ಇನ್ಫೋಸಿಸ್ ಕುರಿತ ಈ ವಿಷಯಗಳು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ

Update: 2017-06-11 11:26 GMT

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಇನ್ಫೋಸಿಸ್‌ನ ಆಡಳಿತ ಮಂಡಳಿ ಮತ್ತು ಅದರ ಪ್ರವರ್ತಕರ ನಡುವಿನ, ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದುಕೊಂಡಿ ರುವ, ಕಚ್ಚಾಟವು ಸಂಸ್ಥೆಯ ಸ್ಥಾಪಕರು ತಮ್ಮ ಕಂಪನಿಯಲ್ಲಿನ ತಮ್ಮ ಸಂಪೂರ್ಣ ಶೇರುಗಳನ್ನು ಮಾರಾಟ ಮಾಡಲು ಯೋಜಿಸುತ್ತಿದ್ದಾರೆ ಎಂಬ ವರದಿಯೊಂದಿಗೆ ಹೊಸ ತಿರುವನ್ನು ಪಡೆದುಕೊಂಡಿದೆ.

 ಕಂಪನಿಯ ಸಿಇಒ ವಿಶಾಲ ಸಿಕ್ಕಾ ಮತ್ತು ಮಹಾಪೋಷಕ ನಾರಾಯಣ ಮೂರ್ತಿ ಅವರು ವರದಿಯನ್ನು ತಳ್ಳಿಹಾಕಿದ್ದಾರಾದರೂ ಅದು ಮಧ್ಯಮ ವರ್ಗದ ಮನೆಗಳಲ್ಲಿ ಬೆಳೆದ ಇಂಜಿನಿಯರ್ ಉದ್ಯಮಶೀಲರ ತಂಡವೊಂದು ಹುಟ್ಟುಹಾಕಿದ ಕಂಪನಿಯ ಭವಿಷ್ಯದ ಕುರಿತು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ.

ಇನ್ಫೋಸಿಸ್‌ನ ಅಸಾಮಾನ್ಯ ಯಶಸ್ಸಿನ ಕಥೆ ಇಲ್ಲಿದೆ....

ಸ್ಥಾಪನೆಯಾಗಿದ್ದು ಹೇಗೆ?

1981ರಲ್ಲಿ ಪುಣೆಯಲ್ಲಿ ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್‌ನ ಮಾಜಿ ಉದ್ಯೋಗಿಗಳಾದ ನಾರಾಯಣ ಮೂರ್ತಿ, ನಂದನ ನಿಲೇಕಣಿ, ಎನ್.ಎಸ್.ರಾಘವನ್, ಎಸ್. ಗೋಪಾಲ ಕೃಷ್ಣನ್, ಎಸ್.ಡಿ.ಶಿಬುಲಾಲ್, ಕೆ.ದಿನೇಶ ಮತ್ತು ಅಶೋಕ ಅರೋರಾ ಅವರ ತಲೆಗಳಲ್ಲಿ ಇನ್ಫೋಸಿಸ್ ಪರಿಕಲ್ಪನೆ ಮೊಳಕೆಯೊಡೆದಿತ್ತು.

ಮೂರ್ತಿಯವರ ಪತ್ನಿ ಸುಧಾ ಮೂರ್ತಿ ಮನೆಖರ್ಚಿನ ದುಡ್ಡಿನಲ್ಲಿ ಉಳಿತಾಯ ಮಾಡಿದ್ದ 10,000 ರೂ.ಗಳ ಅಲ್ಪಮೊತ್ತದ ಸಾಲರೂಪದ ಆರಂಭಿಕ ಬಂಡವಾಳದೊಂದಿಗೆ ಇನ್ಫೋಸಿಸ್ ಕನ್ಸಲ್ಟಂಟ್ಸ್ ಆರಂಭಗೊಂಡಿತ್ತು. ಮೂರ್ತಿಯವರ ಪುಣೆ ಮನೆಯಲ್ಲಿಯ ಎದುರಿನ ಕೋಣೆ ಕಂಪನಿಯ ಮೊದಲ ಕಚೇರಿಯಾಗಿದ್ದರೆ, ರಾಘವನ್ ಅವರ ನಿವಾಸ ನೋಂದಾಯಿತ ಕಚೇರಿಯಾಗಿತ್ತು!

ಇನ್ಫೋಸಿಸ್‌ನ ಮೊದಲ ಉದ್ಯೋಗಿ

ನಾರಾಯಣ ಮೂರ್ತಿಯವರು ಇನ್ಫೋಸಿಸ್‌ನ ಮೊದಲ ಉದ್ಯೋಗಿಯಾಗಿದ್ದರು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಮೊದಲ ಉದ್ಯೋಗಿ ರಾಘವನ್ ಆಗಿದ್ದರು. ಮೂರ್ತಿ ಪಟ್ನಿಯಲ್ಲಿನ ತನ್ನ ಕಾರ್ಯಭಾರವನ್ನು ಮುಗಿಸಿಕೊಂಡು ಸುಮಾರು ಒಂದು ವರ್ಷದ ಬಳಿಕ ಉದ್ಯೋಗಿ ನಂ.4 ಆಗಿ ಕಂಪನಿಯನ್ನು ಸೇರಿದ್ದರು.

ತಾನು ಬಯಸಿದ್ದ ಆಮದು ಮಾದರಿಯನ್ನು ಖರೀದಿಸಲು ಮೂರ್ತಿಯವರ ಬಳಿ ಹಣವಿರಲಿಲ್ಲ, ಹೀಗಾಗಿ 1983ರವರೆಗೂ ಕಂಪನಿಯಲ್ಲಿ ಕಂಪ್ಯೂಟರ್ ಇರಲಿಲ್ಲ. ಸ್ವಂತದ್ದಾದ ಡಾಟಾ ಜನರಲ್ 32-ಬಿಟ್ ಎಂವಿ 8000 ಕಂಪ್ಯೂಟರ್ ಹೊಂದಲು ಕಂಪನಿಯು ಎರಡು ವರ್ಷಗಳವರೆಗೆ ಕಾಯಬೇಕಾಗಿತ್ತು.

ಮೊದಲ ಗಿರಾಕಿ

1983ರಲ್ಲಿ ನ್ಯೂಯಾರ್ಕ್‌ನ ಡಾಟಾ ಬೇಸಿಕ್ಸ್ ಕಾರ್ಪೊರೇಷನ್ ರೂಪದಲ್ಲಿ ತನ್ನ ಮೊದಲ ಗಿರಾಕಿಯನ್ನು ಇನ್ಫೋಸಿಸ್ ಪಡೆದುಕೊಂಡಿತ್ತು. ಅದರ ಮೊದಲ ಜಂಟಿ ಉದ್ಯಮ ಪಾಲುದಾರ, ಅಮೆರಿಕದ ಕರ್ಟ್ ಸಾಲ್ಮನ್ ಅಸೋಸಿಯೇಟ್ಸ್(ಕೆಎಸ್‌ಎ) 1989ರಲ್ಲಿ ಕವುಚಿಬಿದ್ದಿತ್ತು.

ಸ್ಥಾಪಕರ ಪೈಕಿ ಓರ್ವರಾಗಿದ್ದ ಅಶೋಕ ಅರೋರಾ 1988ರಲ್ಲಿ ಕಂಪನಿಯಲ್ಲಿನ ತನ್ನ ಸಂಪೂರ್ಣ ಶೇರುಗಳನ್ನು ಮಾರಾಟ ಮಾಡಿ ಸಂಸ್ಥೆಯಿಂದ ಹೊರನಡೆದಿದ್ದರು.

                 (ಅಶೋಕ ಅರೋರಾ)

ಮೊದಲ ಹಿನ್ನಡೆ

1989ರಲ್ಲಿ ಕೆಎಸ್‌ಎ ಪತನ ಇನ್ಫೋಸಿಸ್‌ನ್ನು ಸಂಕಷ್ಟಕ್ಕೆ ತಳ್ಳಿತ್ತು. ಅರೋರಾ ಅದಾಗಲೇ ಕಂಪನಿಯನ್ನು ತೊರೆದಿದ್ದರು. ಇತರರಿಗೆ ತಾವೇನು ಮಾಡಬೇಕು ಎನ್ನುವುದು ತೋಚಿರಲಿಲ್ಲ.ಆಗ ರಂಗಪ್ರವೇಶ ಮಾಡಿದ್ದ ಮೂರ್ತಿ,‘‘ನೀವೆಲ್ಲರೂ ಕಂಪನಿಯನ್ನು ಬಿಡಬೇಕೆಂದು ಬಯಸಿದರೆ ಅದು ನಿಮ್ಮಿಷ್ಟ. ಆದರೆ ನಾನು ಮಾತ್ರ ಕಂಪನಿಗೆ ಅಂಟಿಕೊಂಡು ನಮ್ಮ ಕನಸನ್ನು ನನಸಾಗಿಸುತ್ತೇನೆ ’’ ಎಂದು ಘೋಷಿಸಿದ್ದರು. ನಿಲೇಕಣಿ, ಗೋಪಾಲಕೃಷ್ಣನ್, ಶಿಬುಲಾಲ್, ದಿನೇಶ್ ಮತ್ತು ರಾಘವನ್ ಅವರು ಮೂರ್ತಿಯವರೊಂದಿಗೆ ಒಟ್ಟಾಗಿಯೇ ಇರಲು ನಿರ್ಧರಿಸಿದ್ದರು ಮತ್ತು ಆಗಿನಿಂದಲೂ ಈ ಒಗ್ಗಟ್ಟು ಹಾಗೆಯೇ ಉಳಿದುಕೊಂಡು ಬಂದಿದೆ.

ಮೂರ್ತಿ ಸದಾ ಪಾಪರ್

ಪತ್ನಿ ಸುಧಾ ಮೂರ್ತಿಯವರು ಹೇಳುವಂತೆ ಮೂರ್ತಿಯವರ ಬಳಿ ಹಣವೇ ಇರುತ್ತಿರಲಿಲ್ಲ, ಯಾವಾಗಲೂ ಅವರು ಸುಧಾರ ಸಾಲದಲ್ಲಿಯೇ ಇದ್ದರು.

ಮೂರು ವರ್ಷಗಳವರೆಗೆ ಮೂರ್ತಿಯವರು ನನಗೆ ವಾಪಸ್ ಮಾಡಬೇಕಿದ್ದ ಸಾಲದ ಲೆಕ್ಕವನ್ನು ಬರೆದಿಡುತ್ತಿದ್ದೆ. ಆದರೆ ಅವರೆಂದೂ ಆ ಸಾಲವನ್ನು ತೀರಿಸಲೇ ಇಲ್ಲ. ಕೊನೆಗೆ ನಮ್ಮ ಮದುವೆಯ ಬಳಿಕ ಆ ಪುಸ್ತಕವನ್ನೇ ಹರಿದೆಸೆದಿದ್ದೆ. ಅವರು ನನ್ನಿಂದ ಪಡೆದಿದ್ದ ಹಣದ ಮೊತ್ತ 4,000 ರೂ.ಗಳನ್ನು ದಾಟಿತ್ತು ಎಂದು ಸುಧಾ ಮೂರ್ತಿ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

ಸಾರ್ವಜನಿಕ ಶೇರು ವಿತರಣೆ

1993ರಲ್ಲಿ ಇನ್ಫೋಸಿಸ್ ಮೊದಲ ಬಾರಿಗೆ ಸಾರ್ವಜನಿಕರಿಗೆ ಶೇರುಗಳನ್ನು ವಿತರಿಸಿತ್ತು. ಅದು ಆಗ ತನ್ನ ಹೆಸರನ್ನು ಇನ್ಫೋಸಿಸ್ ಟೆಕ್ನಾಲಜೀಸ್ ಎಂದು ಬದಲಿಸಿಕೊಂಡಿತ್ತು. ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ)ಗೆ ಪ್ರತಿ ಶೇರಿಗೆ 95ರೂ. ನಿಗದಿಗೊಳಿಸಲಾಗಿತ್ತು. 1994ರಲ್ಲಿ ಕಂಪನಿಯು ಪ್ರತಿ ಶೇರಿಗೆ 450 ರೂ.ನಂತೆ 5.50 ಲಕ್ಷ ಶೇರುಗಳನ್ನು ಸಾರ್ವಜನಿಕರಿಗೆ ವಿತರಿಸಿತ್ತು.

ನಾಸ್ಡಾಕ್ ಲಿಸ್ಟಿಂಗ್

1999ರಲ್ಲಿ ಇನ್ಫೋಸಿಸ್‌ನ ವಹಿವಾಟು 100 ಮಿಲಿಯ ಅಮೆರಿಕನ್ ಡಾಲರ್‌ಗಳಿಗೆ ತಲುಪಿತ್ತು ಮತ್ತು ಅದೇ ವರ್ಷ ಅಮೆರಿಕದ ಶೇರು ವಿನಿಮಯ ಕೇಂದ್ರ ನಾಸ್ಡಾಕ್‌ನಲ್ಲಿ ಲಿಸ್ಟ್ ಆದ ಮೊದಲ ಭಾರತೀಯ ಐಟಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

1999ರಲ್ಲಿ ಕಂಪನಿಯ ಶೇರಿನ ಬೆಲೆ 8,100 ರೂ.ಗೆ ಜಿಗಿದಿದ್ದು, ಅಂದಿನ ಕಾಲದ ಅತ್ಯಂತ ದುಬಾರಿ ಶೇರು ಆಗಿತ್ತು. ಆ ವೇಳೆಗೆ ಇನ್ಫೋಸಿಸ್ ನಾಸ್ಡಾಕ್‌ನಲ್ಲಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ 20 ಅತ್ಯಂತ ದೊಡ್ಡ ಕಂಪನಿಗಳಲ್ಲೊಂದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News