ಸ್ಪೆಲ್ ಬೀ ಚಾಂಪಿಯನ್ ಅನನ್ಯರನ್ನು ಹೀಯಾಳಿಸಿದ ಸಿ ಎನ್ ಎನ್ ನಿರೂಪಕಿ

Update: 2017-06-05 08:27 GMT

ನ್ಯೂಯಾರ್ಕ್,ಜೂ.5 : ಇತ್ತೀಚೆಗೆ 90ನೇ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪಧೆಯಲ್ಲಿ ಚಾಂಪಿಯನ್ ಆಗಿರುವ ಭಾರತೀಯ ಅಮೆರಿಕನ್ ಬಾಲಕಿ 12 ವರ್ಷದ ಅನನ್ಯಾ ವಿನಯ್ ಳ ಸಂದರ್ಶನ ನಡೆಸಿದ ಸಿ ಎನ್ ಎನ್ ಚಾನಲ್ ನಿರೂಪಕಿಯೊಬ್ಬರು ‘‘ನೀವು ಸಂಸ್ಕೃತ ಬಳಸುವುದಲ್ಲವೇ?’’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿ ನಿಂದಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಟೀಕೆಗೊಳಗಾಗಿದೆ.

ಕ್ಯಾಲಿಫೋರ್ನಿಯಾ ನಿವಾಸಿಯಾಗಿರುವ ಅನನ್ಯಾರನ್ನು ಸಿ ಎನ್ ಎನ್  ನಿರೂಪಕರಾದ ಅಲಿಸಿನ್ ಕ್ಯಾಮರೊಟಾ ಹಾಗೂ ಕ್ರಿಸ್ ಕುವೊಮೆ ಸಂದರ್ಶನಗೈದಿದ್ದರು.

ಸಂದರ್ಶನದ ಅಂತ್ಯದಲ್ಲಿ ಕ್ಯಾಮರೊಟಾ ಅವರು ಅನನ್ಯಾರಿಗೆ ಇತ್ತೀಚೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಒಂದರಲ್ಲಿ ಉಪಯೋಗಿಸಿದ ಅರ್ಥವಾಗದ ಪದ ‘‘ಕೋವ್‌ಫೇಫೇ’’ ಸ್ಪೆಲ್ಲಿಂಗ್ ಹೇಳುವಂತೆ ಹೇಳಿದಾಗ ಅದರ ಅರ್ಥ ಹಾಗೂ ಭಾಷೆ ಯಾವುದೆಂದು ಅನನ್ಯಾ ಪ್ರಶ್ನಿಸಿದ್ದರು. ಅದಕ್ಕೆ ನಿರೂಪಕರು ‘‘ಗಿಬ್ಬೆರಿಶ್’’ ಎಂದು ಉತ್ತರಿಸಿದ್ದರು. ಈ ಪದದ ಸ್ಪೆಲ್ಲಿಂಗ್ ಅಂದಾಜಿಸಲು ಯತ್ನಿಸಿದ ಅನನ್ಯಾ ಕೊನೆಗೆ ಅದನ್ನು ‘ಕೊಫೇಫೇ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕ್ಯಾಮರೊಟಾ ‘‘ಅದೊಂದು ಅಸಂಬದ್ಧ ಪದ. ಅದರ ಮೂಲ ಸಂಸ್ಕೃತ ಭಾಷೆಯಲ್ಲಿದೆಯೇ ಎಂಬುದು ನಮಗೆ ತಿಳಿಯದಾಗಿದ್ದು, ಪ್ರಾಯಶಃ ಈ ಭಾಷೆ ಉಪಯೋಗಿಸಿ ನಿಮಗೆ ತಿಳಿದಿರಬಹುದು, ನನಗೆ ಗೊತ್ತಿಲ್ಲ,’’ ಎಂದು ಬಿಟ್ಟರು. ನಂತರ ಆಕೆ ಅನನ್ಯಾಳನ್ನು ಬಹಳಷ್ಟು ಹೊಗಳಿದರೂ, ಸಂಸ್ಕೃತವನ್ನು ಹೀಗಳೆದು ಆಂಕರ್ ಮಾತನಾಡಿದ್ದು ಸಾಮಾಜಿಕ ಜಾಲತಾಣ ಪ್ರಿಯರಿಗೆ ಸರಿ ಕಂಡು ಬಂದಿಲ್ಲ.

ಈ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಸಿಎನ್‌ಎನ್ ವಕ್ತಾರರೊಬ್ಬರು ಹೇಳಿಕೆಯೊಂದನ್ನು ನೀಡಿ. ನಿರೂಪಕರ ಮಾತುಗಳು ಬಾಲಕಿಯ ಸಂಸ್ಕೃತಿಯನ್ನು ಹೀಗಳೆದಿಲ್ಲ, ತಮಾಷೆಯಾಗಿ ಹೇಳಿದ್ದನ್ನು ಜನಾಂಗೀಯ ನಿಂದನೆ ಎಂದೆಲ್ಲ ಹೇಳುವುದು ಸರಿಯಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News