ಸಂಕಷ್ಟಕ್ಕೆ ಸಿಲುಕುವವರ ರಕ್ಷಣೆಗೆ ಸೂಕ್ತ ಕ್ರಮ: ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು, ಜೂ. 9: ಕರಾವಳಿ ಪ್ರದೇಶದ ಸಮುದ್ರದಲ್ಲಿ ತುರ್ತು ಸನ್ನಿವೇಶಗಳಲ್ಲಿ ಅಪಾಯದಲ್ಲಿ ಸಿಲುಕಿರುವ ಜನರ ಜೀವ ರಕ್ಷಣೆಗೆ ಅಗತ್ಯವಾಗಿ ಬೇಕಿರುವ ವ್ಯವಸ್ಥೆ ಕಲ್ಪಿಸಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಜೆ.ಆರ್.ಲೋಬೋ ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮೋಗವೀರಪಟ್ಣ ಸಮೀಪ ಕಡಲ್ಕೊರೆತ ತಡೆ ಕಾಮಗಾರಿಗೆ ತೆರಳಿದ್ದ ‘ಬಾರ್ಜ್’ ಜೂ.3ರಂದು ಸಮುದ್ರದಲ್ಲಿದ್ದ ಬಂಡೆಗಲ್ಲಿಗೆ ತಗುಲಿ ಅದರಲ್ಲಿದ್ದ 27 ಮಂದಿ ಅಪಾಯಕ್ಕೆ ಸಿಲುಕಿದ್ದರು.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಮತ್ತು ಜೀವ ರಕ್ಷಕ ತಂಡ ಅದೇ ದಿನ ಸಂಜೆವರೆಗೂ ಕಾರ್ಯಾಚರಣೆ ನಡೆಸಿ ಮೂರು ಮಂದಿಯನ್ನು ರಕ್ಷಣೆ ಮಾಡಿದ್ದರು. ಮರುದಿನ ಹೆಲಿಕ್ಯಾಪ್ಟರ್ ಬಳಕೆ ಮಾಡಿ ಉಳಿದ 24 ಮಂದಿ ಸೇರಿದಂತೆ 27ಮಂದಿಯನ್ನು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ ಎಂದು ಮಹದೇವಪ್ಪ ವಿವರ ನೀಡಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ಸದಸ್ಯ ಜೆ.ಆರ್.ಲೋಬೋ, ಜೂ.3ರ ಮಧ್ಯಾಹ್ನ 1:30ರ ಸುಮಾರಿಗೆ ಸಮುದ್ರದಲ್ಲಿದ್ದ ‘ಬಾರ್ಜ್’ ಅಪಾಯದಲ್ಲಿ ಸಿಲುಕಿದೆ. ಆದರೆ, ಸಂಜೆ 6ಗಂಟೆಯ ಸುಮಾರಿಗೆ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ 3ಮಂದಿಯನ್ನಷ್ಟೇ ರಕ್ಷಿಸಿದೆ. ಮರುದಿನ ಬೆಳಗ್ಗೆ ಹೆಲಿಕ್ಯಾಪ್ಟರ್ ಮೂಲಕ ಉಳಿದ 24 ಮಂದಿಯನ್ನು ರಕ್ಷಿಸಿದ್ದಾರೆ. ಹೀಗೆ ವಿಳಂಬ ಮಾಡಿದರೆ ಸಂಕಷ್ಟದಲ್ಲಿ ಸಿಲುಕಿದ ಜನರ ಸ್ಥಿತಿ, ಮತ್ತವರ ಕುಟುಂಬ ಸದಸ್ಯರ ಆತಂಕಕ್ಕೆ ಉತ್ತರ ಹೇಳುವವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.
ಅನಂತರ ಪ್ರತಿಕ್ರಿಯಿಸಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಂಬರುವ ದಿನಗಳಲ್ಲಿ ಕರಾವಳಿ ಪ್ರದೇಶದಲ್ಲಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಿ ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಬೇಕಾಗುವ ವ್ಯವಸ್ಥೆ ಕಲ್ಪಿಸಲು ಸೂಕ್ತ ನಿಗಾವಹಿಸಲಾಗುವುದು ಎಂದು ಭರವಸೆ ನೀಡಿದರು.