ಕೆಎಸ್ಸಾರ್ಟಿಸಿ ಘಟಕಗಳಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ: ರಾಮಲಿಂಗಾರೆಡ್ಡಿ
ಬೆಂಗಳೂರು, ಜೂ.5: ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಘಟಕಗಳಲ್ಲೂ ಮುಂಬರುವ ದಿನಗಳಲ್ಲಿ ಕಲುಷಿತ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ) ಸ್ಥಾಪಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ಜಯನಗರದ ಮಹಾನಗರ ಸಾರಿಗೆ ಸಂಸ್ಥೆಯ ಘಟಕ 4ರ ಆವರಣದಲ್ಲಿ ಏರ್ಪಡಿಸಿದ್ದ ವಿಸ್ವ ಪರಿಸರ ದಿನಾಚರಣೆ ಹಾಗೂ 89ನೆ ಬಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆ ಪ್ರತಿ ನಾಗರೀಕರ ಜವಾಬ್ದಾರಿ. ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ನಾಗರೀಕರು ಕೈಜೋಡಿಸಿದಾಗ ಮಾತ್ರ ಯಶಸ್ವಿ ಸಾಧ್ಯ ಎಂದ ಅವರು, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ಹಾಗೂ ಲಭ್ಯವಿರುವ ಸ್ಥಳದಲ್ಲೇ ಗಿಡಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಸಾರಿಗೆ ಸಂಸ್ಥೆ ಘಟಕಗಳಲ್ಲಿ ಕಲುಷಿತ ನೀರನ್ನು ಹೊರ ಬಿಡಲಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಕಲುಷಿತ ನೀರು ಶುದ್ಧೀಕರಣ ಘಟಕಗಳ ಅವಶ್ಯಕತೆ ಇದೆ. ನೀರನ್ನು ಶುದ್ಧೀಕರಿಸಿ ಹೊರ ಬಿಡುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದೆ. ಹೆಚ್ಚು ಹೆಚ್ಚು ನೀರು ಬಳಸುವ ಎಲ್ಲ ಸ್ಥಳಗಳಲ್ಲಿಯೂ ಸಂಬಂಧಪಟ್ಟವರು ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ ಅವರು, ಭೂಮಿ, ಪರಿಸರ ಕೇವಲ ಮನುಷ್ಯನಿಗೆ ಮಾತ್ರ ಸೇರಿದ್ದಲ್ಲ. ಭೂಮಿಯ ಮೇಲೆ ವಾಸಿಸುತ್ತಿರುವ 84 ಲಕ್ಷ ಜೀವಿಗಳಿಗೂ ಸೇರಿದ್ದು, ಅವುಗಳು ನಮ್ಮಿಂದಿಗೆ ಸಹ ಜೀವನ ನಡೆಸಲು ಬೇಕಾದ ಅನುಕೂಲತೆಗಳನ್ನು ಮಾಡಿಕೊಡುವುದು ಮನುಷ್ಯನ ಕರ್ತವ್ಯ. 2030ರ ವೇಳೆಗೆ ಈಗಿರುವ ಜನಸಂಖ್ಯೆ 2ರಷ್ಟಾಗಲಿದ್ದು, ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ಪರಿಸರ ಸಂರಕ್ಷಣೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಮುಂಬರುವ 3-4 ತಿಂಗಳೊಳಗೆ ನಗರದಲ್ಲಿ ಕಸ ವಿಂಗಡಣೆ ವ್ಯವಸ್ಥೆ ಅಭಿವೃದ್ಧಿಯಾಗಲಿದೆ. ಆ ಮೂಲಕ ಬೆಂಗಳೂರು ನಗರ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದ ಅವರು, ಹೆಚ್ಚು ಹೆಚ್ಚು ಹಣ್ಣು ಬಿಡುವ ಗಿಡಗಳನ್ನು ನೆಡಲು ಆದ್ಯತೆ ನೀಡಬೇಕೆಂದ ಅವರು, ಸಾರಿಗೆ ಸಂಸ್ಥೆಯ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಸದ್ಯದಲ್ಲೇ ಆದೇಶ ಜಾರಿ ಮಾಡಲಾಗುವುದು ಎಂದರು.ವೇದಿಕೆಯಲ್ಲಿ ಶಾಸಕ ಕೆ.ಗೋಪಾಲ್ ಪೂಜಾರಿ, ಕೆಎಸ್ಸಾರ್ಟಿಸಿ ಅಧ್ಯಕ್ಷ ಎಸ್.ಆರ್.ಉಮಾಶಂಕರ್, ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಎಸ್.ರೆಡ್ಡಿ, ಪತ್ರಕರ್ತ ಇಂದ್ರಜಿತ್ ಲಂಕೇಶ್, ಚಲನಚಿತ್ರ ನಟರಾದ ಸುಂದರ್ ರಾಜ್, ಮೇಘನಾ ರಾಜ್, ವನ್ಯಜೀವಿ ಸಂರಕ್ಷಕ ಕಿರಣ್‌ಕುಮಾರ್, ಸಾರಿಗೆ ಸಂಸ್ಥೆ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.