×
Ad

​ಕೇಂದ್ರದ ನಿಯಮ ಮರುಪರಿಶೀಲನೆಗೆ ಸಿಎಂ ಆಗ್ರಹ

Update: 2017-06-09 21:18 IST

ಬೆಂಗಳೂರು, ಜೂ.9: ಕೇಂದ್ರ ಸರಕಾರದ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ನಿಯಮಗಳನ್ನು ಮರುಪರಿಶೀಲನೆಗೊಳಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಆರ್ಥಿಕತೆ ಹಾಗೂ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರೈತರು ಹಾಗೂ ಸಮಾಜದ ಹಿತದೃಷ್ಟಿಯಿಂದ ಈ ನಿಯಮಗಳನ್ನು ಮರುಪರಿಶೀಲಿಸಿ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.
ರಾಜ್ಯದ ಹೊರಗಡೆ ಜಾನುವಾರಗಳನ್ನು ಮಾರಾಟ ಮಾಡುವುದನ್ನು ನಿಯಮಗಳಲ್ಲಿ ನಿಷೇಧಿಸಿರುವುದು, ಸಂವಿಧಾನದ ಕಲಂ 301 ಹಾಗೂ 302ಕ್ಕೆ ವಿರುದ್ಧವಾಗಿದೆ. ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೆ ಪೌಷ್ಟಿಕಾಂಶವನ್ನು ಪೂರೈಸುವ ಆಹಾರ ಮಾಂಸವಾಗಿದೆ. ಮಾಂಸಾಹಾರವನ್ನು ಕೇವಲ ಅಲ್ಪಸಂಖ್ಯಾತರು, ದಲಿತರಷ್ಟೇ ಸೇವಿಸುವುದಿಲ್ಲ. ಬಹುತೇಕ ಎಲ್ಲ ಧರ್ಮೀಯರು ಅದನ್ನು ಬಳಸುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಚರ್ಮೋದ್ಯಮದಲ್ಲಿ ಬೃಹತ್ ಪ್ರಮಾಣದಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಷ್ಟು ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಭಾರತವು ಮಾಂಸರಫ್ತು ಮಾಡುವ ವಿಶ್ವದ ರಾಷ್ಟ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕೇಂದ್ರ ಸರಕಾರದ ಈ ನಿಯಮಗಳಿಂದಾಗಿ ಮಾಂಸ ಹಾಗೂ ಚರ್ಮೋದ್ಯಮವನ್ನು ನಂಬಿಕೊಂಡಿರುವ ಲಕ್ಷಾಂತರ ಜನರ ಆರ್ಥಿಕ ಭದ್ರತೆಯ ಮೇಳೆ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವಾಗ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವುಗಳ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮುಂದುವರೆಯುವುದು ಉತ್ತಮ. ರೈತರು ಹಾಗೂ ಸಮಾಜದ ಹಿತದೃಷ್ಟಿಯಿಂದ ಮತ್ತೊಮ್ಮೆ ಈ ನಿಯಮಗಳನ್ನು ಮರುಪರಿಶೀಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News