ಗೋ ಹತ್ಯೆ ನಿಷೇಧದ ಕ್ರಮ ರಾಜ್ಯ ಸರಕಾರಗಳ ಮೇಲಿನ ಆಕ್ರಮಣ: ಸಿಎಂ ಸಿದ್ದರಾಮಯ್ಯ ಆಕ್ರೋಶ

Update: 2017-06-07 15:14 GMT

ಬೆಂಗಳೂರು, ಜೂ.7: ‘ಗೋ ಹತ್ಯೆ ನಿಷೇಧ ರಾಜ್ಯಗಳಿಗೆ ಬಿಟ್ಟ ವಿಷಯ. ಈ ಸಂಬಂಧ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆ ರಾಜ್ಯ ಸರಕಾರಗಳ ಮೇಲಿನ ಆಕ್ರಮಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋಹತ್ಯೆ ನಿಷೇಧದ ಕ್ರಮ ಸಂವಿಧಾನಬಾಹಿರ. ಮೂಲಭೂತ ಹಕ್ಕುಗಳನ್ನು ಧಮನ ಮಾಡಲು ಹುನ್ನಾರ ನಡೆಸಿದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದುತ್ವ, ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, 370ನೇ ವಿಧಿ ಮುಂತಾದ ಭಾವನಾತ್ಮಕ ವಿಷಯಗಳನ್ನು ಕೆದಕಿ ರಾಜಕಾರಣ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿಯವರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ನಮಗೂ ಗೋವು ಮೇಲೆ ಗೌರವವಿದೆ. ನಾವೂ ದೀಪಾವಳಿ, ಸಂಕ್ರಾಂತಿ ಹಬ್ಬದಲ್ಲಿ ಗೋ ಪೂಜೆ ಮಾಡುತ್ತೇವೆ ಎಂದು ಹೇಳಿದರು.

ಆದರೆ ಬಿಜೆಪಿಯ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸಲು ಗೋ ಹತ್ಯೆ ನಿಷೇಧ ಕಾಯಿದೆಯನ್ನು ಜಾರಿಗಳಿಸಲು ಸಿದ್ಧತೆ ನಡೆಸಿದೆ. ಈ ಕ್ರಮದಿಂದಾಗುವ ದುಷ್ಪರಿಣಾಮಗಳನ್ನು ಕೇಂದ್ರ ಸರಕಾರ ಪರಿಗಣನೆಗೆ ತೆಗೆದುಕೊಳ್ಳದೆ ಜನರನ್ನು ದಿಕ್ಕು ತಪ್ಪಿಸುತ್ತಿದೆ. ವಯಸ್ಸಾದ, ಅಪ್ರಯೋಜಕ ಜಾನುವಾರುಗಳನ್ನು ಸಾಕುವುದು ರೈತರಿಗೆ ಹೊರೆಯಾಗಲಿದೆ. ಇದರಿಂದ ರೈತರ ಆದಾಯಕ್ಕೆ ಹೊಡೆತ ಬೀಳಲಿದೆ ಎಂದರು.

ಯುಪಿಎ ಸರಕಾರ ರೂಪಿಸಿದ್ದ ಜಿಎಸ್‌ಟಿ, ಎಂನರೇಗಾ, ನಿರ್ಮಲ್ ಭಾರತ(ಸ್ವಚ್ಛ ಭಾರತ್) ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಾವೇ ಮಾಡಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಎದೆ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಗಳು ಜಾರಿಗೆ ಬಂದಿರುವುದಕ್ಕೆ ಕಾಂಗ್ರೆಸ್ಸಿಗೆ ಖುಷಿ ತಂದಿದೆ ಎಂದು ತಿಳಿಸಿದರು.

ಗರಿಷ್ಠ ನೋಟುಗಳ ಅಮಾನೀಕರಣದ ಬಳಿಕ ಭ್ರಷ್ಟಾಚಾರ, ನಕಲಿ ನೋಟುಗಳು, ಭಯೋತ್ಪಾದನೆ ನಿಯಂತ್ರಿಸಲಾಗಿದೆ ಎಂದು ವೀರಾವೇಶದಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ನೋಟು ಅಮಾನೀಕರಣಗೊಂಡು ಆರು ತಿಂಗಳಾದರು ಎಷ್ಟು ಕಪ್ಪು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಇದುವರೆಗೂ ರಿಸರ್ವ್ ಬ್ಯಾಂಕ್ ಆಗಲಿ, ಕೇಂದ್ರ ಸರಕಾರವಾಗಲಿ ಬಹಿರಂಗಪಡಿಸಿಲ್ಲ. ಮುಂದೇನೂ ಬಹಿರಂಗ ಪಡಿಸುವುದಿಲ್ಲ. ಯಾಕೆಂದರೆ ಅವರಿಗೆ ಇದುವರಿಗೂ ಕಪ್ಪುಹಣ ಸಿಕ್ಕೇ ಇಲ್ಲ ಎಂದು ಲೇವಡಿ ಮಾಡಿದರು.

ಸಮಾಜವನ್ನು ವಿಭಾಗಿಸುವುದೇ ಬಿಜೆಪಿ ಪಕ್ಷದ ಅಂತರಾಳ. ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ದಲಿತರನ್ನು ಹೊರಗಿಟ್ಟು ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಇದು ಕೇವಲ ಪಕ್ಷವಲ್ಲ ಅದೊಂದು ಚಳವಳಿ. ಯುವ ಕಾಂಗ್ರೆಸ್ಸಿಗರು ಗಾಂಧಿ, ಅಂಬೇಡ್ಕರ್, ನೆಹರು, ರಾಮಮನೋಹರ್ ಲೋಹಿಯಾ ಅವರ ಸಿದ್ಧಾಂತಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

 ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ರಾಜಾ ಅಮ್ರೀಂದರ್ ಸಿಂಗ್ ಬ್ರಾರ್‌ಮಾತನಾಡಿ, ಖಾಸಗಿ ವಾಹಿನಿ ಎನ್‌ಡಿಟಿವಿ ಕಚೇರಿ ಮೇಲಿನ ಐಟಿ ದಾಳಿಯಲ್ಲಿ ಪ್ರಧಾನಿ ಮೋದಿ ಅವರ ಹುನ್ನಾರವಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಹೊರಗೆ ಸಂವಿಧಾನಶಿಲ್ಪಿ ಡಾ.ಬಿ.ಆರ್‌ಅಂಬೇಡ್ಕರ್‌ಅವರನ್ನು ಆರಾಧಿಸುವ ಬಿಜೆಪಿಯವರು ಒಳಗೊಳಗೆ ಸಂವಿಧಾನವನ್ನು ತಿರುಚುತ್ತಿದ್ದಾರೆ. ದೇಶಕ್ಕೆ ಬ್ರಿಟಿಷರಿಗಿಂತ ಬಿಜೆಪಿ ಪಕ್ಷ ಮಾರಕ. ಈ ಪಕ್ಷವನ್ನು ತೊಲಗಿಸಲು ಯುವಕರು ಒಂದಾಗಬೇಕು. ಇದಕ್ಕೆ ಯುವ ಕಾಂಗ್ರೆಸ್ ವೇದಿಕೆಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್,ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್, ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಬಸವನಗೌಡ ಬಾದರ್ಲಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News