ವಿಧಾನ ಮಂಡಲ ಅಧಿವೇಶನ ನಾಳೆಯಿಂದ ಆರಂಭ: ಸಾಲಮನ್ನಾ ನಿರೀಕ್ಷೆಗೆ ಕಲಾಪದಲ್ಲಿ ಸಿಗುವುದೆ ಕಸುವು

Update: 2017-06-04 14:08 GMT

ಬೆಂಗಳೂರು, ಜೂ. 4: ಮಳೆಗಾಲದ ಮಹತ್ವದ ಅಧಿವೇಶನ ಇಂದಿ(ಜೂ.5)ನಿಂದ ಆರಂಭಗೊಳ್ಳಲಿದ್ದು, ಬರದಿಂದ ಸಂಕಷ್ಟಕ್ಕೆ ಸಿಲುರುವ ರೈತರ ಕೃಷಿ ಸಾಲಮನ್ನಾ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ), ಕೇಂದ್ರದ ಗೋಹತ್ಯೆ ನಿಷೇಧ ಅಧಿಸೂಚನೆ ಸೇರಿ ಹಲವು ಗಂಭೀರ ವಿಚಾರಗಳು ಕಲಾಪದಲ್ಲಿ ಪ್ರತಿಧ್ವನಿಸಲಿವೆ.

ಮುಂಬರುವ 2018ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ರಾಜಕೀಯ ‘ಲಾಭಕ್ಕಾಗಿ’ ಅಧಿವೇಶನ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಜ್ಜುಗೊಂಡಿವೆ. ಅದೇ ರೀತಿಯಲ್ಲಿ ವಿಪಕ್ಷಗಳಿಗೆ ‘ಅಭಿವೃದ್ಧಿ’ಯ ಉತ್ತರ ನೀಡಲು ಆಡಳಿತಾರೂಢ ಕಾಂಗ್ರೆಸ್ ಸನ್ನದ್ಧವಾಗಿದೆ.

ಜೂ.5ರಿಂದ 16ರ ವರೆಗೆ ಶನಿವಾರ ಮತ್ತು ರವಿವಾರ ರಜಾ ದಿನಗಳನ್ನು ಹೊರತುಪಡಿಸಿ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ನಾಳೆ(ಜೂ.5) ಬೆಳಗ್ಗೆ 11:30ಕ್ಕೆ ಅಧಿವೇಶನ ಕಲಾಪ ಆರಂಭವಾಗಲಿದ್ದು, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

ಆ ಬಳಿಕ ಪ್ರಶ್ನೋತ್ತರ ಕಲಾಪ ಜರುಗಲಿದ್ದು, ಕಳೆದ ಅಧಿವೇಶದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿ/ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಕಾರ್ಯದರ್ಶಿ ವರದಿ ಮಂಡಿಸಲಿದ್ದಾರೆ. ಆ ಬಳಿಕ ಇನ್ನಿತರ ಕಾರ್ಯ ಕಲಾಪ ನಡೆಯಲಿದೆ.

ಬಜೆಟ್ ಮುಂದುವರೆದ ಅಧಿವೇಶನ ಇದಾಗಿದ್ದು, ಇಲಾಖಾವಾರು ಬೇಡಿಕೆಗಳ ಚರ್ಚೆಗೂ ಅವಕಾಶ ಕಲ್ಪಿಸಲಾಗುತ್ತದೆ. ಲೇಖಾನುದಾನ ಪಡೆದಿರುವುದರಿಂದ ಪೂರ್ಣ ಪ್ರಮಾಣದ ಆಯವ್ಯಯಕ್ಕೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಲಾಗುತ್ತದೆ.

ರಾಜ್ಯವನ್ನು ಬಾಧಿಸುತ್ತ್ತಿರವ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳ ಮೇವಿನ ಅಭಾವ ಸೇರಿ ಸರಕಾರದ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿವೆ. ಮಾತ್ರವಲ್ಲದೆ ರೈತರ ಸಾಲಮನ್ನಾ ವಿಚಾರವೂ ಕಲಾಪದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳಿವೆ.

ದಲಿತರ ಕಾಲನಿಗೆ ಯಡಿಯೂರಪ್ಪ ಭೇಟಿ, ಮಳೆಗಾಗಿ ಜಲ ಸಂಪನ್ಮೂಲ ಸಚಿವರ ಪರ್ಜನ್ಯ ಯಾಗ, ಮಹಿಳೆಯರು-ಮಕ್ಕಳ ಮೇಲಿನ ದೌರ್ಜನ್ಯ, ಸರಕಾರಿ ಆಸ್ಪತ್ರೆಗಳ ನಿರ್ಲಕ್ಷ, ಗೋಹತ್ಯೆ ನಿಷೇಧ ಅಧಿಸೂಚನೆ ಸೇರಿದಂತೆ ಹಲವು ವಿಚಾರಗಳು ಪ್ರಸ್ತಾಪ ಆಗಲಿದ್ದು, ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ವಾಗ್ಯುದ್ಧಕ್ಕೂ ಕಾರಣವೂ ಆಗಲಿದೆ. ಬರ ಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಕೃಷಿ ಸಾಲಮನ್ನಾ ನಿರೀಕ್ಷೆಗೆ ಅಧಿವೇಶನ ಸ್ಪಂದಿಸಲಿದೆಯೇ ಎಂಬ ಕುತೂಹಲ ಮೂಡಿಸಿದೆ.

‘ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಸಲ್ಲಿಸಿರುವ ಅವಿಶ್ವಾಸ ನಿರ್ಣಯ ಮತ್ತು ಕಾಂಗ್ರೆಸ್ಸಿನ ಐದು ಮಂದಿ ಸೇರಿ ಎಂಟು ಮಂದಿ ಮೇಲ್ಮನೆ ಸದಸ್ಯರು ಕಾನೂನುಬಾಹಿರವಾಗಿ ಪಡೆದಿದ್ದರೆನ್ನಲಾದ ಪ್ರಯಾಣ ಭತ್ಯೆ ಕುರಿತು ಚರ್ಚೆ ನಡೆಯಲಿದೆ’

ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ

  ವಿಧಾನ ಮಂಡಲ ಉಭಯ ಸದನಗಳ ಅಧಿವೇಶನದ ಹಿನ್ನೆಲೆಯಲ್ಲಿ ಜೂ.5ರ ಬೆಳಗ್ಗೆ 6ಗಂಟೆಯಿಂದ ಜೂ.16ರ ಮಧ್ಯರಾತ್ರಿ 12 ಗಂಟೆಯ ವರೆಗೆ ವಿಧಾನಸೌಧದ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಅಧಿವೇಶನದ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ, ಧರಣಿ ಸತ್ಯಾಗ್ರಹ ನಡೆಸುವಂತಿಲ್ಲ. ಕಾನೂನು ಭಂಗವನ್ನುಂಟು ಮಾಡುವ ಉದ್ದೇಶಕ್ಕಾಗಿ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಸಭೆ ನಡೆಸುವುದು, ಶಸ್ತ್ರ, ದೊಣ್ಣೆ ಸೇರಿ ಮಾರಕಾಸ್ತ್ರ ಸಾಗಾಣಿಕೆ, ಸ್ಫೊಟಕ ಸಿಡಿಸುವುದು ಮತ್ತು ಬಹಿರಂಗ ಘೋಷಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News