ಸಹಾಯಕ್ಕೆ ಮಾನವೀಯತೆಯ ಮನಸ್ಸು ಮುಖ್ಯ: ಯು.ಟಿ.ಖಾದರ್
ಬೆಂಗಳೂರು, ಜೂ.9: ಯಾರಿಗಾದರೂ ಸಹಾಯ ಮಾಡಲು ನಮಗೆ ಹಣಕ್ಕಿಂತ ಮಾನವೀಯತೆಯ ಮನಸ್ಸು ಮುಖ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಇಂದಿಲ್ಲಿ ಹೇಳಿದರು.
ಶುಕ್ರವಾರ ನಗರದ ಕಬ್ಬನ್‌ಪೇಟೆಯ ಹಮೀದ್ ಶಾ ಆವರಣದಲ್ಲಿ ಮಂಗಳೂರು ಮುಸ್ಲಿಮ್ ಯೂತ್ ಕೌನ್ಸಿಲ್(ಬೆಂ) ವತಿಯಿಂದ ಪವಿತ್ರ ರಮಝಾನ್ ಮಾಸದ ಅಂಗವಾಗಿ ಏರ್ಪಡಿಸಿದ್ದ ಇಫ್ತಾರ್ ಔತಣ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೀಗ ನಾವು ಮೊಬೈಲ್‌ನ ಸೆಲ್ಫಿ ಕಾಲದಲ್ಲಿದ್ದು, ನಮ್ಮ ಚಿತ್ರಗಳನ್ನು ಮಾತ್ರ ತೆಗೆದುಕೊಳ್ಳುತ್ತೇವೆ ವಿನಃ ಮುಂದೆ ಯಾರು ಇದ್ದರೂ ಗಮನ ನೀಡುವುದಿಲ್ಲ. ಅದೇ ರೀತಿ, ಸಹಾಯಕ್ಕೂ ಯಾರು ಮುಂದಾಗುತ್ತಿಲ್ಲ ಎಂದ ಅವರು, ಒಂದು ರಸ್ತೆಬದಿ ಅಪಘಾತವಾದರೆ ಸಹಾಯಕ್ಕೆ ಬಾರದೆ ನೂರಾರು ಬಾರಿ ಆಲೋಚನೆ ಮಾಡುತ್ತೇವೆ. ಹೀಗಿರುವಾಗ, ಮಾನವೀಯತೆಯ ಮನಸ್ಸು ಬೇಕೆಂದು ನುಡಿದರು.
ಯಾವುದೇ ಸಮಸ್ಯೆಗಳು ಇರಲಿ ಅದನ್ನು ಸರಿಪಡಿಸಿಕೊಳ್ಳಲು ಯುವಕರು ಮುಂದಾಗಬೇಕು ವಿನಃ ಅದನ್ನು ಮತ್ತೊಷ್ಟು ದೊಡ್ಡದು ಮಾಡಿಕೊಳ್ಳುವುದು ಸರಿಯಲ್ಲ. ಅಲ್ಲದೆ, ಎಲ್ಲರಿಗೂ ದುಃಖ, ಕಷ್ಟಗಳಿವೆ. ಆದರೆ, ಎಂದಿಗೂ ಕಷ್ಟವೇ ಇರುವುದಿಲ್ಲ ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದ ಅವರು, ಎಂಎಂವೈಸಿ ಸದಸ್ಯರು ಸಮುದಾಯದ ಏಳಿಗೆಗಾಗಿ ಹಾಗೂ ಬಡ ಮುಸ್ಲಿಮರ ಸಹಾಯಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಖಾದರ್ ಮುಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ, ಕಾಂಗ್ರೆಸ್ ಮುಖಂಡ ಜಿ.ಎ.ಬಾವ ಮಾತನಾಡಿ, ಮುಸ್ಲಿಮ್ ಸಮುದಾಯದ ಯುವಕರು ಶೈಕ್ಷಣಿಕವಾಗಿ ಮುಂದಾಗಬೇಕು. ಆಗ ಮಾತ್ರ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಅಲ್ಲದೆ, ಕೆಲ ಯುವಕರು ಸೇರಿ ಕಟ್ಟಿದ ಎಂಎಂವೈಸಿ ಇದೀಗ ಸಮಾಜಕ್ಕಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸ ತಂದಿದ್ದು, ಸಂಘಟನೆಯ ಅಭಿವೃದ್ಧಿಗೆ ಸರಕಾರಗಳಿಂದಲೂ ನೆರವು ಪಡೆಯಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೌಲಾನಾ ಹಾಶಿಮ್ ಬಾಲವಿ ತಂಙಳ್, ಅಬೂಬಕರ್ ಸಿದ್ದೀಕ್ ಹುದವಿ, ಅನಿವಾಸಿ ಉದ್ಯಮಿ ಯೂಸಫ್ ಅಲ್ ಫಲಾಹ್, ಎಂಎಂವೈಸಿ ಗೌರವಾಧ್ಯಕ್ಷ(ಗಲ್ಫ್ ವಿಂಗ್) ಮುಹಮ್ಮದ್ ಕುಕ್ಕುವಳ್ಳಿ, ಗೌರವಾಧ್ಯಕ್ಷ ಉಮರ್ ಹಾಜಿ, ರಾಜ್ಯ ಕಾರ್ಯದರ್ಶಿ ಕೆ.ಜುನೈದ್, ಸಂಸ್ಥಾಪಕ ಅಧ್ಯಕ್ಷ ಎಚ್.ಅಬೂಬಕರ್, ರಶೀದ್ ವಿಟ್ಲ ಸೇರಿ ಪ್ರಮುಖರು ಹಾಜರಿದ್ದರು.