ವೆಸ್ಟ್‌ಇಂಡೀಸ್ ಪ್ರವಾಸದವರೆಗೂ ಕುಂಬ್ಳೆ ಕೋಚ್

Update: 2017-06-10 03:41 GMT

ಲಂಡನ್, ಜೂ.10: ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಖ್ಯಾತ ಲೆಗ್‌ಸ್ಪಿನ್ನರ್ ಅನಿಲ್ ಕುಂಬ್ಳೆ ಸದ್ಯಕ್ಕೆ ಮುಂದುವರಿಯಲಿದ್ದಾರೆ. ಈಗ ಎದ್ದಿರುವ ವಿವಾದ ಬಗೆಹರಿಸಲು ಕಾಲಾವಕಾಶ ಕೋರಿ ಕ್ರಿಕೆಟ್ ಸಲಹಾ ಸಮಿತಿ, ಬಿಸಿಸಿಐಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದ ವರೆಗೂ ಅವರು ಮುಂದುವರಿಯುವುದು ಖಚಿತವಾಗಿದೆ.

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಸಲಹಾ ಸಮಿತಿಗೆ ತಕ್ಷಣ ನೋಟಿಸ್ ನೀಡಿ ಕುಂಬ್ಳೆಯನ್ನು ಪದಚ್ಯುತಗೊಳಿಸಲು ಯಾವುದೇ ಕಾರಣ ಸಿಕ್ಕಿಲ್ಲ ಎನ್ನಲಾಗಿದೆ. ಫಲಿತಾಂಶಗಳು ಭಾರತದ ಪರ ಬರುತ್ತಿದ್ದು, ಕಳೆದ ವರ್ಷವಷ್ಟೇ ಅವರನ್ನು ಅಯ್ಕೆ ಮಾಡಲಾಗಿತ್ತು.

ಸಲಹಾ ಸಮಿತಿ, ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರನ್ನು ಭೇಟಿ ಮಾಡಿ ಎರಡು ಗಂಟೆ ಕಾಲ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿತು ಎಂದು ತಿಳಿದುಬಂದಿದೆ. ಈ ವೇಳೆ ಸಮಿತಿಯ ನಿರ್ಧಾರವನ್ನು ಮಂಡಳಿಗೆ ತಿಳಿಸಲಾಗಿದೆ. ಸಿಎಸಿ ಸದಸ್ಯರು ಕುಂಬ್ಳೆ ಹಾಗೂ ಕೊಹ್ಲಿ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News