ಮಹಿಳಾ ಶೌಚಾಲಯದ ಚಿತ್ರಿಕರಣ ಆರೋಪ:ಫುಡ್‌ಕೋರ್ಟ್ ಸಿಬ್ಬಂದಿ ಸೆರೆ
Update: 2017-06-05 22:25 IST
ಬೆಂಗಳೂರು, ಜೂ.5: ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರಿಕರಿಸಿಕೊಳ್ಳುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಮೂಲದ ಪರಮೇಶ್ವರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.ನಗರದಲ್ಲಿರುವ ಪ್ರತಿಷ್ಠಿತ ಸಾಫ್ಟ್‌ವೇರ್ ಸಂಸ್ಥೆಯ ಫುಡ್‌ಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರಮೇಶ್ವರ್, ಸಂಸ್ಥೆಯಲ್ಲಿದ್ದ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಮಹಿಳೆಯರ ಚಲನಾ ವಲನಗಳನ್ನು ಚಿತ್ರಿಸುತ್ತಿದ್ದ ಎನ್ನಲಾಗಿದೆ.
ಜೂ.3ರಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಶೌಚಾಲಯಕ್ಕೆ ತೆರಳಿದಾಗ ಮೊಬೈಲ್ ಫೋನ್ ಇರುವುದು ಗಮನಕ್ಕೆ ಬಂದಿದೆ. ಮಹಿಳೆ ಕೂಡಲೇ ಸಂಸ್ಥೆಯ ಮುಖ್ಯಸ್ಥರಿಗೆ ಈ ವಿಚಾರ ತಿಳಿಸಿದ್ದಾರೆ. ಸಂಸ್ಥೆಯ ಮುಖ್ಯಸ್ಥರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಆರೋಪಿ ಪರಮೇಶ್ವರ್‌ನನ್ನು ಬಂಧಿಸಿ, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದಾರೆ.