×
Ad

ಶಾಲಾ ಪಠ್ಯದಲ್ಲಿ ಬಸವಣ್ಣನ ವಚನಗಳು ನಶಿಸುತ್ತಿವೆ: ಡಾ.ಶಾಂತವೀರ ಸ್ವಾಮೀಜಿ

Update: 2017-06-04 22:20 IST
ಬೆಂಗಳೂರು, ಜೂ.4: ಶಾಲಾ ಪಠ್ಯ ಪುಸ್ತಕದಲ್ಲಿ ಕಾಂತ್ರಿಕಾರಿ ಬಸವಣ್ಣ ರಚಿಸಿದ ವಚನಗಳು ನಶಿಸಿ ಹೋಗುತ್ತಿದ್ದು, ಇದರಿಂದ ಮಕ್ಕಳು ಧರ್ಮದಿಂದ ವಿಮುಖರಾಗುತ್ತಿದ್ದಾರೆ ಎಂದು ಕೊಳದ ಮಠದ ಪೀಠಾಧೀಶ ಡಾ.ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಗಾಂಧಿ ಭವನದಲ್ಲಿ 515 ಭೂ ಸೇನಾ ಕಾರ್ಯಾಗಾರ ಬಸವ ಬಳಗ ಆಯೋಜಿಸಿದ್ದ ಬಸವ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾತಿಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕ್ರಾಂತಿಕಾರಿ ಬಸವಣ್ಣನವರು ಸಾವಿರಾರು ವಚನಗಳನ್ನು ರಚಿಸಿದರು. ಆದರೆ, ಸರಕಾರಗಳು ಬಸವಣ್ಣನವರ ವಚನ ಹಾಗೂ ಧರ್ಮವನ್ನು ಪಠ್ಯದಲ್ಲಿ ಅಳವಡಿಸದ ಹಿನ್ನೆಲೆಯಲ್ಲಿ ಮಕ್ಕಳು ಧರ್ಮದಿಂದ ವಿಮುಖರಾಗುತ್ತಿದ್ದಾರೆ ಎಂದು ಅಭಿಪ್ರಾಯಿಸಿದರು. ಬಸವಣ್ಣನವರು ರಾಜಕೀಯ ಗುರು, ಸಂಸ್ಕೃತಿ, ಸಾಹಿತ್ಯ, ಭಾಷೆ ಹಾಗೂ ವಿದ್ವಾಂಸ ಗುರುಗಳಾಗಿದ್ದರು. ಇದರಿಂದ, 12ನೆ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆಯಾಗಿ ಎಲ್ಲ ಜಾತಿಯವರೂ ಅನುಭವ ಮಂಟಪದ ಸದಸ್ಯರಾಗಿ ಹೆಸರುವಾಸಿಯಾದರು ಹಾಗೂ ಜಾತಿಯನ್ನು ಹೋಗಲಾಡಿಸಲು ಎಲ್ಲ ಜಾತಿಯವರೂ ವಚನಗಳನ್ನು ರಚಿಸಿ ಜಾತಿ ಕಡಿವಾಣಕ್ಕೆ ಮುಂದಾದರು ಎಂದು ಹೇಳಿದರು. ಇತ್ತೀಚಿನ ದಶಕಗಳಲ್ಲಿ ಜಾತಿ ಕುಷ್ಠರೋಗವಾಗಿ ಬೆಳೆದು ನಿಂತಿದ್ದು, ಕೆಂಪೇಗೌಡ ಅವರ ಜಯಂತಿಗೆ ಖರ್ಚು ಮಾಡಿದಷ್ಟು ಹಣವನ್ನು ವೀರಶೈವ ಲಿಂಗಾಯತ ಕ್ರಾಂತಿಕಾರಿಗಳಿಗೆ ಖರ್ಚು ಮಾಡುತ್ತಿಲ್ಲ. ಇದರಿಂದ ಬಹಳ ನೋವಾಗಿದೆ. ಹಾಗೂ ಇನ್ನು ಮುಂದೆಯಾದರೂ ವೀರಶೈವರು ಒಂದಾಗಿ ಜಾತ್ಯಾತೀತತೆಗೆ, ಬಸವಣ್ಣನ ಜಯಂತಿಗೆ ಹಾಗೂ ವಚನಗಳಿಗೆ ಆದ್ಯತೆಯನ್ನು ನೀಡೋಣ ಎಂದು ತಿಳಿಸಿದರು. ಬಸವ ವೇದಿಕೆಯ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ವಿಶ್ವದಲ್ಲಿರುವ ಸಂವಿಧಾನಗಳನ್ನು ತಿದ್ದುಪಡಿ ಮಾಡಲು ಅವಕಾಶವಿದೆ. ಆದರೆ, ಬಸವಣ್ಣನವರು ವಚನಗಳಿಗೆ ಯಾವುದೇ ತಿದ್ದುಪಡಿ ಮಾಡಲು ಬರುವುದಿಲ್ಲ. ಹಾಗೂ ಎಲ್ಲ ಕಾಲಕ್ಕೂ ಅವರ ವಚನಗಳು ಅನ್ವಯಿಸುತ್ತವೆ ಎಂದು ತಿಳಿಸಿದರು. 515 ಭೂಸೇನಾ ಕಾರ್ಯಾಗಾರದ ಆಡಳಿತಾಧಿಕಾರಿ ಕೆ.ಎಸ್.ನರಸಿಂಹಮೂರ್ತಿ ಮಾತನಾಡಿ, ಬಸವಣ್ಣನವರು ಜಾತಿ ಇರಬಾರದು ಎಂದು ಹೇಳಿದ್ದರೂ ಜಾತಿ ಪ್ರಮಾಣ ಪತ್ರದಲ್ಲಿ ಜಾತಿಯನ್ನು ನಮೂದಿಸುತ್ತೇವೆ. ಇದರಿಂದ, ಮಕ್ಕಳೂ ಜಾತಿ ವ್ಯವಸ್ಥೆಯ ಪಾಲುದಾರರಾಗುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News