ಜೂ.12 : ರಾಹುಲ್ ಗಾಂಧಿ ಬೆಂಗಳೂರಿಗೆ

Update: 2017-06-04 14:59 GMT
ಬೆಂಗಳೂರು, ಜೂ. 4: ಕಾಂಗ್ರೆಸ್ ಪಕ್ಷದ ಪತ್ರಿಕೆಯಾದ ನ್ಯಾಷನಲ್ ಹೆರಾಲ್ಡ್ ಪುನರಾರಂಭಕ್ಕೆ ಚಾಲನೆ ನೀಡಲು ಜೂ.12ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ನಗರದ ಕಾಂಗ್ರೆಸ್ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರ ಸಭೆ ನಡೆಯಿತು. ಈ ಪತ್ರಿಕೆಯ ಪುನರಾರಂಭ ಕಾರ್ಯಕ್ರಮ ವಸಂತನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜೂ.12ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೂ ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಹಾಮಿದ್ ಅನ್ಸಾರಿ ಭಾಗವಹಿಸುವ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಕೆ.ಸಿ.ವೇಣುಗೋಪಾಲ್ ಅವರಿಗೆ ವಹಿಸಲಾಗಿದೆ. ಹೀಗಾಗಿ, ಈ ಕಾರ್ಯಕ್ರಮದ ರೂಪರೇಷಗಳನ್ನು ಸಿದ್ಧಪಡಿಸಲು ಜೂ.10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಹಾಗೂ ಹಾಮಿದ್ ಅನ್ಸಾರಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಸ್ವಾಗತಕ್ಕೆ ಕಾಂಗ್ರೆಸ್‌ನಲ್ಲಿ ಬರದ ಸಿದ್ಧತೆ ನಡೆದಿದಿದೆ. ಕಾಂಗ್ರೆಸ್ ಪಕ್ಷದೊಂದಿಗೆ ತಳುಕು ಹಾಕಿಕೊಂಡಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಒಂದು ಕಾಲದಲ್ಲಿ 5 ಸಾವಿರಕ್ಕೂ ಹೆಚ್ಚು ಸ್ವಾತಂತ್ರ ಹೋರಾಟಗಾರರ ಕನಸಾಗಿತ್ತು. ಭಾರತದ ಮೊದಲ ಪ್ರಧಾನಿ ನೆಹರು ನೇತೃತ್ವದಲ್ಲಿ 1937ರ ನ.20ರಂದು ಅಸೋಸಿಯೇಟೆಡ್ ಜರ್ನಲ್ಸ್ ಲಿ.(ಎಜೆಎಲ್) ಎಂಬ ಸಂಸ್ಥೆ ಸ್ಥಾಪಿಸಲಾಗಿತ್ತು. ಇದರಲ್ಲಿ ಐದು ಸಾವಿರಕ್ಕೂ ಹೆಚ್ಚು ಸ್ವಾತಂತ್ರ ಹೋರಾಟಗಾರರು ಶೇರುದಾರರು ಆಗಿದ್ದರು. ಇದರ ಮೂಲಕ 1938ರಲ್ಲಿ ಮೊದಲ ಬಾರಿಗೆ ನ್ಯಾಷನಲ್ ಹೆರಾಲ್ಡ್ ಎಂಬ ಆಂಗ್ಲ ಪತ್ರಿಕೆ, ಖ್ವಾಮಿ ಆವಾಜ್ ಎಂಬ ಉರ್ದು ಪತ್ರಿಕೆ ಮತ್ತು ನವಜೀವನ್ ಎಂಬ ಹಿಂದಿ ಪತ್ರಿಕೆ ಆರಂಭಸಲಾಗಿತ್ತು. 2008ರಲ್ಲಿ ನಷ್ಟದ ಕಾರಣವೊಡ್ಡಿ ಮೂರು ಪತ್ರಿಕೆಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News