×
Ad

ರಾಜಕೀಯ ದುರುದ್ದೇಶದಿಂದ ಆರೋಪ: ಎಂ.ಬಿ.ಪಾಟೀಲ್

Update: 2017-06-07 22:28 IST



ಬೆಂಗಳೂರು, ಜೂ.7: ರಾಜ್ಯದ ಜೀವನದಿಗಳಾದ ಕೃಷ್ಣಾ ಮತ್ತು ಕಾವೇರಿ ನದಿಗಳ ಉಗಮ ಸ್ಥಳಗಳಾದ ಮಹಾಬಲೇಶ್ವರ ಮತ್ತು ಭಾಗಮಂಡಲದಲ್ಲಿ ನೆರವೇರಿಸಿದ ಪರ್ಜನ್ಯ ಪೂಜಾಕಾರ್ಯಕ್ಕೆ ಅಪಾರ್ಥ ಕಲ್ಪಿಸಿ, ರಾಜಕೀಯ ದುರುದ್ದೇಶದಿಂದ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಅವರು, ಈ ಎರಡೂ ನದಿಗಳಿಂದ ರಾಜ್ಯದ ಜನತೆ ಅಪಾರವಾಗಿ ಉಪಕೃತವಾಗಿದ್ದು, ಭವಿಷ್ಯದ ದಿನಗಳಲ್ಲಿಯೂ ತಾಯಿಯ ಕರುಣೆಯನ್ನು ಬಯಸಿ ಕೃತಜ್ಞತಾ ಪೂರ್ವಕವಾಗಿ ನಮನ ಸಲ್ಲಿಸುವ ಉದ್ದೇಶದಿಂದ ಈ ಪೂಜಾ ಕಾರ್ಯ ಕೈಗೊಳ್ಳಲಾಗಿತ್ತು ಎಂದರು.
ಆದರೆ, ಇದಕ್ಕೆ ಮೂಢನಂಬಿಕೆಯ ಅಪಾರ್ಥ ಕಲ್ಪಿಸಿ ಸರಕಾರದ ಹಣವನ್ನು ಅನಗತ್ಯವಾಗಿ ಖರ್ಚು ಮಾಡಲಾಗುತ್ತಿದೆ ಎಂದು ಬಿಂಬಿಸಿ, ವಿನಾಕಾರಣ ವಿವಾದ ಸೃಷ್ಟಿಸಿರುವುದು ವಿಷಾದನೀಯ. ರಾಜ್ಯದ ಜನತೆಯ ಒಳಿತಿಗಾಗಿ ಜನಪ್ರತಿನಿಧಿಯಾಗಿ ಈ ಪೂಜಾ ಕಾರ್ಯಗಳನ್ನು ನನ್ನ ಹಾಗು ನನ್ನ ಸ್ನೇಹಿತರ ಸ್ವಂತ ಖರ್ಚಿನಿಂದ ನೆರವೇರಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ರಾಜ್ಯದ ಜಲಾಶಯಗಳು ಭರ್ತಿಯಾದಾಗ ಬಾಗಿನ ಅರ್ಪಿಸುವುದು ಹಾಗೂ ಕಾವೇರಿ ತೀರ್ಥೊದ್ಭವವಾದಾಗ ಪೂಜೆ ಸಲ್ಲಿಸುವುದು ರಾಜ್ಯದಲ್ಲಿ ನಡೆದು ಬಂದ ಸಂಪ್ರದಾಯ. ಸತತ ಬರದಿಂದ ಕಂಗೆಟ್ಟಿರುವ ರಾಜ್ಯದ ರೈತಾಪಿ ಜನರ ಒಳಿತನ್ನು ಬಯಸಿ ಮತ್ತು ರಾಜ್ಯದ ಸಮೃದ್ಧಿಗಾಗಿ ದೇವಸ್ಥಾನಗಳಲ್ಲಿ ಪೂಜೆಗಳನ್ನು ನೆರವೇರಿಸುವುದು ಹೊಸ ಸಂಪ್ರದಾಯವೇನಲ್ಲ ಎಂದು ಅವರು ತಿಳಿಸಿದರು.
ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸದನದಲ್ಲಿ ಮಹಾಬಲೇಶ್ವರ ಮತ್ತು ಭಾಗಮಂಡಲದಲ್ಲಿ ಕೃಷ್ಣಾ ಮತ್ತು ಕಾವೇರಿ ನದಿಗಳಿಗೆ ಸಲ್ಲಿಸಿದ ಪೂಜೆಯನ್ನು ಮೂಢನಂಬಿಕೆಯೆಂದು ಬಿಂಬಿಸಿ ಮಾತನಾಡಿರುವುದು ವಿಪರ್ಯಾಸದ ಸಂಗತಿ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಜಗದೀಶ್‌ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಂದಾಯ ಇಲಾಖೆ (ಮುಜುರಾಯಿ)ಯಿಂದ 2012ರ ಜು.19ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ರಾಜ್ಯದಲ್ಲಿ ಬರಗಾಲದ ಪ್ರಯುಕ್ತ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ವರುಣ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಪರ್ಜನ್ಯ ಜಪ, ಹೋಮ, ಜಲಾಭಿಷೇಕ ಪೂಜೆ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲು ಎಲ್ಲ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶಿಸಲಾಗಿತ್ತು ಎಂದು ಅವರು ಹೇಳಿದರು.
ರಾಜ್ಯದ ಧಾರ್ಮಿಕ ಮತ್ತು ದತ್ತಿ ಇಲಾಖೆಯಡಿ ಸುಮಾರು 34 ಸಾವಿರ ದೇವಾಲಯಗಳಿದ್ದು, ಇಲ್ಲಿ ಸಲ್ಲಿಸುವ ಪೂಜೆಗೆ ಅಂದಾಜು 17 ಕೋಟಿ ರೂ.ಗಳನ್ನು ಸರಕಾರದಿಂದ ವೆಚ್ಚವಾಗಿರಬಹುದು. ಈ ಕುರಿತು ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾಗಿದ್ದರೂ ಅದನ್ನು ಗಮನಿಸದೇ, ಸರಕಾರಿ ವೆಚ್ಚದಿಂದಲೇ ಹೋಮ, ಹವನ ಪೂಜಾದಿಗಳನ್ನು ಕೈಗೊಳ್ಳಲಾಗಿತ್ತು ಎಂದು ಎಂ.ಬಿ.ಪಾಟೀಲ್ ಆರೋಪಿಸಿದರು.
ಇಸ್ರೋ ವಿಜ್ಞಾನಿಗಳು ಜೂ.5ರಂದು ಜಿಎಸ್‌ಎಲ್‌ವಿ ಉಪಗ್ರಹವನ್ನು ಕ್ಷಕೆಗೆ ಉಡಾವಣೆ ಮಾಡುವ ಮೊದಲು ತಿರುಪತಿಯಲ್ಲಿ ಉಪಗ್ರಹದ ಪ್ರತಿಕೃತಿಯನ್ನು ಇಟ್ಟು ವಿಶೇಷ ಪೂಜೆ ಮತ್ತು ಪ್ರಾರ್ಥನೆಯನ್ನು ನೆರವೇರಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ನದಿ ಪೂಜೆ ಮಾಡಿರುವ ನನ್ನ ರಾಜೀನಾಮೆಯನ್ನು ಕೇಳುವ ಪ್ರತಿಪಕ್ಷದ ನಾಯಕರು, ಕೇಂದ್ರ ಸರಕಾರದ ಅಧೀನದಲ್ಲಿರುವ ಇಸ್ರೋ ಮಾಡಿರುವ ಪೂಜೆಯನ್ನು ವೌಢ್ಯ, ಮೂಢನಂಬಿಕೆ ಎಂದು ಜರಿದು ಕೇಂದ್ರ ಸರಕಾರದ ರಾಜೀನಾಮೆಯನ್ನು ಕೇಳುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.
ನಮ್ಮ ನಂಬಿಕೆಯ ಆಚರಣೆಗಳಿಂದ ಸಮಾಜದ ಹಾಗೂ ಜನತೆಯ ಶೋಷಣೆ ಆದರೆ, ಅದು ಮೂಢ ನಂಬಿಕೆಯಾಗಬಹುದೇ ವಿನಃ ಜನತೆಯ ಒಳಿತನ್ನು ಬಯಸಿ ನದಿಗಳಿಗೆ ಸಲ್ಲಿಸುವ ಪೂಜೆಯನ್ನು ನಂಬಿಕೆಯ ಆಧಾರದ ಮೇಲೆ ವಿಶ್ಲೇಷಿಸಿ, ಅದಕ್ಕೆ ಅಂಧ ಶ್ರದ್ಧೆಯ ರೂಪ ಕೊಡುವುದು ಅನಪೇಕ್ಷಣೀಯ ಎಂದು ಎಂ.ಬಿ.ಪಾಟೀಲ್ ಹೇಳಿದರು.
ರಾಜ್ಯದ ಜನತೆಯ ಹಿತ ಮತ್ತು ಸಮೃದ್ಧಿ ಬಯಸಿ ನಾಡಿನ ಜೀವನದಿಗಳಿಗೆ ಗೌರವಾರ್ಪಣೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ಭಾವಿಸಿದ್ದು, ಇದು ನನ್ನ ಸಾಂಸ್ಕೃತಿಕ ಹಿನ್ನೆಲೆಯ ಆರೋಗ್ಯಕರ ಅಚಲ ನಿಲುವಾಗಿದೆ. ಮಾತೃ ಸ್ವರೂಪಿ ನದಿಗಳಾದ ಕೃಷ್ಣಾ ಮತ್ತು ಕಾವೇರಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ. ತಾಯಿಯ ಪೂಜೆಯನ್ನು ಮಾಡುವುದು ವೌಢ್ಯ, ತಪ್ಪು ಎನ್ನುವುದಾದರೆ, ಇಂತಹ ಪೂಜೆಯನ್ನು ಲಕ್ಷ ಬಾರಿ ಬೇಕಾದರೂ ಮಾಡುತ್ತೇನೆ ಎಂದು ಅವರು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News