ಶಾಸಕ ಮುನಿರತ್ನ ವಿರುದ್ಧ ಸಿಎಂಗೆ ಪಾಲಿಕೆ ಮಹಿಳಾ ಸದಸ್ಯರ ದೂರು
ಬೆಂಗಳೂರು, ಜೂ. 5: ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ)ಯ ಬಿಜೆಪಿ ಮತ್ತು ಜೆಡಿಎಸ್ ಸದಸ್ಯೆಯರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ದೂರು ನೀಡಿದ್ದಾರೆ.
ಸೋಮವಾರ ವಿಧಾನಸೌಧಕ್ಕೆ ಆಗಮಿಸಿದ ರಾಜರಾಜೇಶ್ವರಿ ನಗರದ ಎಚ್‌ಎಂಟಿ ವಾರ್ಡ್‌ನ ಸದಸ್ಯೆ ಆಶಾ ಸುರೇಶ್, ಜೆ.ಪಿ.ಪಾರ್ಕ್ ವಾರ್ಡ್‌ನ ಸದಸ್ಯೆ ಮಮತಾ ವಾಸುದೇವ್ ಮತ್ತು ಲಗ್ಗೆರೆ ವಾರ್ಡ್‌ನ ಮಂಜುಳಾ ನಾರಾಯಣಸ್ವಾಮಿ, ಮುಖ್ಯಮಂತ್ರಿಗೆ ದೂರು ಸಲ್ಲಿಸಿದರು.
ಶಾಸಕ ಮುನಿರತ್ನ, ಪಾಲಿಕೆ ಮಹಿಳಾ ಸದಸ್ಯರ ವಿರುದ್ಧ ದೌರ್ಜನ್ಯವೆಸಗುತ್ತಿದ್ದು, ಅವರ ವರ್ತನೆಯನ್ನು ಪ್ರಶ್ನಿಸಿದರೆ ವಿನಾ ಕಾರಣ ನಮ್ಮ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುತ್ತಿದ್ದಾರೆ. ಅದನ್ನು ಪ್ರಶ್ನಿಸಿದರೆ ಅವರ ಬೆಂಬಲಿಗರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಶಾಸಕರು ಮತ್ತವರ ಬೆಂಬಲಿಗರ ದುಂಡಾವರ್ತನೆಯಿಂದ ನಾವು ವಾರ್ಡ್‌ಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ನಮ್ಮನ್ನು ಆಹ್ವಾನಿಸುವುದಿಲ್ಲ. ಆ ಮೂಲಕ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದು, ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಹೀಗಾಗಿ ಮುನಿರತ್ನರ ಧೋರಣೆಗೆ ಕಡಿವಾಣ ಹಾಕಿ ಮಹಿಳಾ ಸದಸ್ಯರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ಸಿನ ಆಶಾ ಸುರೇಶ್, ಬಿಜೆಪಿಯ ಮಮತಾ ವಾಸುದೇವ್ ಹಾಗೂ ಜೆಡಿಎಸ್‌ನ ಮಂಜುಳಾ ನಾರಾಯಣಸ್ವಾಮಿ, ಪಾಲಿಕೆ ಸಭೆಯಲ್ಲಿ ಮುನಿರತ್ನ ಧೋರಣೆ ವಿರೋಧಿಸಿ ಫೆನಾಯಿಲ್ ಸೇವಿಸಿ ಆತ್ಮಹತ್ಯೆಗೆ ವಿಫಲಯತ್ನ ನಡೆಸಿದ್ದರು. ಈ ವೇಳೆ ಮೇಯರ್ ಜಿ.ಪದ್ಮಾವತಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತತ್ವದಲ್ಲಿ ಶಾಸಕರೊಂದಿಗೆ ಸಂಧಾನ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದು ಎಂದು ಭರವಸೆ ನೀಡಿದ್ದರು.ಆದರೆ ಇದುವರೆಗೂ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿರುವ ಮಹಿಳಾ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಖುದ್ದು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.