ದ.ಕ. ಜಿಲ್ಲೆಯಲ್ಲಿ 47 ಕ್ರಷರ್ ಕಾರ್ಯಾಚರಣೆ; ವಿನಯ ಕುಲಕರ್ಣಿ

Update: 2017-06-08 16:14 GMT

 ಮಂಗಳೂರು, ಜೂ.8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 47 ಕ್ರಷರ್ ಘಟಕಗಳು ಕಾರ್ಯನಿರ್ವಸುತ್ತಿವೆ ಎಂದು ಗಣಿ ಹಾಗೂ ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.
 
 ವಿಧಾನಸಭೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ.ಎ. ಮೊಯ್ದಿನ್ ಬಾವಾ ಅವರ ಪ್ರಶ್ನೆಗೆ ಉತ್ತರ ನೀಡಿರುವ ಗಣಿ ಸಚಿವರು, 2017-18ನೆ ಸಾಲಿನಲ್ಲಿ ಸರಕಾರಿ ಭೂಮಿಯಲ್ಲಿ ಕಲ್ಲುಗಣಿ ಗುತ್ತಿಗೆ ಮಂಜೂರಾತಿ ಕೋರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅರ್ಜಿಗಳು ಸ್ವೀಕೃತವಾಗಿಲ್ಲ. ಪಟ್ಟಾ ಜಮೀನಿನಲ್ಲಿ ಕಲ್ಲುಗಣಿ ಗುತ್ತಿಗೆ ಕೋರಿ 1 ಅರ್ಜಿ ಸ್ವೀಕೃತವಾಗಿದೆ. 2017-18ನೆ ಸಾಲಿನಲ್ಲಿ ಜಿಲ್ಲಾ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಸಾಮಾನ್ಯ ಮರಳು ಗಣಿಗಾರಿಕೆಗೆ ತಾತ್ಕಾಲಿಕ ಪರವಾನಿಗೆ ಕೋರಿ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಗಣಿ ಗುತ್ತಿಗೆಗೆ ಸಂಬಂಧಿಸಿದ ಕೆ.ಎಂ.ಎಂ.ಸಿ.ಆರ್.- 1994 ನಿಯಮಾವಳಿಗಳಿಗೆ ತಿದ್ದುಪಡಿಯನ್ನು ಜಾರಿ ಮಾಡಲಾಗಿದೆ. ಉಪ ಖನಿಜ ಗಣಿ ಗುತ್ತಿಗೆಗಳನ್ನು ಪಾರದರ್ಶಕವಾಗಿ ಟೆಂಡರ್-ಕಂ-ಹರಾಜು ಮೂಲಕ ಮಂಜೂರು ಮಾಡಬೇಕಾಗಿರುತ್ತದೆ. ತಿದ್ದುಪಡಿ ನಿಯಮಗಳು-2016ನೆ ನಿಯಮ8ಬಿ(1)ರಂತೆ ಕಲ್ಲುಗಣಿ ಗುತ್ತಿಗೆ ಕೋರಿ ದಿನಾಂಕ 12.08.2016ಕ್ಕೆ ಮೊದಲು ಸ್ವೀಕೃತವಾದ ಎಲ್ಲಾ ಅರ್ಜಿಗಳು ಕಲ್ಲುಗಣಿ ಗುತಿತಿಗೆ ಮಂಜೂರಾತಿಗೆ ಅನರ್ಹಗೊಂಡಿರುತ್ತದೆ.

ಆದರೆ 16.06.2015ರ ಪೂರ್ವದಲ್ಲಿ ಸ್ವೀಕೃತಗೊಂಡಿರುವ ಹಾಗೂ 12.08.2016ಕ್ಕೆ ಮೊದಲು ಕಂದಾಯ ಹಾಗೂ ಅರಣ್ಯ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರಗಳು ಹಾಗೂ ತಾಂತ್ರಿಕ ವರದಿಗಳು ಸ್ವೀಕೃತಗೊಂಡಿದ್ದಲ್ಲಿ ಅಂಥ ಅರ್ಜಿಗಳು ಊರ್ಜಿತಗೊಳ್ಳುತ್ತವೆ ಎಂದು ಸಚಿವರು ತಿಳಿಸಿದ್ದಾರೆ.

    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News