ಅತ್ಯಾಚಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹ
Update: 2017-06-04 22:17 IST
ಬೆಂಗಳೂರು, ಜೂ.4: ನಗರದ ಜನತೆಯನ್ನು ಬೆಚ್ಚಿಬೀಳಿಸಿದ ಅಪ್ರಾಪ್ತೆ ಬಾಲಕಿಯ ಅತ್ಯಾಚಾರ ಪ್ರಕರಣದ ದುಷ್ಕರ್ಮಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಐಎಮ್‌ಎಸ್‌ಎಸ್‌ನ ಜಿಲ್ಲಾ ಸಮಿತಿ ಅಧ್ಯಕ್ಷೆ ಹರಿಣಿ ಆಚಾರ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನ ಕೆ.ಜಿ.ಹಳ್ಳಿ ವ್ಯಾಪ್ತಿಯ ವೈಯಾಲಿಕಾವಲ್ ಸೊಸೈಟಿ ಸಮೀಪ ಚಿತ್ರದುರ್ಗ ಮೂಲದ 5 ವರ್ಷದ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಯು ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೌರ್ಜನ್ಯವೆಸಗಿ ನಂತರ ಮನೆಯ ಬಳಿ ರಸ್ತೆಯಲ್ಲಿ ಎಸೆದು ಹೋಗಿದ್ದಾನೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತ ಕೆಲಸ, ಖಂಡನೀಯವಾದದ್ದು. ಆರೋಪಿಯ ವಿರುದ್ಧ ಕೂಡಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಮರುಕಳಿಸುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಮಹಿಳೆಯರಿಗೆ, ಹೆಣ್ಣುಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸಲು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ದಿನೇ ದಿನೇ ಸಮಾಜದ ಸಾಂಸ್ಕೃತಿಕ ವಾತಾವರಣ ಹದಗೆಡುತ್ತಿದೆ. ಜನರ ಪ್ರಜ್ಞಾಪೂರ್ವ ಸಾಮೂಹಿಕ ಹೋರಾಟದಿಂದ ಮಾತ್ರ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಸ್ತರದ ಮಹಿಳೆಯರೂ ಸೇರಿದಂತೆ ವಿದ್ಯಾರ್ಥಿ ಯುವಜನರು ದೇಶದಾದ್ಯಂತ ಹೋರಾಟ ಬೆಳೆಸಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.