ಕೃಷಿ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲು ಆಗ್ರಹ
ಬೆಂಗಳೂರು, ಜೂ.8: ಕೃಷಿ ಉತ್ಪನ್ನಗಳನ್ನು ಸರಕು ಸೇವಾ ತೆರಿಗೆ(ಜಿಎಸ್‌ಟಿ)ಯಿಂದ ಹೊರಗಿಡಬೇಕು. ಈ ಕುರಿತು ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜಿಎಸ್‌ಟಿ ಸಾಧಕ ಬಾಧಕ ಕುರಿತು ಆಯೋಜಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಸಭೆಯಲ್ಲಿ ಆಗ್ರಹಿಸಿದರು.
ಸಭೆಯ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜು.1 ರಿಂದ ದೇಶಾದ್ಯಂತ ಜಾರಿಗೆ ಬರಲಿರುವ ಸರಕು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಕೃಷಿ ಉತ್ಪನ್ನಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕೈಬಿಡಲು ರಾಜ್ಯಸರಕಾರ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಬಂಡವಾಳ ಹೂಡುವ ವಿದೇಶಿ ಕಂಪನಿಗಳಿಗೆ ಕೇಂದ್ರ ಸರಕಾರ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಅಲ್ಲದೆ, ಬ್ಯಾಂಕುಗಳಲ್ಲಿ ಸಾವಿರಾರು ಕೋ. ರೂ. ಸಾಲ ನೀಡುತ್ತಿದೆ. ಇತ್ತ ದೇಶದ ಬೆನ್ನೆಲುಬು ಆಗಿರುವ ರೈತರು ಸಂಕಷ್ಟಗಳಲ್ಲಿ ಸಿಲುಕಿದರು ನೆರವಿಗೆ ಧಾವಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಎಸ್‌ಟಿ ಜಾರಿಯಾದರೆ ಮೂಲ ವಸ್ತುಗಳಿಂದ ತಯಾರಾದ ಉಪವಸ್ತುಗಳಿಗೂ ತೆರಿಗೆ ಪಾವತಿಸಬೇಕು. ಕಬ್ಬಿನಿಂದ ಸಕ್ಕರೆ, ಸಕ್ಕರೆಯಿಂದ ತಯಾರಿಸಿದ ಪ್ರತಿಯೊಂದು ಪದಾರ್ಥಗಳು, ಹಣ್ಣು, ಹಾಲು, ಆಲೂಗಡ್ಡೆ, ಹತ್ತಿ, ಹಾಗೆಯೇ ರೇಷ್ಮೆಯಿಂದ ತಯಾರಾದ ಉತ್ಪನ್ನಗಳ ಮೇಲೆ ಶೇ.18 ರಷ್ಟು ತೆರಿಗೆಯನ್ನು ಕಟ್ಟಬೇಕಾಗುತ್ತದೆ ಎಂದು ವಿವರಿಸಿದರು.
ಜಿಎಸ್‌ಟಿ ಜಾರಿಗೆ ಬಂದರೆ ರೈತರು ಅನಗತ್ಯ ತೆರಿಗೆಯನ್ನು ಭರಿಸಬೇಕಾಗುತ್ತದೆ. ಅನಗತ್ಯ ತೆರಿಗೆಗಳ ಹೊರೆಯನ್ನು ಸರಕಾರ ರೈತರ ತಲೆಗೆ ಕಟ್ಟುತ್ತಿದೆ. ಈ ಕಾಯಿದೆಯನ್ನು ಕೂಡಲೆ ತಿದ್ದುಪಡಿ ತಂದು ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.