ನಗರದ ಕೆರೆಗಳನ್ನುಅಭಿವೃದ್ಧಿಗೊಳಿಸದ್ದರೆ ಹೋರಾಟ: ಎಚ್.ಎಸ್.ದೊರೆಸ್ವಾಮಿ ಎಚ್ಚರಿಕೆ

Update: 2017-06-04 16:58 GMT
ಬೆಂಗಳೂರು, ಜೂ. 4: ನಗರದ ಕೆರೆಗಳನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ರವಿವಾರ ಯುನೈಟೆಡ್ ಬೆಂಗಳೂರು ಸಂಘಟನೆಯ ಸ್ವಯಂ ಸೇವಕರು ಹಮ್ಮಿಕೊಂಡಿದ್ದ ಕೆರೆ ಉಳಿಸಿ ಅಭಿಯಾನದಲ್ಲಿ ಪಾಲ್ಗೊಂಡು ಅವರು, ಸುಬ್ರಹ್ಮಣ್ಯಪುರ, ವಸಂತಪುರ ಹಾಗೂ ಗೌಡನಪಾಳ್ಯ ಕೆರೆಗಳಿಗೆ ಹಾಗೂ ವಸಂತತೀರ್ಥ ಕಲ್ಯಾಣಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಮೂರು ಕೆರೆಗಳ ಆಸುಪಾಸಿನ ನಿವಾಸಿಗಳು ಕೆರೆ ಕಲುಷಿತ ಗೊಂಡಿರುವುದರಿಂದ ಎದುರಾಗಿರುವ ಸಮಸ್ಯೆಗಳ ಮಹಾಪೂರವನ್ನೇ ತಂಡದ ಮುಂದಿಟ್ಟರು. ಜನರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿದ ದೊರೆಸ್ವಾಮಿ, ವಾರದ ಬಳಿಕ ಮತ್ತೆ ಇದೇ ಸ್ಥಳಕ್ಕೆ ಭೇಟಿ ನೀಡುತ್ತೇವೆ. ಅಷ್ಟರಲ್ಲಿ ಕಾಮಗಾರಿ ಆರಂಭ ಆಗಿರಬೇಕು. ಇಲ್ಲವಾದರೆ ಹೋರಾಟ ನಿಶ್ಚಿತ ಎಂದು ಸ್ಥಳೀಯ ಪಾಲಿಕೆ ಸದಸ್ಯರಿಗೆ ಎಚ್ಚರಿಕೆ ನೀಡಿದರು ಈ ವೇಳೆ ಕೆರೆಗಳ ಅಭಿವೃದ್ಧಿಗೆ ಸಿಕ್ಕಿರುವ ಅನುದಾನ ಹಾಗೂ ಅದರಿಂದ ಏನೆಲ್ಲಾ ಕಾರ್ಯಗಳನ್ನು ಮಾಡುತ್ತೀರಿ ಎಂಬ ಸಮಗ್ರ ಯೋಜನಾ ವರದಿಯ ನೀಲ ನಕಾಶೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದು ಸ್ಥಳೀಯ ಪಾಲಿಕೆ ಸದಸ್ಯರಿಗೆ ಸೂಚಿಸಿದರು. ವಸಂತಪುರ ಕೆರೆ ಅಭಿವೃದ್ಧಿಗೆ ಬಿಬಿಎಂಪಿ ವತಿಯಿಂದ 3ಕೋಟಿ ಬಿಡುಗಡೆ ಯಾಗಿದೆ. ಹೂಳೆತ್ತುವ, ತಂತಿ ಬೇಲಿ ಅಳವಡಿಸುವ ಹಾಗೂ ನಡಿಗೆ ಪಥ ನಿರ್ಮಿಸುವ ಕಾಮಗಾರಿಗಳನ್ನು ವಾರದೊಳಗೆ ಪ್ರಾರಂಭಿಸಲಾಗುತ್ತದೆ ಎಂದು ಉತ್ತರಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಹನುಮಂತಯ್ಯ ಹೇಳಿದರು. ವಸಂತಪುರ ತೀರ್ಥ ಕಲ್ಯಾಣಿ ಕೆರೆಯಲ್ಲಿ ನೀರು ಸದಾ ಜಿನುಗುತ್ತಿತ್ತು. ದೇವರ ಕೆರೆ, ದೊರೆ ಕೆರೆ, ರಾಜರಾಜೇಶ್ವರಿ ಕೆರೆ ತುಂಬಲು ಇದೇ ಕಲ್ಯಾಣಿ ಮೂಲವಾಗಿತ್ತು. ಇದರ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಕಲ್ಯಾಣ ನಿರ್ಮಾಣ ಆಗುತ್ತಿದೆ. ಬಿಲ್ಡರ್ ಒಬ್ಬರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಸ್ತೆ ನಿರ್ಮಿಸಲು ಕಲ್ಯಾಣಿ ಜಾಗ ಬಿಡಲಾಗಿದೆ ಎಂದು ಸ್ಥಳೀಯರು ದೊರೆಸ್ವಾಮಿ ಬಳಿ ಆರೋಪಿಸಿದರು. 1 ಎಕರೆ 33 ಗುಂಟೆ ಕಲ್ಯಾಣಿಯ ಮೂಲ ವಿಸ್ತೀರ್ಣ. ಹಿಂದೆ ಇದ್ದ ವಿಸ್ತೀರ್ಣದಷ್ಟೇ ಕಲ್ಯಾಣಿ ನಿರ್ಮಾಣ ಆಗಬೇಕು. ಒತ್ತುವರಿಯಾಗಿರುವ 4 ಗುಂಟೆ ಜಮೀನು ವಶಕ್ಕೆ ಪಡೆಯಬೇಕು ಎಂದು ದೊರೆಸ್ವಾಮಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News