ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ರಾಜೀನಾಮೆ ಪ್ರಹಸನ

Update: 2017-06-07 17:02 GMT

ಬೆಂಗಳೂರು, ಜೂ.7: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಬಾಕಿ ಪಾವತಿ ಹಾಗೂ ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ಸರಕಾರದ ಮೇಲೆ ಒತ್ತಡ ಹೇರಲು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಸದನದಲ್ಲಿ ರಾಜೀನಾಮೆ ನೀಡಿ, ಧರಣಿ ನಡೆಸಿದ ಪ್ರಹಸನ ನಡೆಯಿತು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಚರ್ಚೆ ಆರಂಭಿಸಿದ ಸಾ.ರಾ.ಮಹೇಶ್, ಕಳೆದ ಮೂರು ವರ್ಷಗಳಿಂದ ಶ್ರೀರಾಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಬಾಕಿ ಪಾವತಿ ಹಾಗೂ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವಂತೆ ಧ್ವನಿ ಎತ್ತುತ್ತಿದ್ದೇನೆ, ಆದರೆ, ಯಾವುದೆ ಪ್ರಯೋಜನವಾಗುತ್ತಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆಯೆ ಪರಿಹಾರ ನೀಡುವ ಭರವಸೆ ನೀಡಿದ್ದಾದರೂ ಈವರೆಗೆ ಕಬ್ಬು ಬೆಳೆಗಾರರಿಗೆ ಪರಿಹಾರ ವಿತರಣೆಯಾಗಿಲ್ಲ. ಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿ ನೀಡಿದ್ದ ಉತ್ತರವನ್ನೆ ಇವತ್ತು ಲಿಖಿತ ರೂಪದಲ್ಲಿ ನೀಡಿದ್ದಾರೆ ಎಂದು ಆರೋಪಿಸಿ ಸಾ.ರಾ.ಮಹೇಶ್, ಸಭಾಧ್ಯಕ್ಷರ ಪೀಠದ ಎದುರಿನ ಬಾವಿಗಿಳಿದು ಧರಣಿ ನಡೆಸಿದರು.

ಅಲ್ಲದೆ, ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಶಿವಶಂಕರೆಡ್ಡಿಗೆ ಸಾ.ರಾ. ಮಹೇಶ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಮುಖ್ಯಮಂತ್ರಿಯಿಂದ ನಾಳೆ ಸಮರ್ಪಕ ಉತ್ತರ ಕೊಡಿಸುವುದಾಗಿ ಉಪಸಭಾಧ್ಯಕ್ಷರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಹೇಶ್ ತಮ್ಮ ಧರಣಿಯನ್ನು ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News