ಭಾವುಕತೆಯ ಚತುರತೆ
ಭಾಗ - 1
ಮಕ್ಕಳನ್ನು ಗಮನಿಸುತ್ತಾ ಮತ್ತು ಅವರನ್ನು ಸುಶಿಕ್ಷಿತರನ್ನಾಗಿ ಮಾಡುವ ನೆಪದಲ್ಲಿ ದೊಡ್ಡವರೆಂದೆನಿಸಿಕೊಂಡಿರುವ ನಮಗೆ ಹಲವಾರು ಪಾಠಗಳು ನಮ್ಮನ್ನು ನಾವು ತಿಳಿದುಕೊಳ್ಳಲು ದೊರಕುತ್ತಿರುತ್ತವೆ. ಅಲ್ಲದೇ, ಅವರ ವ್ಯಕ್ತಿತ್ವವನ್ನು ರೂಪಿಸುವಂತಹ ಪ್ರಯತ್ನವನ್ನು ಮಾಡುವ ನೆಪದಲ್ಲಿ ನಮ್ಮ ವ್ಯಕ್ತಿತ್ವವನ್ನು ತಿದ್ದಿ ತೀಡಿಕೊಳ್ಳಲು ಹಲವಾರು ಅಗತ್ಯದ ಅಂಶಗಳು ನೆರವಾ ಗುತ್ತವೆ. ಹಾಗಾಗಿ ಮಕ್ಕಳ ವ್ಯಕ್ತಿತ್ವವನ್ನು ಮತ್ತು ಅವರ ಬದುಕನ್ನು ರೂಪಿಸುವ ಪ್ರಯತ್ನದಲ್ಲಿ ನಾವು ನೇರಗೊಳ್ಳುವ ಸಾಧ್ಯತೆಗಳನ್ನೇ ನಾವು ಪ್ರಾಥಮಿಕವಾಗಿ ಕಂಡುಕೊಳ್ಳಬೇಕಾಗಿರುವುದು. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ಮಾತ್ರವಲ್ಲ ಜೀವನ ನಿರ್ವಹಣೆಯ ಕೌಶಲ್ಯವನ್ನು ಕಲಿಸಿಕೊಡಬೇಕು. ತಾವು ಕಲಿತ ವಿದ್ಯೆ, ಪಡೆವ ಜ್ಞಾನ, ಲಭ್ಯವಿರುವ ಆರ್ಥಿಕ ಮತ್ತು ಇತರ ಸಂಪನ್ಮೂಲಗಳು; ಯಾವುವೇ ಆಗಲಿ, ಕೌಶಲ್ಯದಿಂದ ನಿಭಾಯಿಸದಿದ್ದರೆ ಮುಂದೆ ಎಲ್ಲವನ್ನೂ ವ್ಯರ್ಥ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳುವ ವಿಷಯದಲ್ಲಿ ತಮಗೆ ತಾವೇ ತೊಡರುಗಾಲಾಗುವರು. ಎಷ್ಟೋ ಬಾರಿ ಮಕ್ಕಳು ಸಣ್ಣ ಸಣ್ಣ ವಿಷಯಕ್ಕೆ ದೊಡ್ಡದಾಗಿ ಮುನಿಸಿ ಕೊಳ್ಳುವರು. ದೊಡ್ಡವರಿಗೇನೂ ಮಹತ್ತರವಲ್ಲದ ವಿಷಯಕ್ಕೆ ತುಂಬಾ ಭಾವುಕರಾಗಿ ಅಳುವರು. ದೊಡ್ಡವರು ಯಾವುದನ್ನೋ ಬಿಸಾಡಬೇಕೆಂದು ಕೊಳ್ಳುವುದನ್ನು ಬಹಳ ಜತನದಿಂದ ಎತ್ತಿಟ್ಟುಕೊಂಡು ಮುಚ್ಚಟೆ ಮಾಡಿಕೊಳ್ಳುವರು. ಬರಲಿರುವ ಹುಟ್ಟುಹಬ್ಬದ ಕುರಿತಾಗಿ ನೂರೆಂಟು ಸಲ ಹೇಳುತ್ತಾ ದೊಡ್ಡವರಿಗೆ ತಲೆ ನೋವು ತರುವರು.
ತಮ್ಮ ಹುಟ್ಟುಹಬ್ಬಕ್ಕೆ ಏನು ಬೇಕು? ಏನು ಮಾಡಬೇಕು? ಇತ್ಯಾದಿಗಳನ್ನೆಲ್ಲಾ ಒಂದೇ ಸಮನೆ ಉತ್ಸಾಹದಲ್ಲಿ ಹೇಳುತ್ತಿರುವಾಗ ಪೋಷಕರು, ಅದು ಬಂದಾಗ ನೋಡೋಣ ಬಿಡು ಎಂದೋ, ಈಗ್ಯಾಕೆ ಅದರ ಬಗ್ಗೆ ಮಾತು ಎಂದೋ, ಸರಿ ಸರಿ ಬಿಡು, ಆಯ್ತು ಎಂದೋ ಅಲ್ಲಿಗಲ್ಲಿಗೆ ಸುಮ್ಮನಾಗಿಸುವರು. ತನಗೆ ಆ ಬಗೆಯ ಶಾಲಾ ಚೀಲ ಬೇಕು, ಈ ಬಗೆಯ ಲಂಚ್ ಬ್ಯಾಗ್ ಬೇಕು. ಅಂತಹುದೇ ಬಣ್ಣ ಇರಬೇಕು. ಡೋರೆಮಾನ್ ಚಿತ್ರವೋ, ಆ್ಯಂಗ್ರಿ ಬರ್ಡ್ ಚಿತ್ರವೋ ಇನ್ನೆಂತದ್ದೋ ಬೇಕು ಎಂದು ಹಟ ಹಿಡಿಯುವರು. ಅದೇ ಸಿಕ್ಕಿದಾಗ ಸಮಾಧಾನಗೊಳ್ಳುವರು. ಹೀಗೆ ಹತ್ತು ಹಲವು ಬಗೆಗಳಲ್ಲಿ ದಿನ ನಿತ್ಯದ ಹಲವು ವಸ್ತುಗಳಲ್ಲಿ ತಮ್ಮ ಭಾವುಕತೆಯನ್ನು ಅಭಿವ್ಯಕ್ತಪಡಿಸುತ್ತಲೇ ಇರುವರು.
ಭಾವುಕತೆ ಎಂದರೇನು?
ವಯೋಸಹಜವಾಗಿ ಬೆಳವಣಿಗೆಯಾಗುತ್ತಾ ಮತ್ತು ಬೆಳವಣಿಗೆಯ ಹಂತಗಳಲ್ಲಿ ಪರಿಚಿತವಾಗುವ ವಿವಿಧ ರೀತಿಯ ವಾತಾವರಣಗಳು, ವ್ಯಕ್ತಿಗಳು, ಸನ್ನಿವೇಶಗಳು, ವಸ್ತುಗಳು, ಅನುಭವಗಳು ಎದುರಾದಂತೆಲ್ಲಾ ಅವರ ಭಾವುಕತೆಯ ನಿಲುವುಗಳು ಅಥವಾ ಭಾಗುವಿಕೆಗಳು ವ್ಯತ್ಯಾಸಗೊಳ್ಳುತ್ತವೆಯೇ ಹೊರತು ಅವರು ಭಾವುಕತೆಯಿಂದ ಹೊರತಾಗುವುದೇ ಇಲ್ಲ. ಅದರ ರಚನೆಯ ಮೂಲ ಮತ್ತು ರೂಪುಗೊಳ್ಳುವ ಸಾಮರ್ಥ್ಯವಿರುವುದು ಬಾಲ್ಯದಲ್ಲಿಯೇ ಎಂಬುದನ್ನು ಮಾತ್ರ ಎಂದಿಗೂ ಮರೆಯಬಾರದು. ವ್ಯಕ್ತಿತ್ವ ನಿರ್ಮಾಣದಲ್ಲಿಯೇ ಇದು ಅತ್ಯಂತ ಶಕ್ತಿಶಾಲಿಯಾದಂತಹ ಅಂಶ ಎನ್ನುವುದನ್ನು ಬಹಳ ಗುರುತರವಾಗಿಯೇ ಗಮನಿಸಿಕೊಳ್ಳಬೇಕು.
ಭಾವುಕತೆ ಎಂದರೆ ಬರಿಯ ದುಃಖವೋ, ಸಂತೋಷವೋ, ಕೋಪಾ ವೇಶವೋ, ಬೇಸರದ ಪ್ರಕಟನೆಯೋ ಅಲ್ಲ. ಅದೊಂದು ತುಂಬು ಹೃದಯದ ಮನಸ್ಥಿತಿ. ಹೃದಯದ ಹೆಸರನ್ನೆತ್ತಿಕೊಂಡು ನಾವು ಭಾವುಕತೆಯ ಬಗ್ಗೆ ಹೇಳುವುದಕ್ಕೆ ಪ್ರಯತ್ನಿಸುವುದಾದರೂ, ನಿಜ ಹೇಳಬೇಕೆಂದರೆ ಅದೂ ಒಂದು ಮನಸ್ಥಿತಿಯೇ ಹೊರತು, ಹೃದಯಕ್ಕೂ ಭಾವುಕತೆಗೂ ಏನೂ ಸಂಬಂಧವಿಲ್ಲ. ದೇಹದ ಅಂಗಾಂಗಗಳೊಡನೆ ಮಾನಸಿಕ ಏರುಪೇರಿನಿಂದ ಉಂಟಾಗುವ ರಾಸಾಯನಿಕ ಪರಿಣಾಮವು ಹೃದಯದ ಮೇಲೂ ಆಗುತ್ತದೆ. ಆದರೆ ಹೃದಯ ಒಂದು ಡಿಸೈಡಿಂಗ್ ಪ್ಯಾಕ್ಟರ್ ಅಂದರೆ ನಿರ್ಣಯ ತೆಗೆದುಕೊಳ್ಳುವಂತಹ ಕರಣ ಅಲ್ಲ. ಅದೇನಿದ್ದರೂ ಮಿದುಳು ಅಥವಾ ಅಮೂರ್ತವಾಗಿ ಹೇಳುವುದಾದರೆ ಮನಸ್ಸು. ಹಾಗಾಗಿ ಭಾವುಕತೆ ಎಂದರು ಕೂಡಾ ಅದು ಮನಸ್ಥಿತಿಗೇ ಸಂಬಂಧ ಪಟ್ಟಿರುವುದು. ಆದರೆ ಅದರ ಸ್ತರವನ್ನು ಅರ್ಥೈಸಿಕೊಳ್ಳುವುದಕ್ಕಾಗಿ ತುಂಬು ಹೃದಯದ ಮನಸ್ಥಿತಿ ಎಂದು ಹೇಳುವುದು. ಹೃತ್ಪೂರ್ವಕ ಅಥವಾ ಹೃದಯಪೂರ್ವಕವಾಗಿ ಎಂದೆಲ್ಲಾ ಹೇಳುವುದು ಇದೇ ಮನಸ್ಥಿತಿಗೆ.
ಇದನ್ನು ಹೀಗೂ ವ್ಯಾಖ್ಯಾನಿಸಬಹುದು; ತರ್ಕವನ್ನು ಮತ್ತು ಲೆಕ್ಕಾಚಾರವನ್ನು ಬದಿಗಿಟ್ಟು ವಿಷಯವನ್ನು ಆಪ್ತಗೊಳಿಸಿಕೊಳ್ಳುವ ಒಂದು ಅನುಭವವೇ ಭಾವುಕತೆ. ಭಾವುಕತೆಗೂ ಜೀವನ ನಿರ್ವಹಣೆಯ ಕೌಶಲ್ಯವಿದೆ ಎನ್ನುವುದನ್ನು ಪೋಷಕರು ಮತ್ತು ಶಿಕ್ಷಕರು ಅರ್ಥ ಮಾಡಿಕೊಂಡರೆ ಕೆಲವು ಕಾರ್ಯಕ್ರಮಗಳ ಮೂಲಕ ಅವುಗಳನ್ನು ಮನೆ ಮತ್ತು ಶಾಲೆಗಳಲ್ಲಿ ಮಕ್ಕಳಲ್ಲಿ ಆ ಕೌಶಲ್ಯವನ್ನು ರೂಢಿಗೊಳಿಸಬಹುದು. ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳುವುದಾದರೆ ಒಂದು ವ್ಯಕ್ತಿಯ ಇಡೀ ಭವಿಷ್ಯದ ಮೇಲುಸ್ತುವಾರಿಯು ಆ ಮಗುವಿನ ಬಾಲ್ಯದಲ್ಲಿಯೇ ಆಗುವುದು.
ಭಾವುಕತೆ ಮತ್ತು ಪ್ರಾಮಾಣಿಕತೆ
ಮಕ್ಕಳು ಸಿಕ್ಕಾಪಟ್ಟೆ ಸಾಮಾಜೀಕರಣಕ್ಕೆ ಒಳಗಾಗುವ ಮುನ್ನ ತಮ್ಮ ಭಾವುಕತೆಗಳಲ್ಲಿ ಸದಾ ಪ್ರಾಮಾಣಿಕವಾಗಿರುತ್ತಾರೆ. ಅದೊಂದು ಮುಖ್ಯವಾದ ಮತ್ತು ಸಹಜವಾದಂತಹ ಪ್ರಭಾವ ಬೀರುವಂತಹ ಶಕ್ತಿಯೂ ಆಗಿರುತ್ತದೆ. ಆದರೆ, ಹೆಚ್ಚು ಹೆಚ್ಚು ಸಾಮಾಜೀಕರಣಕ್ಕೆ ಅವರನ್ನು ಒಳಮಾಡಿದಂತೆ ಅವರನ್ನು ತಮ್ಮ ಪ್ರಾಮಾಣಿಕತೆಯಿಂದ ಹೊರಗೆ ತರುವ ಕೆಲಸ ಪೋಷಕರಿಂದ, ಶಿಕ್ಷಕರಿಂದ ಮತ್ತು ಸಮಾಜದ ಇತರ ಘಟಕಗಳ ಪ್ರತಿನಿಧಿಗಳಿಂದ ಆಗುತ್ತದೆ. ವೈಚಾರಿಕತೆ ಎಂಬುದು ಗ್ರಹಿಕೆಯ ಸಾಮರ್ಥ್ಯ ಮತ್ತು ಅದನ್ನು ಮರು ವ್ಯಕ್ತಪಡಿಸುವ ಕೌಶಲ್ಯದ ಮೇಲೆ ಅವಲಂಬಿತವಾದರೆ, ಭಾವುಕತೆಯೆಂಬುದು ವ್ಯಕ್ತಿಯ ಪ್ರಾಮಾಣಿಕತೆಯ ಆಧಾರದಲ್ಲಿ ಅದರ ಸತ್ವವನ್ನು ಕಾಪಾಡಿಕೊಳ್ಳುತ್ತದೆ. ಹಾಗಾಗಿ ಭಾವುಕತೆ ಮತ್ತು ಪ್ರಾಮಾಣಿಕತೆ ಈ ಎರಡನ್ನೂ ಜೊತೆಜೊತೆಯಾಗಿಯೇ ಪರಿಗ್ರಹಿಸಬೇಕು. ಜೊತೆಗೆ, ಭಾವುಕತೆಯ ಕೌಶಲ್ಯವನ್ನು ಮಕ್ಕಳಿಗೆ ದಾಟಿಸಲು ಹೋಗುವಾಗ ಅದು ಪ್ರಾಮಾಣಿಕತೆಯ ತಳಹದಿಯ ಮೇಲೆ ರೂಪಿತವಾಗುವಂತೆ ನೋಡಿಕೊಳ್ಳಬೇಕು.
ಭಾವುಕತೆಯ ಅನುಭವ ಮತ್ತು ಪ್ರದರ್ಶನದಲ್ಲಿಯೇ ಪ್ರಾಮಾಣಿಕತೆಯ ಮಾನದಂಡವನ್ನು ಸದಾ ಜಾಗೃತವಾಗಿಟ್ಟುಕೊಂಡಿರಬೇಕು. ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು ಮತ್ತು ಅವರ ಇತಿಮಿತಿಯಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿರುತ್ತಾರೆಂದು ಅವರು ಮಾಡುವ ಕೆಲಸವನ್ನೆಲ್ಲಾ ಹೊಗಳುತ್ತಾ, ಕೊಂಡಾಡುತ್ತಾ ತಮಗೇನೂ ಅನ್ನಿಸದಿದ್ದರೂ ವಿಪರೀತ ಪ್ರಶಂಸೆ ಮಾಡುತ್ತಾ ಆನಂದವನ್ನು ವ್ಯಕ್ತಪಡಿಸುವಂತಹ ಹಿರಿಯರನ್ನು ನೋಡಿದ್ದೇನೆ. ಅವರಿಗೊಂದು ವಿಷಯ ಅರ್ಥವೇ ಆಗುವುದಿಲ್ಲ. ಮಕ್ಕಳು ತಾವು ಬಿಡಿಸಿದ ಚಿತ್ರವನ್ನೋ ಅಥವಾ ತೋರಿದ ನೃತ್ಯವನ್ನೋ ಹೊಗಳುವಾಗ ಅದಕ್ಕೆ ಮುಂದುವರಿಕೆಗೆ ಸಾಧ್ಯವಾಗುವಂತಹ ವಿಮರ್ಶಕ ಅಂಶಗಳನ್ನು ಸೇರಿಸದಿದ್ದರೆ ತಾವು ವ್ಯಕ್ತಪಡಿಸಿದ ಪ್ರಶಂಸನೀಯ ಆನಂದ ಪ್ರಾಮಾಣಿಕವಾಗಿರುವುದಿಲ್ಲ. ಜೊತೆಗೆ ಮಕ್ಕಳು ತಮ್ಮ ಆ ಕೃತಿಯಿಂದ ಅವರಿಗೆ ನಿಜವಾಗಿಯೂ ಅಂತಹ ಆನಂದವನ್ನು ನೀಡಿದ್ದೇವೆ ಎಂದೇ ಭಾವಿಸುತ್ತಾರೆ. ಹಾಗೆಯೇ ಅವರ ಕೃತಿಯ ಅಭಿವೃದ್ಧಿಯೂ ನಿಧಾನಗತಿಯಲ್ಲಿ ಸಾಗುತ್ತದೆ ಅಥವಾ ಕುಂಠಿತವಾಗುತ್ತದೆ. ಮಕ್ಕಳ ಹೃತ್ಪೂರ್ವಕ ತೊಡಗಿಸಿಕೊಳ್ಳುವಿಕೆಯನ್ನು ಪ್ರಶಂಸಿದಂತೆ, ಅವರ ಕೃತಿಯನ್ನು ಪ್ರಶಂಸಿಸುವಾಗ ತಮಗೆ ಇಷ್ಟವಾಗದ ಅಥವಾ ಅಭಿವೃದ್ಧಿ ಪಡಿಸಿಕೊಳ್ಳಲು ಸಾಧ್ಯವಿರುವಂತಹ ಅಂಶಗಳನ್ನು ಮುಂದಿಡಲೇ ಬೇಕು. ಕೆಲವು ಹಿರಿಯರು ಮಕ್ಕಳು ಏನೇ ಮಾಡಿದರೂ ಹಾಹಾ ಓಹೋ ಎಂದು ಹುಸಿ ಆನಂದವನ್ನು ಅಥವಾ ಕೃತಕ ಪ್ರಶಂಸೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಈ ನಕಲಿ ಭಾವುಕತೆಗಳು ಮಕ್ಕಳನ್ನು ಒಂದಷ್ಟು ಕಾಲ ಮೋಸಗೊಳಿಸುವುದೇನೋ ನಿಜ. ಆದರೆ, ಮುಂದೆ ಅವರೇ ಅದನ್ನು ನಿರಾಕರಿಸುತ್ತಾರೆ. ಅಥವಾ ಆ ಗೀಳಿಗೆ ಒಳಗಾಗಿಬಿಟ್ಟರೆ ಅದೊಂದನ್ನೇ ಬಯಸುತ್ತಿರುತ್ತಾರೆ. ಸುಳ್ಳು ಭಾವುಕತೆಯ ಪ್ರದರ್ಶನಗಳು ಯಾವಾಗಲೂ ಅಪಾಯಕಾರಿ. ಅದನ್ನು ಗ್ರಹಿಸುವವರಿಗೆ ಅದೊಂದು ಹಾಸ್ಯಾಸ್ಪದವೂ ಆಗಿರುತ್ತದೆ.
ಭಾವುಕತೆಯು ಪ್ರಾಮಾಣಿಕ ತಳಹದಿಯನ್ನು ಹೊಂದಲು ಕೆಲವು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.
1. ಪೋಷಕರಾಗಲಿ, ಶಿಕ್ಷಕರಾಗಲಿ ಯಾವುದೇ ಮಗುವಿನ ಮುಂದೆ ತಮ್ಮ ಭಾವುಕತೆಯನ್ನು ಪ್ರಕಟಿಸುವಾಗ ತಾವು ಪ್ರಾಮಾಣಿಕವಾಗಿ ಅದನ್ನು ತೋರುತ್ತಿದ್ದೇವೆಯೇ ಎಂಬುದನ್ನು ಗಮನಿಸಿಕೊಳ್ಳಬೇಕು. ತನಗೆ ತಾನು ಪ್ರಾಮಾಣಿಕವಾಗಿರಲು ಯತ್ನಿಸಿದರೆ ಮಾತ್ರವೇ ಸುಳ್ಳು ಅಥವಾ ಕೃತಕ ಭಾವುಕತೆಯ ಪ್ರದರ್ಶನಗಳನ್ನು ಮಾಡುವುದಿಲ್ಲ.
2. ಪ್ರಾಮಾಣಿಕವಾಗಿ ಭಾವುಕತೆಯನ್ನು ಅಭಿವ್ಯಕ್ತ ಪಡಿಸಲು ಅವರು ಒಂದೋ ಮುಗ್ಧರಾಗಿರಬೇಕು ಅಥವಾ ಧೈರ್ಯವಂತರಾಗಿರಬೇಕು. ಮಕ್ಕಳು ಮುಗ್ಧರಾಗಿರುವ ಕಾರಣದಿಂದ ತಮ್ಮ ಪ್ರಾಮಾಣಿಕ ಭಾವುಕತೆಗಳನ್ನು ಪ್ರದರ್ಶಿಸುತ್ತಾರೆ. ಆದರೆ ಹಿರಿಯರಾದವರಿಗೆ ಹಿಂಜರಿಕೆಯಿಲ್ಲದ ಧೈರ್ಯವಿದ್ದರೆ ಅವರು ತಮ್ಮ ಭಾವುಕತೆಯ ಪ್ರದರ್ಶನದಲ್ಲಿ ಪ್ರಾಮಾಣಿಕವಾಗಿರುತ್ತಾರೆ.
3. ಸತ್ಯವನ್ನು ಪ್ರಾಮಾಣಿಕವಾಗಿರುವ ಭಾವುಕತೆಯ ಕೌಶಲ್ಯದಿಂದ ಗ್ರಹಿಸ ಬಹುದು. ಪ್ರಜ್ಞಾವಂತಿಕೆಯಿಂದ, ವಿವೇಚನೆಯ ಮೂಲಕ, ತಾರ್ಕಿಕ ಮತ್ತು ಆಂಶಿಕ ದಾಖಲೆಗಳ ಪರಿಶೀಲನೆಯಿಂದ ಮತ್ತು ಅಂತರ್ಬೋಧೆ ಅಥವಾ ಆಂತರಿಕ ದೃಷ್ಟಿಯಿಂದ (ಒಳನೋಟದಿಂದ) ಸತ್ಯ ಎಂಬು ದನ್ನು ಗ್ರಹಿಸಲಾಗುತ್ತದೆ. ಈ ಎಲ್ಲಾ ವಿಧಾನಗಳಲ್ಲಿ ಒಳನೋಟವೇ ಅತ್ಯಂತ ಆಳವಾದದ್ದೂ ಮತ್ತು ಘನವಾದದ್ದೂ ಆಗಿರುತ್ತದೆ. ಈ ಒಳ ನೋಟ ವೆಂಬುದು ದೊರಕುವುದು ಪ್ರಾಮಾಣಿಕವಾದ ಭಾವು ಕತೆಯ ಕೌಶಲ್ಯದಿಂದ. ಇದರಿಂದಲೇ ಬಹಳಷ್ಟು ನಾಯಕರು ತಮ್ಮ ಗಟ್ ಇನ್ಸ್ಟಿಂಕ್ಟ್ ಅಥವಾ ದಿಟ್ಟ ಪ್ರವೃತ್ತಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳು ತ್ತಾರೆ. ಇಂಥ ಪ್ರವೃತ್ತಿಗಳು ಗಟ್ಟಿಗೊಳ್ಳುವುದೇ ಭಾವುಕತೆಯ ಕೌಶಲ್ಯದಿಂದ.
4. ಒಳ ನೋಟ ಅಥವಾ ಒಳ ಅರಿವು ಎಂಬುದು ಗಟ್ಟಿಗೊಳ್ಳುವುದು ಭಾವುಕತೆಯ ಪ್ರಾಮಾಣಿಕತೆಗಳಿಂದ. ತನಗೆ ತಾನು ಸತ್ಯವನ್ನು ಹೇಳಿಕೊಳ್ಳುವ, ಒಪ್ಪಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಲ್ಲಿ ಭಾವುಕತೆಯ ಅಭಿವ್ಯಕ್ತಿಯನ್ನೂ ಅಂತೆಯೇ ಮಾಡುವಂತಾದಲ್ಲಿ ಅಲ್ಲಿಗೆ ಇಂಟ್ಯೂಶನ್ ಅಥವಾ ಆಂತರಿಕ ನೋಟವು ಸಿದ್ಧಿಸಿದಂತೆಯೇ ಸರಿ. ಸ್ಥೂಲವಾಗಿರುವಂಥ ವಿಚಾರ, ವಿಷಯ ಮತ್ತು ವಸ್ತುಗಳಾಚೆಗೆ ಅರಿವನ್ನು ಗ್ರಹಿಸುವಂತಹ ಗುಣವು ದೊರಕುವುದೇ ಇದರಿಂದ.
ಒಳ್ಳೆಯ ಅಥವಾ ಕೆಟ್ಟ ಭಾವುಕತೆಗಳಿವೆಯೇ?
ನಿಜ ಹೇಳಬೇಕೆಂದರೆ, ಭಾವುಕತೆಯಲ್ಲಿ ಕೆಟ್ಟದ್ದು ಅಥವಾ ಒಳ್ಳೆಯದು ಎಂಬುದೇ ಇಲ್ಲ. ಇನ್ನೂ ಮುಂದುವರಿದು ಹೇಳುವುದಾದರೆ, ಅದರಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಎಂಬುದೂ ಇಲ್ಲ. ಅದೊಂದು ಮೂಲವಸ್ತುವಿನ ರೀತಿಯಲ್ಲಿ. ಅದನ್ನು ಬಳಸಿಕೊಂಡು ಮಾಡುವ ಕೆಲಸಗಳು, ಆಲೋಚನೆಗಳು, ಆಯೋಜನೆಗಳು ಒಳ್ಳೆಯದಾಗಿರಬಹುದು ಅಥವಾ ಕೆಟ್ಟದ್ದಾಗಿದ್ದಿರಬಹುದು. ಸಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿರಬಹುದು. ರಚನಾತ್ಮಕವಾಗಿರಬಹುದು ಅಥವಾ ವಿಧ್ವಂಸಕವಾಗಿರಬಹುದು. ಒಟ್ಟಾರೆ ಭಾವುಕತೆಯ ಕೌಶಲ್ಯಕ್ಕೆ ಮತ್ತು ಅದರ ಪ್ರಾಮಾಣಿಕತೆಗೆ ಒಳ್ಳೆಯ ಮತ್ತು ಕೆಟ್ಟದರ ಸೋಂಕಿಲ್ಲ. ವಿಧ್ವಂಸಕಾರಿ ಉಗ್ರರೂ ತಮ್ಮ ಭಾವುಕತೆಯಲ್ಲಿ ಪ್ರಾಮಾಣಿಕರಾಗಿರುತ್ತಾರೆ. ಕ್ರೀಡಾಪಟುಗಳೂ ತಮ್ಮ ಚಟುವಟಿಕೆಯಲ್ಲಿ ಭಾವುಕವಾಗಿ ಪ್ರಾಮಾಣಿಕರಾಗಿರುತ್ತಾರೆ. ಹಾಗಾಗಿ ರಚನಾತ್ಮಕ ಮತ್ತು ವಿಧ್ವಂಸಕ ಧೋರಣೆಗಳನ್ನು ಮಕ್ಕಳಿಗೆ ಭಾವುಕತೆಯ ಕೌಶಲ್ಯವನ್ನು ಉಪಯೋಗಿಸುವಾಗಲೇ ಹೇಳಿಕೊಡಬೇಕಾಗುತ್ತದೆ. ಭಾವುಕತೆಯ ಕೌಶಲ್ಯದ ಬಗ್ಗೆ ಇಷ್ಟೆಲ್ಲಾ ಹೇಳಿದರೂ ಅದನ್ನು ಉಪಯೋಗಿಸುವ ಮತ್ತು ಮಕ್ಕಳಿಗೆ ಹೇಳಿಕೊಡುವ ಬಗೆಯನ್ನು ಇನ್ನೂ ನಾವು ಎದುರ್ಗೊಂಡಿಲ್ಲ. ಅದೇ ಮುಖ್ಯವಾಗಿರುವುದು. ಇದು ಬರಿಯ ಪೀಠಿಕೆ ಯಷ್ಟೇ. ಭಾವುಕತೆಯ ಕೌಶಲ್ಯವನ್ನು ಅಭ್ಯಾಸ ಮಾಡುವುದು ಹೇಗೆಂಬುದನ್ನು ಮುಂದೆ ನೋಡೋಣ.
ಭಾವುಕತೆಯ ಕೌಶಲ್ಯವೆಂದರೆ ಏನು?
1.ಇದು ಗ್ರಹಿಸುವ, ಅರ್ಥೈಸಿಕೊಳ್ಳುವ ಮತ್ತು ಪರಿಣಾಮಾತ್ಮಕವಾಗಿ ಬಲವನ್ನು ಪ್ರಯೋಗಿಸುವ ಸಾಮರ್ಥ್ಯ. ಭಾವನೆಗಳ ಒಳನೋಟಗಳನ್ನು ವ್ಯಕ್ತಿಯ ಅಥವಾ ಮಾನವ ಸಾಮರ್ಥ್ಯವನ್ನಾಗಿ, ತಿಳುವಳಿಕೆಯನ್ನಾಗಿ ಮತ್ತು ಪ್ರಭಾವವನ್ನಾಗಿ ಗ್ರಹಿಸುವುದು.
2. ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಯಾವುದೇ ಮುಖ್ಯವಾದದ್ದು ಘಟಿಸಿದರೂ ಅದು ಭಾವನೆಗಳನ್ನು ಉಂಟುಮಾಡುತ್ತವೆ. ಅವೇ ಮನುಷ್ಯನ ಪ್ರೇರಣೆಗೆ, ಪ್ರತಿಕ್ರಿಯೆಗೆ, ವ್ಯಕ್ತಿಗತ ಶಕ್ತಿಗೆ, ಪ್ರಭಾವಕ್ಕೆ, ಸಂಶೋಧನೆಗೆ ಪ್ರಾಥಮಿಕ ಘಟಕವಾಗಿ ರೂಪುಗೊಳ್ಳುತ್ತವೆ.
3. ಬಹಳಷ್ಟು ವಿಷಯಗಳಲ್ಲಿ ವಿವೇಚಿಸುವಂತಹ ಸಾಮರ್ಥ್ಯ ಮತ್ತು ವಿವೇಚನಾ ವೌಲ್ಯವು ಒದಗುವುದೇ ಭಾವುಕತೆಯ ತೆಕ್ಕೆಯೊಳಗೆ ಬಂದಾಗ. ಯಾವುದೇ ವಸ್ತು, ವಿಷಯ, ಆಲೋಚನೆ, ಸೇವೆ, ಕಾರಣ ಏನೇ ಇದ್ದರೂ ಅದು ಪ್ರವೇಶಿಸುವುದೇ ನಮ್ಮ ಭಾವುಕತೆಯ ದ್ವಾರದಿಂದ. ನಂತರ ಅದನ್ನು ಸಮರ್ಥಿಸಿಕೊಳ್ಳುವುದೋ, ತಾರ್ಕಿಕವಾಗಿ ಮಂಡಿಸುವುದೋ, ಅದಕ್ಕೆ ಅನುಕೂಲಕರವಾಗಿರುವಂತಹ ಅಂಶಗಳನ್ನು ಕಂಡುಕೊಳ್ಳುವುದೋ ಆಗಿರುತ್ತದೆ. ನಿಲುವುಗಳು ಮೂಡುವುದಕ್ಕೂ ಕೂಡಾ ಒಲವು ಎಂಬ ಆಂಶಿಕ ಭಾವುಕತೆಯೇ ಕಾರಣ.
4. ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಯಾವುದೇ ಒಬ್ಬ ವ್ಯಕ್ತಿಯು ಸಾರ್ವಜನಿಕವಾಗಿ ರೂಪುಗೊಳ್ಳುವುದೇ ಒಂದು ಭಾವುಕತೆಯನ್ನು ಸೃಷ್ಟಿಸುವುದರಿಂದ. ಇದನ್ನೇ ತನ್ನನ್ನೂ ಮತ್ತು ಇತರರನ್ನೂ ಪ್ರೇರೇಪಿಸುವಂತಹ ಅಂಶವೆಂದೆನ್ನುವುದು. ಒಂದು ಸಕಾರಾತ್ಮಕವಾಗಿಯಾಗಲಿ, ನಕಾರಾತ್ಮಕವಾಗಿಯಾಗಲಿ ಭಾವುಕತೆಯನ್ನು ಒಬ್ಬ ವ್ಯಕ್ತಿಯು ಸ್ಫುರಿಸಲಿಲ್ಲವೆಂದರೆ ಅವನು ನಗಣ್ಯನಾಗಿಬಿಡುವನು.
5. ಹಾಗಾಗಿ ಭಾವುಕತೆಯೆಂಬುದನ್ನು ಅರಿತುಕೊಂಡು, ಅದರ ತಳಹದಿಯನ್ನು ಮತ್ತು ಅದರ ಪ್ರಕಟನೆಗಳನ್ನು ಗಮನಿಸಿಕೊಂಡು ಅದನ್ನು ರಚನಾತ್ಮಕವಾಗಿ ರೂಪುಗೊಳಿಸಿಕೊಂಡು ಮುನ್ನಡೆಸಿದರೆ ಬೌದ್ಧಿಕತೆ ಮತ್ತು ಸೃಜನಶೀಲತೆಯನ್ನೂ ಬೆಳೆಸಿಕೊಳ್ಳಲು ಸಾಧ್ಯವಾಗುವುದು.
6.ಸಾಮಾನ್ಯವಾಗಿ ಭಾವುಕತೆಯು ಉಂಟಾಗುವುದು ಪ್ರಭಾವಗೊಳಿಸುವಂತಹ ನಿರೀಕ್ಷಿತ ಅಥವಾ ಅನಿರೀಕ್ಷಿತ ಚಟುವಟುವಟಿಕೆಗಳಿಂದ. ಅದು ಹೊರತಾದ ಅಥವಾ ಅನ್ಯ ವ್ಯಕ್ತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲಿ ಒಳ್ಳೆಯ ಭಾವನೆಗಳನ್ನು ಹೊಂದುತ್ತಾನೆ. ನಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲಿ ವ್ಯತಿರಿಕ್ತವಾದ ಮತ್ತು ಪ್ರತಿಕೂಲವಾದಂತಹ ಭಾವನೆಗಳನ್ನು ಹೊಂದುತ್ತಾನೆ.