GMT

ಸಾಮಾನ್ಯವಾಗಿ ಗಡಿ ರಕ್ಷಣೆ ಸೈನ್ಯದ ಕೆಲಸ. ಆಂತರಿಕ ಭದ್ರತೆ ಮತ್ತು ಕಾಯ್ದೆ ಸುವ್ಯವಸ್ಥೆ ಪರಿಪಾಲನೆ ಸೇನೆಯ ಕೆಲಸವಲ್ಲ. ಆಂತರಿಕ ಭದ್ರತೆಗಾಗಿ ಹಲವಾರು ವಿಶೇಷ ಪಡೆಗಳ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಿದೆ. ಹೀಗಿರುವಾಗ ಕೇಂದ್ರ ಸರಕಾರ ಕಾಶ್ಮೀರದಲ್ಲಿನ ಆಂತರಿಕ ಭದ್ರತಾ ಪರಿಸ್ಥಿತಿ ನಿರ್ವಹಣೆಗಾಗಿ ಸೇನೆಯನ್ನು ನಿಯೋಜಿಸಿರುವುದು ಹಾಗೂ ಪ್ರಜೆಗಳು ತನಗೆ ಹೆದರಬೇಕೆಂದು ಸೈನ್ಯದ ಮುಖ್ಯಸ್ಥರು ಹೇಳಿರುವುದು ಪ್ರಜಾಪ್ರಭುತ್ವಕ್ಕೆ ಶುಭಶಕುನವಲ್ಲ.

  ಕಾಶ್ಮೀರ ಇಂದು ಕವಿಗಳ ‘ಪ್ರೇಮ ಕಾಶ್ಮೀರ’ವಾಗಿ ಉಳಿದಿಲ್ಲ. ಅಲ್ಲಿ ಇಂದು ಕೋಪ-ದ್ವೇಷಗಳು ಭುಗಿಲೆದ್ದಿವೆ. ನಮ್ಮ ಸೇನೆಯ ಮುಖ್ಯಸ್ಥರಾದ ಮಹಾ ದಂಡ ನಾಯಕ ಜನರಲ್ ಬಿಪಿನ್ ರಾವತ್ ಅವರು ಹೇಳಿರುವಂತೆ ಅದು ಕೊಳಕು ರಣರಂಗವಾಗಿದೆ-ಅಲ್ಲಿ ಡರ್ಟಿ ವಾರ್ ನಡೆದಿದೆ. ನಿಘಂಟಿನ ಪ್ರಕಾರ ‘ಡರ್ಟಿ ವಾರ್’ ಎಂದರೆ ಸರಕಾರದ ರಹಸ್ಯ ಪೊಲೀಸ್ ಪಡೆ ಅಥವಾ ಮಿಲಿಟರಿ ಪಡೆಗಳು ದಂಗೆಕೋರರು ಮತ್ತು ಭಯೋತ್ಪಾದಕ ಬಂಡಾಯಗಾರರ ವಿರುದ್ಧ ನಡೆಸುವ ಸಮರ. ಈ ಅರ್ಥಾನುಸಾರವಾಗಿ ನೋಡಿದರೆ ಕಾಶ್ಮೀರದಲ್ಲಿ ಇಂದು ಕಲ್ಲು ತೂರುತ್ತಿರುವ ಶಾಲಾಕಾಲೇಜು ವಿದ್ಯಾರ್ಥಿಗಳು ಇತ್ಯಾದಿಗಳೆಲ್ಲರನ್ನೂ ದಂಗೆಕೋರ ಭಯೋತ್ಪಾದಕರು ಎಂದೇ ಕರೆಯ ಬೇಕಾಗುತ್ತದೆ.

ಆದರೆ ಇದು ಸಂಪೂರ್ಣ ಸತ್ಯವಲ್ಲ. ಇವರ ಮಧ್ಯೆ ಪಾಕಿಸ್ತಾನದಿಂದ ನುಸುಳಿ ಬಂದಿರುವ ಭಯೋತ್ಪಾದಕರಿರಬಹುದು. ಆದರೆ ಕಾಶ್ಮೀರದಲ್ಲಿ ಸಿಟ್ಟೊಡೆದ್ದು ಕಲ್ಲು ಕೈಗೆತ್ತಿಕೊಂಡಿರುವವರೆಲ್ಲರನ್ನೂ ಸಾರಾಸಗಟಾಗಿ ಭಯೋತ್ಪಾದಕರು, ದಂಗೆಕೋರರು ಎಂದು ಕರೆಯಲಾಗದು. ಅವರಲ್ಲಿ ಬಹುತೇಕ ಮಂದಿ ಭವ್ಯ ಭವಿಷ್ಯದ ಕನಸುಗಳಿಂದ ಹೋರಾಟಕ್ಕಿಳಿದಿರುವ ಮುಗ್ಧರಿದ್ದಾರೆ, ನಿರುದ್ಯೋಗಿಗಳಿದ್ದಾರೆ. ನಿರಂತರವಾಗಿ ಜಮ್ಮು-ಕಾಶ್ಮೀರ ಮತ್ತು ಕೇಂದ್ರ ಸರಕಾರಗಳು ತಮ್ಮ ಭಾವನೆಗಳನ್ನು ಶೋಷಿಸಿದವು, ವಂಚಿಸಿದವು ಎಂದು ಹತಾಶರಾದ ಕುಪಿತ ಯವಕರಿದ್ದಾರೆ. ಹೀಗಿರುವಾಗ ಕಾಶ್ಮಿರವನ್ನು ಕೊಳಕು ರಣರಂಗಕ್ಕೆ ಹೋಲಿಸಿರುವುದು ಸರಿಯೆ?

ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಕೊಳಕು ಯುದ್ಧಕ್ಕೆ ಹೋಲಿಸಿರುವುದಷ್ಟೇ ಅಲ್ಲದೆ, ಉದ್ರಿಕ್ತ ಪರಿಸ್ಥಿತಿ ನಿಭಾಯಿಸಲು ಮಾನವ ಗುರಾಣಿ ಬಳಸುವಂಥ ನವೀನ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಯಿತೆಂದು ಹೇಳಿದ್ದಾರೆ. ಸೇನಾಧಿಕಾರಿಯೊಬ್ಬರು ಚುನಾವಣೆ ಸಂದರ್ಭದಲ್ಲಿ ಉದ್ರಿಕ್ತ ಪರಿಸ್ಥಿತಿಯನ್ನು ಎದುರಿಸಲು ವ್ಯಕ್ತಿಯೊಬ್ಬನನ್ನು ಕಾರಿನ ಬಾನೆಟ್ಟಿಗೆ ಬಿಗಿದುಕಟ್ಟಿ ಮಾನವ ಗುರಾಣಿಯಾಗಿ ಬಳಸಿದ್ದನ್ನು ಸೇನೆಯ ಮುಖ್ಯಸ್ಥರು ಸಮರ್ಥಿಸಿಕೊಂಡಿರುವುದು ನಾರಿಕ ಸಮಾಜವನ್ನು ವಿಹ್ವಲಗೊಳಿಸಿದೆ.

ಕಳೆದ ಎಪ್ರಿಲ್ 9ರಂದು ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಮತಗಟ್ಟೆಯ ಹೊರಗೆ ಕಲ್ಲು ತೂರಾಟದಲ್ಲಿ ತೊಡಗಿದ್ದ ಕಾಶ್ಮೀರಿ ಪ್ರತಿಭಟನಾಕಾರರಿಂದ ಮತಗಟ್ಟೆಯ ಸಿಬ್ಬಂದಿಯನ್ನು ರಕ್ಷಿಸುವುದು ಸೇನೆಯ ಜವಾಬ್ದಾರಿಯಾಗಿತ್ತು. ಈ ಉದ್ರಿಕ್ತ ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳದಲ್ಲಿ ಕರ್ತವ್ಯನಿರತರಾಗಿದ್ದ ಮೇಜರ್ ಗೊಗೊಯ್ ಎಂಬವರು ಮತಚಲಾಯಿಸಲು ಬಂದಿದ್ದ ಫಾರೂಕ್ ದರ್ ಹೆಸರಿನ ಕಾಶ್ಮೀರಿಯೊಬ್ಬನನ್ನು ತನ್ನ ಜೀಪಿನ ಮುಂಭಾಗಕ್ಕೆ ಕಟ್ಟಿ ಮೆರವಣಿಗೆ ನಡೆಸುವ ಮೂಲಕ ಪ್ರಜೆಯೊಬ್ಬನನ್ನು ಮಾನವಗುರಾಣಿಯಾಗಿ ಬಳಸಿದರು. ಐದು ಗಂಟೆಗಳ ಕಾಲ ಒಂಬತ್ತು ಹಳ್ಳಿಗಳಲ್ಲಿ ಮಾನವ ಗುರಾಣಿಯಾದ ಈ ವ್ಯಕ್ತಿಯನ್ನು ಮೆರವಣಿಗೆ ಮಾಡಿದರು. ಚುನಾವಣಾ ಸಿಬ್ಬಂದಿಯನ್ನು ಕಲ್ಲು ತೂರಾಟಗಾರರಿಂದ ರಕ್ಷಿಸಲು ತಾವು ಈ ಕ್ರಮ ಅನುಸರಿಸಿದ್ದಾಗಿ ಮೇಜರ್ ಗೊಗೊಯ್ ಅಂಬೋಣ.

ಸಹಜವಾಗಿಯೇ ಸರಕಾರ ಹಾಗೂ ಭಾರತೀಯ ಸೇನೆಯ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರು ಮೇಜರ್ ಗೊಗೊಯ್ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ರಕ್ಷಣಾ ಸಚಿವ ಅರುಣ್ ಜೇಟ್ಲಿಯವರಂತೂ- ರಣರಂಗದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಸ್ಥಳದಲ್ಲಿ ಇರುವ ಸೇನಾಧಿಕಾರಿಗಳೇ ನಿರ್ಧರಿಸಬೇಕು. ಆಪತ್ತಿನ ಸಂದರ್ಭದಲ್ಲಿ ಅವರು ರಾಜಕಾರಣಿಗಳನ್ನು, ಸಂಸದರನ್ನು ಸಂಪರ್ಕಿಸುತ್ತ ಕೂರಬೇಕಿಲ್ಲ’’ ಎಂದು ಸಮರ್ಥಿಸಿಕೊಂಡಿದ್ದಾರೆ. ಮೇಜರ್ ಗೊಗೊಯ್ ಅವರಿಗೆ ಅನಿರೀಕ್ಷಿತ ವಲಯದಿಂದಲೂ ಬೆಂಬಲ ದೊರತಿದೆ. ಪಂಜಾಬಿನ ಕಾಂಗ್ರೆಸ್ ಮುಖ್ಯ ಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಮೇ 20ರಂದು ‘ಇಂಡಿಯನ್ ಎಕ್ಸಪ್ರೆಸ್’ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಮೇಜರ್ ಗೊಗೊಯ್ ಅರ ಕ್ರಮವನ್ನು ಸಮರ್ಥಿಸಿದ್ದಾರೆ.

ಜನರಲ್ ಬಿಪಿನ್ ರಾವತ್ ಅವರು ವಾಕ್‌ರೂಪದ ಸಮರ್ಥನೆಗೂ ಒಂದು ಹೆಜ್ಜೆ ಮುಂದೆ ಹೋಗಿ ಮೇಜರ್ ಗೊಗೊಯ್ ಅವರಿಗೆ ಶ್ಲಾಘನಾ ಪತ್ರ/ಪದಕಗಳನ್ನು ನೀಡಿದ್ದಾರೆ. ಸೇನಾ ಮುಖ್ಯಸ್ಥರ ಈ ಕ್ರಮ ಹಾಗೂ ಅವರು ವಾರ್ತಾ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆಡಿರುವ ಮಾತುಗಳು ನಾಗರಿಕ ಸಮಾಜವನ್ನು ಮತ್ತಷ್ಟು ವಿಹ್ವಲಗೊಳಿಸಿದೆ.ಕಾಶ್ಮೀರದಲ್ಲಿ ಜನರು ಕಲ್ಲುಗಳನ್ನು, ಪೆಟ್ರೊಲ್ ಬಾಂಬುಗಳನ್ನು ರಕ್ಷಣಾ ಪಡೆಗಳ ಮೇಲೆ ಎಸೆಯುತ್ತಿದ್ದ ಸಮಯದಲ್ಲಿ ಭಾರತದ ಪಡೆಗಳು ಪ್ರತಿಭಟನಾಕಾರನೊಬ್ಬನನ್ನು ಜೀಪಿನ ಮೇಲೆ ಕಟ್ಟಿಹಾಕಿ ತಮ್ಮ ರಕ್ಷಣೆಗೆ ಗುರಾಣಿಯಂತೆ ಬಳಸಿಕೊಂಡದ್ದು ಅಂದಿನ ಸಂದರ್ಭದಲ್ಲಿ ಸಾಮಾನ್ಯ ತಿಳಿವಳಿಕೆಯ ಸಂಗತಿ ಎಂದಿದ್ದಾರೆ ಜನರಲ್ ಬಿಪಿನ್ ರಾವತ್.

ರಾವತ್ ಅವರು ಮುಂದುವರಿದು, ‘‘ಶತ್ರುಗಳು ನಮ್ಮ ಬಗ್ಗೆ ಭಯಭೀತರಾಗಿರಬೇಕು ಹಾಗೆಯೇ ಜನರೂ ನಮ್ಮ ಬಗ್ಗೆ ಭಯಭೀತಿ ಹೊಂದಿರಬೇಕು. ನಾವು ಸ್ನೇಹಭಾವದ ಸೈನಿಕರು. ಆದರೆ ನಮ್ಮನ್ನು ಕಾನೂನು ಸುವ್ಯವಸ್ಥೆ ಸರಿಪಡಿಸಲು ಕರೆದಾಗ ನಮ್ಮ ಜನರು ಸಹ ನಮ್ಮ ಬಗ್ಗೆ ಭಯಭೀತರಾಗಿರಬೇಕು’’ ಎಂದು ಅಪ್ಪಣೆ ಕೊಡಿಸಿದ್ದಾರೆ. ಇದು ನಿಜಕ್ಕೂ ಆತಂಕಕಾರಿಯಾದ ಮಾತು. ಈ ಮಾತು ಕೇಳಿದರೆ, ನಾವೇನು ಮಿಲಿಟರಿ ಆಡಳಿತದಲ್ಲ್ಲಿದ್ದೇವೆಯೋ ಎಂದು ಗಾಬರಿಯಾಗುತ್ತದೆ. ಏಕೆಂದರೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ತಮ್ಮ ಸೇನೆಯ ಬಗ್ಗೆ ಗೌರವದಿಂದಿರಬೇಕೆ ವಿನ: ಭಯಭೀತರಾಗಿರಬೇಕಾಗಿಲ್ಲ. ಮಿಲಿಟರಿಯ ಅಂಕುಶ ಪ್ರಭುತ್ವವಿದ್ದಲ್ಲಿ ಮಾತ್ರ ಪ್ರಜೆಗಳು ಸೇನೆಗೆ ಭಯಭೀತರಾಗಿರಬೇಕಾಗುತ್ತದೆ.

ಸಾಮಾನ್ಯವಾಗಿ ಗಡಿ ರಕ್ಷಣೆ ಸೈನ್ಯದ ಕೆಲಸ. ಆಂತರಿಕ ಭದ್ರತೆ ಮತ್ತು ಕಾಯ್ದೆ ಸುವ್ಯವಸ್ಥೆ ಪರಿಪಾಲನೆ ಸೇನೆಯ ಕೆಲಸವಲ್ಲ. ಆಂತರಿಕ ಭದ್ರತೆಗಾಗಿ ಹಲವಾರು ವಿಶೇಷ ಪಡೆಗಳ ವ್ಯವಸ್ಥೆಯನ್ನು ಕೇಂದ್ರ ಸರಕಾರ ಮಾಡಿದೆ. ಹೀಗಿರುವಾಗ ಕೇಂದ್ರ ಸರಕಾರ ಕಾಶ್ಮೀರದಲ್ಲಿನ ಆಂತರಿಕ ಭದ್ರಾತಾ ಪರಿಸ್ಥಿತಿ ನಿರ್ವಹಣೆಗಾಗಿ ಸೇನೆಯನ್ನು ನಿಯೋಜಿಸಿರುವುದು ಹಾಗೂ ಪ್ರಜೆಗಳು ತನಗೆ ಹೆದರಬೇಕೆಂದು ಸೈನ್ಯದ ಮುಖ್ಯಸ್ಥರು ಹೇಳಿರುವುದು ಪ್ರಜಾಪ್ರಭುತ್ವಕ್ಕೆ ಶುಭಶಕುನವಲ್ಲ.

ಪರಿಸ್ಥಿತಿ ಎಷ್ಟೇ ತೀವ್ರ ಸ್ವರೂಪದ್ದಿರಲಿ, ಪೌರ ಅಶಾಂತಿಯನ್ನು ಎದುರಿಸಲು ಮುಗ್ಧ ಪ್ರಜೆಯೊಬ್ಬನನ್ನು ಒತ್ತೆಯಾಳಾಗಿ ವಶಕ್ಕೆ ತೆಗೆದುಕೊಳ್ಳುವುದನ್ನು ಹಾಗೂ ಆ ವ್ಯಕ್ತಿಯನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುವುದನ್ನು ನವೀನ ರಕ್ಷಣಾ ಕ್ರಮವೆಂದು ಸಮರ್ಥಿಸಿಕೊಳ್ಳಲಾಗದು. ಸೇನಾ ಪಡೆಗಳಿಗೂ ನೀತಿ ಸಂಹಿತೆ ಇರುತ್ತದೆ, ಘನತೆಗೌರವಗಳ ಪಾಲನೆಯ ಬದ್ಧತೆ ಇರುತ್ತದೆ. ಕಾರ್ಯಾಚರಣೆ ವೇಳೆಯಲ್ಲಿ, ಹತ್ತಿಕ್ಕುವ ಹೊಸ ಬಗೆಯ ಕ್ರಮ ಎಂಬ ನೆಪದಲ್ಲಿ ಈ ನೀತಿನಿಯಮಗಳನ್ನು ಉಲ್ಲಂಘಿಸಲಾಗದು. ಭಯೋತ್ಪಾದಕರು ಮುಗ್ಧರನ್ನು ಕೈವಶ ಮಾಡಿಕೊಂಡು ಒತ್ತೆಯಾಳಾಗಿಟ್ಟುಕೊಳ್ಳುವುದು ಅಮಾನುಷ ಕೃತ್ಯ. ಆದರೆ ಕೆಲವೊಂದು ನೀತಿ, ಘನತೆಗೌರವಗಳಿಗೆ ಬದ್ಧವಾದ ಸೇನೆಯೂ ಹೀಗೆ ವರ್ತಿಸಿದಲ್ಲಿ ಅದು ಪುಂಡು ಸೇನೆ ಎನ್ನಿಸಿಕೊಳ್ಳುತ್ತದೆ.

ಕಾಶ್ಮೀರದಲ್ಲಿನ ಪರಿಸ್ಥಿತಿ ಉಲ್ಬಣಿಸಿರುವುದು ನಿಜ. ಆದರೆ ಎಂಥ ಪರಾಕಾಷ್ಠೆಯ ವಿಪತ್ಕಾರಿ ಸ್ಥಿತಿಯಲ್ಲೂ ಸೇನೆ ಮೂಲಭೂತ ನೀತಿತತ್ವಗಳಿಂದ ಹಿಂದೆ ಸರಿಯಲಾಗದು. ಕಾಶ್ಮೀರದಲ್ಲಿನ ಸ್ಥಿತಿಯನ್ನು ‘ಡರ್ಟಿ ವಾರ್’ ಎಂದು ಜನರಲ್ ಬಿಪಿನ್ ರಾವತ್ ಬಣ್ಣಿಸಿರುವುದು ಸರಿಯಲ್ಲ ಎಂಬುದು ಅನೇಕ ಪರಿಣಿತರ ಅಭಿಪ್ರಾಯವಾಗಿದೆ. ಸೇನೆ ಅಲ್ಲಿ ಎದುರಿಸುತ್ತಿರುವುದು ಪೌರ ಸಂಘರ್ಷವನ್ನು, ದೇಶದ ಪ್ರಜೆಗಳ ಪ್ರತಿಭಟನೆಯನ್ನು. ಸೇನಾ ಮುಖ್ಯಸ್ಥರಾಗಲೀ ಅಥವಾ ಚುನಾಯಿತ ಸರಕಾರವಾಗಲಿ ಈ ಪೌರ ಪ್ರತಿಭಟನೆಯನ್ನು ಯುದ್ಧವೆಂದೂ, ಪ್ರತಿಭಟಿಸುತ್ತಿರುವ ಜನತೆಯನ್ನು ಶತ್ರುಗಳೆಂದೂ ಭಾವಿಸಿದ್ದಲ್ಲಿ ಅದು ಘೋರವಾದ ತಪ್ಪುತಿಳುವಳಿಕೆ ಎಂದೇ ಹೇಳಬೇಕಾಗುತ್ತದೆ. ಪ್ರತಿಭಟಿಸುತ್ತಿದ್ದ ಪ್ರಜೆಗಳ ಕೈಯಲ್ಲಿ ಅಸ್ತ್ರಗಳಿದ್ದಿದ್ದಲ್ಲಿ ತಾವು ಬೇಕಾದ್ದನ್ನು ಮಾಡಬಹುದಿತ್ತು ಎಂಬ ಮಾತಂತೂ ಆಘಾತಕಾರಿ ಯಾದದ್ದು. ಅಷ್ಟೇ ಆಘಾತಕಾರಿಯಾದದ್ದು ಜನರಲ್ ಅವರ ನೈತಿಕ ಪರಿಕಲ್ಪನೆ.

ಹೋರಾಡುವ ಸೈನಿಕರಿಗೆ ಸೇನೆಯ ಮುಖ್ಯಸ್ಥರು ನೈತಿಕ ಧೈರ್ಯ-ಸ್ಥೈರ್ಯ ತುಂಬಬೇಕೆಂಬುವುದರಲ್ಲಿ ಎರಡನೆಯ ಮಾತಿರಲಾರದು. ಆದರೆ ಹೀಗೆ ಮಾತಾಡುವಾಗ ಸೈನಿಕರ ಮತ್ತು ಅವರ ಕುಟುಂಬದವರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಸಲ್ಲದು. ದೇಹ, ಕಾಫಿನ್, ಧ್ವಜದ ಬಗ್ಗೆ ಅವರು ಆಡಿರುವ ಭಾವೋದ್ವೇಗ ಪ್ರಚೋದನೆಯ ಮಾತುಗಳು ಜನರಲ್ ಒಬ್ಬರಿಗೆ ತಕ್ಕುದಾದುದಲ್ಲ. ತಪ್ಪುಗಳನ್ನು, ಅಕ್ರಮಗಳನ್ನು ಬೆಂಬಲಿಸುವ ಮೂಲಕ ಸೇನೆಯಲ್ಲಿ ನೈತಿಕ ಸ್ಥೈರ್ಯ ತುಂಬಲು ನಡೆಸುವ ಇಂಥಹ ಪ್ರಯತ್ನಗಳು ದೀರ್ಘಾವಧಿಯಲ್ಲಿ ದುಷ್ಪರಿಣಾಮ ಉಂಟುಮಾಡಬಹುದು.

ಮೇಜರ್ ಗೊಗೊಯ್ ಅವರ ಅಮಾನುಷ ಕ್ರಮದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾದನಂತರ ತನಿಖೆಗೆ ಆಜ್ಞೆಮಾಡಲಾಯಿತು. ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮೊದಲೇ ಜನರಲ್ ಬಿಪಿನ್ ರಾವತ್ ಅವರು ಗೊಗೊಯ್ ಅವರ ಕ್ರಮವನ್ನು ಸಮರ್ಥಿಸಿ ಶಹಬಾಸ್‌ಗಿರಿ ನೀಡಿದ್ದಾರೆ, ಪ್ರಶಂಸಾ ಪತ್ರ/ಪದಕಗಳನ್ನು ನೀಡಿದ್ದಾರೆ. ಜನರಲ್ ಅವರ ಈ ಶ್ಲಾಘನೆಯನ್ನು ಅಲಕ್ಷಿಸಿ ವಿಚಾರಣಾ ಸಮಿತಿ ನಿಷ್ಪಕ್ಷಪಾತ ತನಿಖೆ ನಡೆಸುವುದೆಂದು ನಿರೀಕ್ಷಿಸಲಾದೀತೆ? ಮೇಜರ್ ಗೊಗೊಯ್ ಅವರು ಮಾಡಿರುವುದು ಸರಿ ಎಂದು ಸೇನಾ ಮುಖ್ಯಸ್ಥರು ಹೇಳಿರುವಾಗ, ಸರಿಯಲ್ಲ ಎಂದು ಹೇಳುವ ಧೈರ್ಯವನ್ನು ಅಧೀನ ಅಧಿಕಾರಿಗಳು ತೋರುವರೆಂಬುದು ಹುಸಿ ನಿರೀಕ್ಷೆಯಷ್ಟೆ ಆದೀತು.

ಕಾಶ್ಮೀರದ ಬಗ್ಗೆ ಪೂರ್ವಾಗ್ರಹಪೀಡಿತವಾದ ಭಾರತೀಯ ಜನತಾ ಪಕ್ಷ ಮತ್ತು ಮೋದಿಯವರ ಸರಕಾರ ಕಾಶ್ಮೀರಿಗಳೆಲ್ಲರನ್ನೂ ಕಲ್ಲು ತೂರುವವರೆಲ್ಲರನ್ನೂ ಶಂಕೆಯಿಂದ ನೋಡುವ ಆನುಮಾನ ಪ್ರವೃತ್ತಿಯಿಂದ ಮುಕ್ತವಾಗಬೇಕು. ಸೇನೆಯ ಬಲಪ್ರಯೋಗದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂಬುದನ್ನು ಇನ್ನಾದರೂ ಮನಗಾಣಬೇಕು. ಚುನಾಯಿತ ಸರಕಾರದ ರಾಜಕೀಯ ಸಂಧಾನ-ಮಾತುಕತೆಗಳಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯ.

Writer - ಬಿ.ಎನ್.ರಂಗನಾಥ ರಾವ್

contributor

Editor - ಬಿ.ಎನ್.ರಂಗನಾಥ ರಾವ್

contributor

Similar News